ದೇಶಾದಲ್ಲಿ ಮತ್ತೆ ಕರೋನಾ ಆರ್ಭಟ ಆರಂಭವಾಗಿದೆ ಎಂದು ಕಾಣಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಕೇರಳ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಪ್ರತಿ ದಿನ 500ಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.
ಮಂಗಳವಾರ ಒಟ್ಟು 519 ಹೊಸ ಪ್ರಕರಣಗಳು ಪತ್ತೆಯಾಗುವ ಜೊತೆಯಲ್ಲೇ ಮೂವರು ಸೋಂಕಿತರು ಸಾವನ್ನಪ್ಪಿದ್ದರು. ಬುಧವಾರ 514 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಮೂವರು ಸಾವನ್ನಪ್ಪಿದ್ದರು. ಸದ್ಯ ಕೇರಳದಲ್ಲಿ ಒಟ್ಟು 2,341 ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳು ಇವೆ ಎಂದು ಕೇರಳ ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.
ಬಿಪಿ, ಶುಗರ್, ಹೃದಯ, ಕಿಡ್ನಿ, ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರೇ ಹೆಚ್ಚಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಇನ್ನು ಆಸ್ಪತ್ರೆಗೆ ಸೇರುವವರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಎಲ್ಲಾ ವಯೋಮಾನದವರೂ ಆಸ್ಪತ್ರೆ ಸೇರುತ್ತಿದ್ದಾರೆ.

ಕೇರಳದ ಸ್ಥಿತಿಗತಿ ಕುರಿತಾಗಿ ಕೇಂದ್ರದ ಆರೋಗ್ಯ ಸಚಿವಾಲಯ ಕೂಡಾ ನಿಗಾ ವಹಿಸಿದೆ.
ಇತ್ತ ಕೇರಳ ಸಮೀಪದಲ್ಲಿ ಇರುವ ಮಂಗಳೂರು ಜಿಲ್ಲೆಯಲ್ಲೂ ಭಾರೀ ಆತಂಕ ಮೂಡಿದ್ದು, ಇಂದು ಕರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಅವರು ವಲಸೆ ಕಾರ್ಮಿಕ ಆಗಿದ್ದು, ಎರಡು ದಿನದ ಹಿಂದಷ್ಟೇ ಪಾಸಿಟಿವ್ ರಿಪೋರ್ಟ್ ಬಂದಿತ್ತು. ಉಸಿರಾಟದ ಸಮಸ್ಯೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.