
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಮುಕ್ತಾಯ ಆಗಿದೆ. ನ್ಯಾಯಾಲಯದ ಆದೇಶದಂತೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದ ಅಪಾರ ಪ್ರಮಾಣದ ಚಿನ್ನಾಭರಣ, ಜಮೀನು ಪತ್ರಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನ ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.

ಚಿನ್ನದ ಖಡ್ಗ, ಚಿನ್ನದ ಡಾಬು, ಚಿನ್ನದ ಕೈ ಗಡಿಯಾರ, ಚಿನ್ನದ ಪೆನ್, ಚಿನ್ನದ ಕಿರೀಟ, ಮಗು ತಾಯಿಯ ಪೆಂಡೆಂಟ್ ಸೇರಿದಂತೆ 27 ಕೆಜಿ ಚಿನ್ನಾಭರಣಗಳು, ವಜ್ರದ ವಸ್ತುಗಳು ಕೋಟ್ಯಂತರ ಮೌಲ್ಯದ 1,606 ವಸ್ತುಗಳನ್ನ ವಾಪಸ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಸರ್ಕಾರಿ ವಿಶೇಷ ಅಭಿಯೋಜಕ ಕಿರಣ್ ಜವಳಿ, ನ್ಯಾಯಾಲಯದ ಆದೇಶದಂತೆ ತಮಿಳುನಾಡು ವಿಜಿಲೆನ್ಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದ್ದೇವೆ.. ಒಟ್ಟು 27 ಕೆ.ಜಿ ಚಿನ್ನದ ವಿವಿಧ ವಸ್ತುಗಳನ್ನ ವಾಪಸ್ ನೀಡಲಾಗಿದೆ ಎಂದಿದ್ದಾರೆ.

ಈಗಾಗಲೇ ಬಸ್ ಒಂದನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಅಷ್ಟೇ ಅಲ್ಲದೆ ಸುಮಾರು 1,526 ಎಕರೆ ಜಾಗದ ಆಸ್ತಿ ಪತ್ರಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸಲಾಗಿದೆ.. ಸೀರೆಗಳು ಮತ್ತು ಚಪ್ಪಲಿಗಳನ್ನ ಈ ಹಿಂದೆಯೇ ಹಸ್ತಾಂತರ ಮಾಡಲಾಗಿತ್ತು. ತಮಿಳುನಾಡಿನ ವಿಜಿಲೆನ್ಸ್ ಟೀಂ ಸಿಟಿ ಸಿವಿಲ್ ಕೋರ್ಟ್ಗೆ ಅಗಮಿಸಿತ್ತು.. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಮಾಜಿ ಸಿಎಂ ಜಯಲಲಿತಾ ವಸ್ತುಗಳಿದ್ದ ಟ್ರಂಕ್ಗಳನ್ನ ಟೆಂಪೋಗೆ ತುಂಬಲಾಯ್ತ್ತು.. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಗರದಿಂದ ತಮಿಳುನಾಡಿಗೆ ಕೊಂಡೊಯ್ಯಲಾಯ್ತು..
7 ಕೆಜಿ 40 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜಿರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳನ್ನು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ದಂಡ ವಿಧಿಸಿ 2014ರ ಸೆಪ್ಟೆಂಬರ್ 27ರಂದು ಆದೇಶಿಸಿತ್ತು. ಜೊತೆಗೆ ಜಪ್ತಿ ಮಾಡಲಾದ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ ಅಥವಾ ಎಸ್‌ಬಿಐಗೆ ಹಸ್ತಾಂತರ ಮಾಡುವುದು ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು. ಇದೀಗ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಏನು ಮಾಡಬೇಕು ಎಂದು ತಮಿಳುನಾಡು ಸರ್ಕಾರ ನಿರ್ಧಾರ ಮಾಡಬೇಕಿದೆ.
