ಕರೋನಾ ಮೂರನೇ ಅಲೆಯ ನಡುವೆಯೇ ಮಲೆನಾಡಿನಲ್ಲಿ ಮಂಗನಕಾಯಿಲೆ(ಕೆಎಫ್ ಡಿ) ಉಲ್ಬಣಗೊಂಡಿದ್ದು, ಕಳೆದ ಹದಿನೈದು ದಿನಗಳಲ್ಲೇ ಎರಡು ಪ್ರಕರಣಗಳು ಧೃಢಪಟ್ಟಿದ್ದು ಮಲೆನಾಡಿನಲ್ಲಿ ಆತಂಕ ಮೂಡಿಸಿದೆ.
ಎರಡು ವರ್ಷಗಳ ಹಿಂದೆ ಭಾರೀ ಸಾವು ನೋವಿನ ಕಾರಣಕ್ಕೆ ಸದ್ದು ಮಾಡಿದ್ದ ಸಾಗರ ತಾಲೂಕಿನ ಅರಳಗೋಡು ಪಂಚಾಯ್ತಿ ಮತ್ತು ತೀರ್ಥಹಳ್ಳಿ ತಾಲೂಕಿನ ಮಾಳೂರು ವ್ಯಾಪ್ತಿಯಲ್ಲಿ ಕೆಎಫ್ ಡಿ ಮತ್ತೆ ಆತಂಕ ಮೂಡಿಸಿದೆ. ಕಳೆದ ಡಿಸೆಂಬರಿನಲ್ಲಿ ಅರಳಗೋಡು ಭಾಗದಲ್ಲಿ ಕೆಎಫ್ ಡಿ ವೈರಸ್ ವಾಹಕ ಉಣುಗುಗಳಲ್ಲಿ ವೈರಸ್ ಪತ್ತೆಯಾಗಿತ್ತು. ಬಳಿಕ ಜನವರಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಮಂಗನ ಕಾಯಿಲೆ ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಮಂಗನಕಾಯಿಲೆಯ ಆತಂಕ ಮತ್ತೆ ಜನರ ನಿದ್ದೆಗೆಡಿಸಿದೆ.
ಆದರೆ, ಮಲೆನಾಡಿನ ಜನತೆ ಅದಕ್ಕಿಂತ ಆತಂಕಪಡುವ ಸಂಗತಿ ಮತ್ತೊಂದಿದೆ. ಕರೋನಾ, ಮಂಗನಕಾಯಿಲೆಗಳು ಒಂದರ ಮೇಲೊಂದರಂತೆ ಪೈಪೋಟಿಯ ಮೇಲೆ ಜನರ ಜೀವ ಹರಣಕ್ಕೆ ಯತ್ನಿಸುತ್ತಿರುವ ಹೊತ್ತಿಗೇ ಕೆಎಫ್ ಡಿ ವೈರಸ್ ವಿರುದ್ಧ ಹೋರಾಡಿ ಜೀವ ಉಳಿಸಿಕೊಳ್ಳಲು ಇರುವ ಏಕೈಕ ಅಸ್ತ್ರ ವ್ಯಾಕ್ಸಿನ್ ಸರಬರಾಜೇ ನಿಂತುಹೋಗಿದೆ! ಜನವರಿ 31ಕ್ಕೆ ಹಾಲಿ ಸ್ಟಾಕ್ ಇರುವ 12 ಸಾವಿರ ವ್ಯಾಕ್ಸಿನ್ ಗಳ ವಾಯಿದೆ ಮುಗಿದಿದ್ದು, ಕೆಎಫ್ ಡಿ ಬಾಧೆ ವ್ಯಾಪ್ತಿಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಿದ್ದ ಸ್ಟಾಕ್ ಪೈಕಿ ಉಳಿಕೆ ಲಸಿಕೆಯೂ ಸೇರಿದಂತೆ ಸುಮಾರು 25 ಸಾವಿರಕ್ಕೂ ಅಧಿಕ ವ್ಯಾಕ್ಸಿನ್ ವಾಯಿದೆ(ಎಕ್ಸ್ ಪರಿ) ಮುಗಿದು ಹೋಗಿದೆ.
ಹಾಗಾಗಿ ಫೆಬ್ರವರಿ ಒಂದನೇ ತಾರೀಖಿನಿಂದಲೇ ಕೆಎಫ್ ಡಿ ಎಪಿಸೆಂಟರ್ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಕೆಎಫ್ ಡಿ ಪೀಡಿತ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಎಫ್ ಡಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಸ್ಥಗಿತವಾಗಿದೆ! ಇದರಿಂದಾಗಿ ಕೆಎಫ್ ಡಿ ಪೀಡಿತ ಪ್ರದೇಶಗಳ ಸುಮಾರು ಮೂರೂವರೆ ಲಕ್ಷ ಜನರ ಜೀವ ಅಪಾಯದಲ್ಲಿದೆ!
ಸದ್ಯ ಕೆಎಫ್ ಡಿ ವೈರಸ್ ಪತ್ತೆಯಾಗಿರುವ ಮತ್ತು ಪ್ರಕರಣಗಳೂ ದೃಢಪಟ್ಟಿರುವ ಸಾಗರ ತಾಲೂಕಿನ ಅರಳಗೋಡು ಮತ್ತು ತೀರ್ಥಹಳ್ಳಿ ತಾಲೂಕಿನ ಮಾಳೂರು ವ್ಯಾಪ್ತಿಯಲ್ಲೇ ವ್ಯಾಕ್ಸಿನ್ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಪಡೆಯಲು ಕಾದಿರುವ ಜನರಿಗೆ ಆತಂಕ ಶುರುವಾಗಿದೆ. ಸ್ಥಳೀಯ ಪ್ರಾಥಮಿಕ ಕೇಂದ್ರದ ಆರೋಗ್ಯ ಸಿಬ್ಬಂದಿ ‘ವ್ಯಾಕ್ಸಿನ್ ಖಾಲಿಯಾಗಿದೆ. ವ್ಯಾಕ್ತಿನ್ ಬಂದಾಗ ನೀಡುತ್ತೇವೆ’ ಎಂದು ವ್ಯಾಕ್ತಿನ್ ಕೇಳಿಬರುವವರಿಗೆ ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಈಗಾಗಲೇ ಎರಡನೇ ಡೋಸ್ ಅವಧಿ ಮುಗಿದಿರುವ ಮತ್ತು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕಾದವರು ಸಕಾಲದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಹೋದಲ್ಲಿ ತೆಗೆದುಕೊಂಡು ಹಿಂದಿನ ಡೋಸ್ ಕೂಡ ವ್ಯರ್ಥವಾಗುವುದು ಎಂಬುದು ಆ ಭಾಗದ ಜನರ ಆತಂಕ.
ಈ ಮಾಹಿತಿ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’, ಮಾಳೂರು ಆರೋಗ್ಯಾಧಿಕಾರಿ ಶಿವಶಂಕರ್ ಅವರನ್ನು ಸಂಪರ್ಕಿಸಿದಾಗ, “ಜನವರಿ 31ಕ್ಕೆ ವ್ಯಾಕ್ಸಿನ್ ನೀಡುವುದನ್ನು ನಿಲ್ಲಿಸಿದ್ದೇವೆ. ಸರಬರಾಜಾಗಿದ್ದ ವ್ಯಾಕ್ತಿನ್ ಅವಧಿ ಅಂದಿಗೆ ಮುಕ್ತಾಯವಾಗಿ ಎಕ್ಸಪರಿಯಾದ ಹಿನ್ನೆಲೆಯಲ್ಲಿ ಸದ್ಯ ನಾಲ್ಕು ದಿನಗಳಿಂದ ಯಾವುದೇ ಕೆಎಫ್ ಡಿ ವ್ಯಾಕ್ಸಿನ್ ನೀಡುತ್ತಿಲ್ಲ. ಹೊಸ ಬ್ಯಾಚ್ ವ್ಯಾಕ್ಸಿನ್ ಬರುವವರೆಗೆ ಜನ ಕಾಯಲೇಬೇಕು. ನಾವು ಅಸಹಾಯಕರು” ಎಂದು ಮಾಹಿತಿಯನ್ನು ಖಚಿತಪಡಿಸಿದರು.
ಈ ಬಗ್ಗೆ ಕೇಳಿದಾಗ ತೀರ್ಥಹಳ್ಳಿಯ ತಾಲೂಕು ವೈದ್ಯಾಧಿಕಾರಿ ಡಾ ನಟರಾಜ್ ಕೂಡ, “ಕಳೆದ ನಾಲ್ಕು ದಿನಗಳಿಂದ ವ್ಯಾಕ್ಸಿನ್ ನೀಡುತ್ತಿಲ್ಲ. ಶಿವಮೊಗ್ಗದಿಂದ ವ್ಯಾಕ್ಸಿನ್ ಸರಬರಾಜಾಗಿಲ್ಲ. ವ್ಯಾಕ್ಸಿನ್ ಬಂದ ನಂತರ ವ್ಯಾಕ್ಸಿನೇಷನ್ ಮತ್ತೆ ಆರಂಭಿಸಲಾಗುವುದು” ಎಂದು ದೃಢಪಡಿಸಿದರು.
ಆದರೆ, ಈ ಕುರಿತು ‘ಪ್ರತಿಧ್ವನಿ’ ಶಿವಮೊಗ್ಗ ಡಿಎಚ್ ಒ ಡಾ ರಾಜೇಶ್ ಸುರಗಿಹಳ್ಳಿ ಅವರನ್ನು ಸಂಪರ್ಕಿಸಿದಾಗ, ಆರಂಭದಲ್ಲಿ “ವ್ಯಾಕ್ಸಿನ್ ಯಥಾ ಪ್ರಕಾರ ನೀಡುತ್ತಿದ್ದೇವೆ, ಕೆಎಫ್ ಡಿ ಪ್ರದೇಶಗಳಲ್ಲಿ ಯಶಸ್ವಿಯಾಗಿ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಈಗಾಗಲೇ ಶೇ.90ರಷ್ಟು ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ” ಎಂದರು. ಆದರೆ, ಮಾಳೂರು ಮತ್ತು ಅರಳಗೋಡು ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ನಾಲ್ಕು ದಿನಗಳಿಂದ ವ್ಯಾಕ್ಸಿನೇಷನ್ ಸ್ಥಗಿತವಾಗಿರುವುದು ಮತ್ತು ಇರುವ ವ್ಯಾಕ್ಸಿನ್ ಅವಧಿ ಮುಗಿದಿರುವ ಬಗ್ಗೆ ಗಮನ ಸೆಳೆದಾಗ, “ಹೌದಾ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ನಿಮಗೆ ತಿಳಿಸುತ್ತೇವೆ” ಎಂದರು. ಆ ಬಳಿಕ ಹಲವು ಬಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಯತ್ನ ಮಾಡಿದರೂ, ಅವರು ಕರೆ ಸ್ವೀಕರಿಸಲೇ ಇಲ್ಲ!
ಕೆಎಫ್ ಡಿ ವ್ಯಾಕ್ಸಿನ್ ಮೊದಲ ಡೋಸ್ ಪಡೆದ ಸರಿಯಾಗಿ ಮೂವತ್ತನೇ ದಿನಕ್ಕೆ ಎರಡನೇ ಡೋಸ್ ಪಡೆಯಬೇಕು. ಆ ಬಳಿಕ 6ರಿಂದ 9 ತಿಂಗಳ ನಡುವೆ ಬೂಸ್ಟರ್ ಡೋಸ್ ಪಡೆಯಬೇಕು. ಹಾಗಾಗಿ, ನಿಗಧಿತ ಅವಧಿಯಲ್ಲಿ ವ್ಯಾಕ್ಸಿನ್ ಲಭ್ಯವಿಲ್ಲದೇ ಇದ್ದಲ್ಲಿ ಮೊದಲ ಡೋಸ್ ಪಡೆದೂ ಪ್ರಯೋಜನವಿಲ್ಲದಂತಾಗುತ್ತದೆ ಎಂಬುದು ಜನರ ಆತಂಕಕ್ಕೆ ಕಾರಣ.
ಅದೇ ಹಿನ್ನೆಲೆಯಲ್ಲಿಯೇ ಕೆಎಫ್ ಡಿ ಪೀಡಿತ ಪ್ರದೇಶ ತುಮರಿಯ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮತ್ತು ಸಾಮಾಜಿಕ ಹೋರಾಟಗಾರ ಜಿ ಟಿ ಸತ್ಯನಾರಾಯಣ, “ಸರ್ಕಾರ ಕೆಎಫ್ ಡಿಯಂತಹ ಅಪಾಯಕಾರಿ ಸಾಂಕ್ರಾಮಿಕದ ವಿಷಯದಲ್ಲಿ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದು ಉದಾಹರಣೆ. ಜಿಲ್ಲೆಯಲ್ಲಿ ಎಷ್ಟು ಡೋಸ್ ಅಗತ್ಯವಿದೆ. ಎಷ್ಟು ಡೋಸ್ ಲಭ್ಯವಿದೆ ಮತ್ತು ಲಭ್ಯವಿರುವ ಡೋಸ್ ವಾಯಿದೆ ಎಷ್ಟು? ಎಂಬ ಕನಿಷ್ಟ ಮಾಹಿತಿಯೂ ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳಿಗೆ ಇರುವುದಿಲ್ಲ ಎಂದಾದರೆ, ಜನರ ಜೀವದ ಬಗ್ಗೆ ಅವರಿಗಿರುವ ಕಾಳಜಿ ಎಂಥದ್ದು ಎಂಬುದು ಗೊತ್ತಾಗುತ್ತದೆ. ನಾಲ್ಕು ದಿನಗಳಿಂದ ಯಾವುದೇ ವ್ಯಕ್ತಿಗೂ ವ್ಯಾಕ್ಸಿನ್ ನೀಡಿಲ್ಲ. ಸ್ಥಳೀಯ ವೈದ್ಯರು ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಜನ ಏನು ಮಾಡಬೇಕು? ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜಿಲ್ಲಾಡಳಿತದ ಇಂತಹ ನಿರ್ಲಕ್ಷ್ಯದಿಂದಾಗಿಯೇ ಎರಡು ವರ್ಷದ ಹಿಂದೆ ನಮ್ಮ ಮಲೆನಾಡಿನ 26 ಮಂದಿ ಜೀವ ಕಳೆದುಕೊಂಡರು. ಮನೆತನಗಳೇ ಸರ್ವನಾಶವಾದವು. ಅಧಿಕಾರಿಗಳ ಇಂತಹ ಹೊಣೆಗೇಡಿತನಕ್ಕೆ ಮೊದಲು ವ್ಯಾಕ್ಸಿನ್ ಕೊಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೌದು, ಕಳೆದ ಜನವರಿ ಮೊದಲ ವಾರ ಜಿಲ್ಲೆಗೆ ಬಂದಿದ್ದ ಸುಮಾರು 50 ಸಾವಿರ ಲಸಿಕೆಯ ವಾಯಿದೆ ಜನವರಿ 31ಕ್ಕೆ ಮುಗಿಯಲಿದೆ. ಅದರ ಮಾರನೇ ದಿನದಿಂದಲೇ ಬಾಕಿ ಇರುವವರಿಗೆ ಲಸಿಕೆ ನೀಡಲು ಲಸಿಕೆ ಇಲ್ಲ ಎಂಬುದು ಗೊತ್ತಿದ್ದರೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಯಾಕೆ ಕಣ್ಣುಮುಚ್ಚಿ ಕುಳಿತಿದ್ದರು? ಹೊಸ ಬ್ಯಾಚ್ ಲಸಿಕೆಯನ್ನು ಸಕಾಲದಲ್ಲಿ ಸಿದ್ಧಗೊಳಿಸಲು ಯಾಕೆ ಗಮನ ಕೊಡಲಿಲ್ಲ? ಎಂಬುದು ಈಗ ಎದ್ದಿರುವ ಪ್ರಶ್ನೆ.
ಅದೇ ಹೊತ್ತಿಗೆ, ಈಗ ನೀಡುತ್ತಿರುವ ವ್ಯಾಕ್ಸಿನ್ ಕಾರ್ಯಕ್ಷಮತೆಯ ಬಗ್ಗೆಯೂ ಹಲವು ಅನುಮಾನಗಳಿವೆ. ಸ್ವತಃ ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧಾನಾ ಸಂಸ್ಥೆ(ಎನ್ ಐವಿ)ಯೇ ನಡೆಸಿದ ಹಲವು ಸಂಶೋಧನೆಗಳ ಬಳಿಕ, ಹಾಲಿ ಬಳಕೆ ಮಾಡುತ್ತಿರುವ ಲಸಿಕೆ ನಲವತ್ತು ವರ್ಷ ಹಳೆಯದು. ಈ ನಲವತ್ತು ವರ್ಷಗಳಲ್ಲಿ ವೈರಸ್ ಸಾಕಷ್ಟು ಬದಲಾಗಿರುತ್ತದೆ. ರೂಪಾಂತರಗೊಂಡಿರುತ್ತದೆ. ಹಾಗಾಗಿ ಹಳೆಯ ವೈರಸ್ ಸ್ಟ್ರೈನ್ ಬಳಸಿ ತಯಾರಿಸಿರುವ ಈ ಲಸಿಕೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಐಸಿಎಂಆರ್ ಕೂಡ ಕೆಎಫ್ ಡಿ ಲಸಿಕೆಯ ಕುರಿತು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆದಾಗ್ಯೂ ಸವಕಲಾಗಿರುವ ವೈರಸ್ ಸ್ಟ್ರೈನ್ ಬಳಸಿಯೇ ಈಗಲೂ ಹೊಸ ವ್ಯಾಕ್ಸಿನ್ ತಯಾರಿಸಲಾಗುತ್ತಿದೆ. ಆ ನಡುವೆಯೂ ಸಕಾಲದಲ್ಲಿ ವ್ಯಾಕ್ಸಿನ್ ತಯಾರಿಸಿ ಸರಬರಾಜು ಮಾಡುವಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಒಂದು ಕಡೆಯಾದರೆ, ಅಗತ್ಯ ಲಸಿಕೆಗೆ ಸಕಾಲದಲ್ಲಿ ಬೇಡಿಕೆ ಸಲ್ಲಿಸಿ ಸಜ್ಜುಗೊಳಿಸಿ ಇಟ್ಟುಕೊಳ್ಳುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ನಿಷ್ಕಾಳಜಿ ಮತ್ತೊಂದು ಕಡೆ.
ಹಾಗಾಗಿ ಮಲೆನಾಡು ಜನರ ಜೀವ ಇದೀಗ ಮತ್ತೆ ಅಪಾಯಕ್ಕೆ ಸಿಲುಕಿದೆ. ಒಂದು ರೀತಿಯಲ್ಲಿ ಕರೋನಾ ಮತ್ತು ಕೆಎಫ್ ಡಿ ನಡುವೆ ಸಿಲುಕಿರುವ ಮಲೆನಾಡಿಗರು ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿಯಲ್ಲಿರುವಾಗ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನ ಅವರನ್ನು ಮತ್ತೊಂದು ಸಂಕಷ್ಟಕ್ಕೆ ತಳ್ಳುತ್ತಿದೆ!