ಉಗ್ರಗಾಮಿಗಳನ್ನು ಸದೆ ಬಡಿಯುತ್ತೇನೆ, ಒಂದು ತಲೆಗೆ ಹತ್ತು ತಲೆ ತರುತ್ತೇನೆ ಎಂದೆಲ್ಲಾ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಭಯೋತ್ಪಾದನೆ, ಸೈನಿಕ ಪ್ರಾಣ ಹಾನಿ ತೀವ್ರವಾಗಿ ಹೆಚ್ಚಿದೆ. ಅದರಲ್ಲೂ, ನೋಟು ಅಮಾನ್ಯೀಕರಣದ ಬಳಿಕ ಕಣೆವೆ ನಾಡಿನಲ್ಲಿ ಭಯೋತ್ಪಾದನೆ ನಿಂತಿದೆ ಎನ್ನುವ ಹಸಿ ಹಸಿ ಸುಳ್ಳುಗಳನ್ನೇ ಮೋದಿ ಹಾಗೂ ಅವರ ತಂಡ ಪ್ರಚಾರ ಮಾಡಿತ್ತು. ಆದರೆ, ಈ ಒಂದು ತಿಂಗಳಲ್ಲೇ ಭಯೋತ್ಪಾದಕರು ಹಾಡಹಗಲೇ ಕಾಶ್ಮೀರದ ಭದ್ರತಾ ಸಿಬ್ಬಂದಿಗಳನ್ನು ಗುರಿ ಮಾಡಿ ಬಲಿ ಪಡೆಯುತ್ತಿದ್ದಾರೆ.
ಶ್ರೀ ನಗರದ ಹೊರವಲಯದಲ್ಲಿರುವ ಸೌರಾದಲ್ಲಿ ಪೊಲೀಸ್ ಪೇದೆಯೊಬ್ಬರ ಮನೆಯ ಹೊರಗೆ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ, ಅವರ ಏಳು ವರ್ಷದ ಮಗಳು ಗಾಯಗೊಂಡಿದ್ದಾರೆ. ಇದು, ಈ ತಿಂಗಳು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಮೂರನೇ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಕಾನ್ಸ್ಟೆಬಲ್ ಸೈಫುಲ್ಲಾ ಖಾದ್ರಿ ಅವರು ತಮ್ಮ ಮಗಳಿಗೆ ಟ್ಯೂಷನ್ ಕಲಿಸಲು ಮನೆಯಿಂದ ಹೊರಟಾಗ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
“ಶ್ರೀನಗರ ಜಿಲ್ಲೆಯ ಅಂಚಾರ್ ಪ್ರದೇಶದ ಗನಿ ಮೊಹಲ್ಲಾದಲ್ಲಿರುವ ಕಾನ್ಸ್ಟೆಬಲ್ ಖಾದ್ರಿ ಅವರ ಮನೆಯ ಹೊರಗೆ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಖಾದ್ರಿ ಮತ್ತು ಅವರ ಏಳು ವರ್ಷದ ಮಗಳನ್ನು ಹತ್ತಿರದ SKIMS ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟರು. ಆದರೆ, ದಾಳಿಯಲ್ಲಿ ಬಾಲಕಿಯ ಬಲಗೈಗೆ ಗುಂಡು ತಗುಲಿದ್ದು, ಅಪಾಯದಿಂದ ಪಾರಾಗಿದ್ದಾಳೆ ” ಎಂದು ಅಧಿಕಾರಿ ಹೇಳಿದ್ದಾರೆ.
ಇದಕ್ಕೂ ಮೊದಲು ಮೇ 7 ರಂದು ಅಂಚಾರ್ ಪ್ರದೇಶದ ಬಳಿಯ ಐವಾ ಸೇತುವೆಯಲ್ಲಿ ಭಯೋತ್ಪಾದಕರು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದರೆ, ಮೇ 13 ರಂದು ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೋರ್ವ ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದರು.