ಸಂಭಾಲ್ ;ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ಇತಿಹಾಸದ ಹೊಸ ಶೋಧಗಳು ಬೆಳಕಿಗೆ ಬರುತ್ತಿದ್ದು, ಜಿಲ್ಲೆಯ ಐತಿಹಾಸಿಕ ವೈಭವಕ್ಕೆ ಹೊಸ ಆಯಾಮ ಸೇರ್ಪಡೆಗೊಂಡಿದೆ. 46 ವರ್ಷಗಳ ನಂತರ ಪುನಃ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ ಮತ್ತು ಪ್ರಾಚೀನ ಮೆಟ್ಟಿಲು ಬಾವಿಯ ಪತ್ತೆ ಇತಿಹಾಸ ಪ್ರಿಯರ ಕುತೂಹಲ ಹೆಚ್ಚಿಸಿದೆ.
ಚಂದೌಸಿ ಪ್ರದೇಶದಲ್ಲಿ ಉತ್ಖನನದ ವೇಳೆ ಮೆಟ್ಟಿಲು ಬಾವಿಯೊಂದು ಪತ್ತೆಯಾಗಿದ್ದು, ಇದರ ಸುತ್ತಲೂ ನಾಲ್ಕು ಕೋಣೆಗಳಿರುವ ಪ್ರಾಚೀನ ರಚನೆಗಳು ಕಂಡುಬಂದಿವೆ. ಇವು 1857ರ ದಂಗೆಯ ಕಾಲದ್ದು ಎಂದು ನಂಬಲಾಗಿದೆ. ಸಹಸ್ಪುರದ ರಾಜಮನೆತನ ಈ ಬಾವಿಯನ್ನು ರಹಸ್ಯ ಕ್ಯಾಂಪಿಂಗ್ ತಾಣವಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸನಾತನ ಸೇವಕ ಸಂಘದ ಮನವಿಗೆ ಸ್ಪಂದಿಸಿ, ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಸ್ಥಳದಲ್ಲಿ ಉತ್ಖನನಕ್ಕೆ ಆದೇಶಿಸಿದರು. ಶನಿವಾರ ಎಡಿಎಂ ಸತೀಶ್ ಕುಮಾರ್ ಕುಶ್ವಾಹ ಮತ್ತು ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ತಮ್ಮ ತಂಡದೊಂದಿಗೆ ಎರಡು ಜೆಸಿಬಿ ಯಂತ್ರಗಳ ನೆರವಿನಿಂದ ಅಗೆಯುವ ಕಾರ್ಯ ಪ್ರಾರಂಭಿಸಿದರು. 45 ಗಂಟೆಗಳ ಕಠಿಣ ಶ್ರಮದ ನಂತರ, ಮೆಟ್ಟಿಲು ಬಾವಿಯ ಗೋಡೆಗಳು ಹಾಗೂ ಪ್ರಾಚೀನ ರಚನೆಗಳು ಪತ್ತೆ ಆಗಿವೆ.
ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ಅವರ ಪ್ರಕಾರ, ಈ ಪ್ರದೇಶವು ಗಟಾ ಸಂಖ್ಯೆ 253 ಅಡಿಯಲ್ಲಿ ನೋಂದಾಯಿತವಾಗಿದ್ದು, ಹಳೆಯ ಕೊಳ ಹಾಗೂ ಹಲವಾರು ಕೊಠಡಿಗಳನ್ನು ಒಳಗೊಂಡಿದೆ. ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಇದು 1857ರ ದಂಗೆಯ ಕಾಲದಲ್ಲಿ ಪ್ರಮುಖ ತಾಣವಾಗಿತ್ತು. ನಾಲ್ಕು ಕೋಣೆಗಳು ಹಾಗೂ ಮೆಟ್ಟಿಲು ಬಾವಿಯ ಪತ್ತೆಯ ನಂತರ, ಉಳಿದ ಭಾಗಗಳನ್ನು ಪರಿಶೀಲಿಸಲು ಉತ್ಖನನ ಮುಂದುವರಿಯುತ್ತಿದೆ. ಈ ಕಾರ್ಯಕ್ಕೆ ಸ್ಥಳೀಯ ಆಡಳಿತ ಮತ್ತು ಪುರಸಭೆ ಸಹಕಾರ ನೀಡುತ್ತಿದ್ದು, ಇತಿಹಾಸ ಪ್ರೇಮಿಗಳು ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದಾರೆ.