ಮನೆಗೊಂದು ಮಗು ಸಾಕು ಎನ್ನುವ ಕಾಲಘಟ್ಟದಿಂದ ಮತ್ತಷ್ಟು ಈಚೆ ಸರಿದಿರುವ ಸಮಾಜದಲ್ಲಿ ಮಕ್ಕಳನ್ನು ಹೊಂದುವುದು ಅನಿವಾರ್ಯವಲ್ಲ, ನಮ್ಮ ಖುಶಿಗಾಗಿ, ವಯಸ್ಸಾದಾಗ ಆಸರೆಗಿರಲಿ ಎನ್ನುವ ಸ್ವಾರ್ಥಕ್ಕಾಗಿ ಮಕ್ಕಳು ಮಾಡಿಕೊಳ್ಳುವುದು ತಪ್ಪು ಎನ್ನುವ ಅಭಿಪ್ರಾಯಗಳು ಬಲವಾಗುತ್ತಿರುವ ನಡುವೆಯೇ, ಒಬ್ಬ ಮಹಿಳೆ ತನ್ನ ಜೀವನದಲ್ಲಿ ಹೊಂದುವ ಮಕ್ಕಳ ಸರಾಸರಿ ಸಂಖ್ಯೆಯಾದ ಒಟ್ಟು ಫಲವತ್ತತೆ ದರ (TFR) ರಾಷ್ಟ್ರೀಯ ಕುಸಿತಕ್ಕಿಂತಲೂ ವೇಗವಾಗಿ ಕರ್ನಾಟಕದಲ್ಲಿ ಕುಸಿಯುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 5 (NFHS-5) ಹೇಳಿದೆ.
1992-93ರಲ್ಲಿ ದೇಶದ TFR 3.4 ಇದ್ದಾಗ ಕರ್ನಾಟಕದ್ದು 2.65 ಆಗಿತ್ತು. ಹದಿಮೂರು ವರ್ಷಗಳ ನಂತರ 2005-06 ರಲ್ಲಿ ರಾಜ್ಯದ TFR ಮತ್ತಷ್ಟು ಕೆಳಕ್ಕೆ ಇಳಿದು 2.1. ಆಗಿತ್ತು. 2015-16 ರಲ್ಲಿ 1.8 ಮತ್ತು ಇತ್ತೀಚೆಗೆ ಬಿಡುಗಡೆಯಾದ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22 ರಲ್ಲಿ ಮಾಡಿದ ಅವಲೋಕನಗಳ ಪ್ರಕಾರ, 2019-21 ರಲ್ಲಿ ಇದು 1.7 ಕ್ಕೆ ಇಳಿದಿದೆ.
ಹೆಚ್ಚುತ್ತಿರುವ ಜನನ ಮತ್ತು ಮರಣಗಳ ನೋಂದಣಿಯ ಶೇಕಡಾವಾರು ಪ್ರಮಾಣದೊಂದಿಗೆ, ಭಾರತದಲ್ಲಿ ಫಲವತ್ತತೆಯ ಕುಸಿತವು ಸ್ಥಿರವಾಗಿದೆ. ಸಮೀಕ್ಷೆಯ ಡಾಟಾವು ಕಳೆದ ಐದು ವರ್ಷಗಳಲ್ಲಿ ಅಂದಾಜು ಜನನಗಳು ಮತ್ತು ಶಿಶು ಮರಣಗಳ ಸಂಖ್ಯೆ ಕುಂಠಿತವಾಗಿದೆ ಮತ್ತು ಪ್ರಾಯಶಃ ಕ್ಷೀಣಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಅಲ್ಲದೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.
ಕರ್ನಾಟಕದಲ್ಲಿ, 2019-21 ರಲ್ಲಿ 1.7 ಕ್ಕೆ ಇಳಿದಿರುವ ಫಲವತ್ತತೆಗೆ ಅನುಗುಣವಾಗಿ ಒಟ್ಟು ಜನನಗಳ ಸಂಖ್ಯೆಯು ಕಡಿಮೆಯಾಗುತ್ತಿದೆ ಮತ್ತು 2030 ರ ವೇಳೆಗೆ ಬಹುಶಃ 1.5.ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಾವಿನ ಸಂಖ್ಯೆಯು ಸಾಕಷ್ಟು ನಾಟಕೀಯವಾಗಿ ಹೆಚ್ಚುತ್ತಿದೆ ಎಂಬುದು ಗಮನಾರ್ಹವಾಗಿದೆ. ಪ್ರತಿ ವರ್ಷ ಅಂದಾಜು ಜನನಗಳು 1% ಕಡಿಮೆಯಾದರೆ , 2030 ರಲ್ಲಿ, ಜನನಗಳ ಸಂಖ್ಯೆ 10.2 ಲಕ್ಷ ಆಗಬಹುದು. ಆದಾಗ್ಯೂ, ಸಾವಿನ ವಾರ್ಷಿಕ ಬೆಳವಣಿಗೆಯ ದರ (CAGR) ಸುಮಾರು 7% ಆಗಿದೆ, ಅಂದರೆ 2030 ರಲ್ಲಿ ಸಾವಿನ ಸಂಖ್ಯೆ 12 ಲಕ್ಷಕ್ಕೆ ಸಮೀಪದಲ್ಲಿರಲಿದೆ. ಇದು ಜನನಗಳ ಸಂಖ್ಯೆಯನ್ನು ಮೀರಿಸುತ್ತಿದ್ದು ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗುತ್ತದೆ. ರಾಜ್ಯದ ಜನಸಂಖ್ಯಾ ಪ್ರೊಫೈಲ್ ರಚಿಸಲು ವಿವರವಾದ ವಿಶ್ಲೇಷಣೆಯ ಅಗತ್ಯವಿದ್ದು ವಿಶ್ಲೇಷಣೆ ಮಾತ್ರ ಉದ್ದೇಶಿತ ನೀತಿಗಳನ್ನು ಮೌಲ್ಯಮಾಪನ ಮಾಡಬಲ್ಲುದು ಎಂದು ಸಮೀಕ್ಷೆ ಹೇಳಿದೆ.
ಭಾರತದ TFR ಮೂರು ದಶಕಗಳಲ್ಲಿ ಕುಸಿದಿದೆ ಮತ್ತು ಭಾರತೀಯ ಜನಸಂಖ್ಯೆಯು ಅಧಿಕೃತ ರಿಪ್ಲೇಸ್ಮೆಂಟ್ ದರಕ್ಕಿಂತ (ಜನಸಂಖ್ಯೆಯು ತನ್ನನ್ನು ತಾನು ಬದಲಿಸಿಕೊಳ್ಳುವ ದರ)ಕೆಳಗಿದೆ. ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ರಿಪ್ಲೇಸ್ಮೆಂಟ್ ದರವನ್ನು 2.3 ಕ್ಕೆ ನಿಗದಿಪಡಿಸಲಾಗಿದ್ದರೆ ಅಭಿವೃದ್ಧಿ ಹೊಂದಿದ ಪ್ರಪಂಚಕ್ಕೆ 2.1ಕ್ಕೆ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 5 (NFHS-5) ಪ್ರಕಾರ,ಭಾರತದ ಇತ್ತೀಚಿನ TFR 2.0. ಅಂದರೆ ನಮ್ಮ TFR ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ಇದೆ.
ಮುಂಬೈನ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ನ ಕುಟುಂಬ ಮತ್ತು ತಲೆಮಾರುಗಳ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಟಿ.ವಿ.ಶೇಖರ್ ಈ ಬಗ್ಗೆ ಮಾತನಾಡಿ, “ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ರಿಪ್ಲೇಸ್ಮೆಂಟ್ನ ಮುಂದುವರಿದ ಹಂತದಲ್ಲಿವೆ, ಆದರೆ ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಲವಾರು ರಾಜ್ಯಗಳು ಇನ್ನೂ ಹಿಂದುಳಿದಿವೆ. TFR ಕುಸಿಯುತ್ತಿರುವುದರಿಂದ ಫಲವತ್ತತೆಯನ್ನು ತಗ್ಗಿಸಲು ನಮಗೆ ಯಾವುದೇ ನೀತಿ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಸಾಮಾಜಿಕ ಭದ್ರತಾ ಕಾಳಜಿಗಳು
ಒಂದೆರಡು ದಶಕಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆಯು ಬಹುಪಟ್ಟು ಹೆಚ್ಚಾಗಲಿದೆ ಮತ್ತು ಸಾಮಾಜಿಕ ಭದ್ರತೆ ಅತ್ಯಗತ್ಯ ಎಂದು ಸೂಚಿಸಿದ ಡಾ. ಶೇಖರ್ “ನಾವು ಹೆಚ್ಚು ಕೌಶಲ್ಯ ಮತ್ತು ಉತ್ಪಾದಕ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಿದರೆ ಭಾರತದ ಜನಸಂಖ್ಯೆಯನ್ನು ಸಂಪನ್ಮೂಲವನ್ನಾಗಿಸಬಹುದು. ಆರ್ಥಿಕ ಆವೇಗವನ್ನು ಮುಂದುವರಿಸಲು ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು” ಎನ್ನುತ್ತಾರೆ.
“ಹಲವು ನಗರ ಪ್ರದೇಶಗಳಲ್ಲಿ, ಯಾವುದೇ ಪ್ರೋತ್ಸಾಹ ಅಥವಾ ನಿಯಮಗಳಿಲ್ಲದೆ ಜನರು ಒಂದೇ ಮಗುವಿನ ನೀತಿಯನ್ನು ಅನುಸರಿಸುತ್ತಿದ್ದಾರೆ. ಒಂದು ಮಗುವನ್ನು ಹೊಂದುವುದು ಮತ್ತು ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಎಲ್ಲರಲ್ಲಿರುವ ಸಾಮಾನ್ಯ ಭಾವನೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಪೋಷಕರಿಬ್ಬರೂ ಉದ್ಯೋಗ ಮಾಡುತ್ತಿರುವುದೇ ಹೊರತು ಆರ್ಥಿಕ ಕಾರಣಗಳಿಂದಲ್ಲ” ಎಂದು ಅವರು ವಿವರಿಸುತ್ತಾರೆ.
ಪ್ರಗತಿಶೀಲ ರಾಜ್ಯಗಳು
ಕೇರಳ, ತೆಲಂಗಾಣ ಮತ್ತು ತಮಿಳುನಾಡಿನಂತಹ ಇತರ ಪ್ರಗತಿಪರ ರಾಜ್ಯಗಳಲ್ಲಿನ ಪ್ರವೃತ್ತಿಯನ್ನು ಕರ್ನಾಟಕದ 1.7 ರ ಟಿಎಫ್ಆರ್ ನಿಕಟವಾಗಿ ಅನುಸರಿಸುತ್ತಿದೆ ಎಂದಿರುವ ರಾಷ್ಟ್ರೀಯ ಆರೋಗ್ಯ ಮಿಷನ್ನ ಸಾರ್ವಜನಿಕ ಆರೋಗ್ಯ ಸಲಹೆಗಾರ ಮತ್ತು ಸ್ವತಂತ್ರ ಮಾನಿಟರ್ ಕೆ.ಆರ್ ಆಂಟೋನಿ “ರಿಪ್ಲೇಸ್ಮೆಂಟ್ ಜನಸಂಖ್ಯೆಯ ಮಟ್ಟವನ್ನು ತಲುಪುವವರೆಗೆ ಕುಸಿಯುತ್ತಿರುವ TFR ಸ್ವಾಗತಾರ್ಹ ವಿಚಾರವಾಗಿದೆ. ಜನಸಂಖ್ಯಾ ಸ್ಥಿರೀಕರಣವು ಪ್ರಗತಿಪರ ರಾಜ್ಯದ ಸಂಕೇತವಾಗಿದೆ” ಎಂದಿದ್ದಾರೆ.
“TFR ನಲ್ಲಿನ ಕಡಿತಕ್ಕೆ ಹೆಚ್ಚಾಗಿ ಮಹಿಳೆಯರ ಬದಲಾಗುತ್ತಿರುವ ಸಾಮಾಜಿಕ ಪಾತ್ರಗಳು, ಮಹಿಳಾ ಶಿಕ್ಷಣದ ವಿಸ್ತರಣೆ, ಉದ್ಯೋಗ ಬದಲಾವಣೆಗಳು, ಹೆಚ್ಚಿನ ಮಹಿಳೆಯರು ಸಂಬಳದ ಉದ್ಯೋಗಗಳಿಗೆ ಪ್ರವೇಶಿಸುವುದು, ಸಂತಾನೋತ್ಪತ್ತಿ ಆರೋಗ್ಯದಲ್ಲಿನ ಪ್ರಗತಿಗಳು, ಮಕ್ಕಳ ಮರಣ ಪ್ರಮಾಣ ಮತ್ತು ಮಕ್ಕಳ ಬದುಕುಳಿಯುವಿಕೆಯ ಭರವಸೆ ಕಾರಣವಾಗಿದೆ” ಎನ್ನುತ್ತಾರೆ ಅವರು.