ಬೆಂಗಳೂರು : ಕರ್ನಾಟಕದ ವಿಚಾರದಲ್ಲಿ ಯಾವುದೇ ಕೇಂದ್ರ ಸರ್ಕಾರಗಳು ಸದಾ ಇಬ್ಬಗೆಯ ನೀತಿ ಅನುಸರಿಸುತ್ತಲೇ ಬಂದಿವೆ. ಕರ್ನಾಟಕವೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿರದ್ದರೂ ಕೇಂದ್ರ ಸರ್ಕಾರ ಮಾತ್ರ ನಮಗೆ ಕರ್ನಾಟಕ(Karnataka) ಲೆಕ್ಕಕ್ಕೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವೇ ಆಗುತ್ತಿದ್ದು, ಇದೀಗ ಗಣರಾಜ್ಯೋತ್ಸವ(Republic Day) ಪ್ರತಿಯೊಬ್ಬ ಭಾರತೀಯನ ರಾಷ್ಟ್ರೀಯ ಹಬ್ಬ, ಇದರಲ್ಲೂ ಕನ್ನಡಿಗರಿಗೆ ಅವಮಾನ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಯಿತಾ ಎಂಬ ಪ್ರಶ್ನೆ ಮೂಡುತ್ತಿದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಹತ್ತಾರು ಬಾರಿ ತನ್ನ ಸಂಸ್ಕೃತಿ ಹಾಗೂ ಪರಂಪರೆ ಪ್ರದರ್ಶಿಸಿಸುತ್ತಿದ್ದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಲಭ್ಯವಾಗಿಲ್ಲ. ‘ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಇದರಿಂದ ರಾಜ್ಯದಲ್ಲಿ ಕೇಂದ್ರದ ನಡೆಯ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಅಲ್ಲದೆ ರಾಜಕೀಯ ಆರೋಪ- ಪ್ರತ್ಯಾರೋಪಗಳು ಮುಂದುವರೆದಿವೆ.

ದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಲು ರಾಜ್ಯ ಸರ್ಕಾರವು ನೂತನ ಪರಿಕಲ್ಪನೆಯೊಂದಿಗೆ ಸ್ಥಬ್ದ ಚಿತ್ರವನ್ನು ಸಿದ್ಧಪಡಿಸಿತ್ತು. ಮುಖ್ಯವಾಗಿ ಕರ್ನಾಟಕದ ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಹಾಗೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ತಿಳಿಸಲಾಗಿತ್ತು. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಈ ವಿಚಾರಕ್ಕೆ ಸಂಬಂಧಪಟ್ಟ ಪತ್ರ ವ್ಯವಹಾರಗಳು ಸರಿಯಾಗಿ ಎಂಬ ಕಾರಣ ನೀಡಿ ಕರ್ನಾಟಕದ ಟ್ಯಾಬ್ಲೋಗೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅವರೆಲ್ಲಾ ಸಾಮಾಜಿಕ ನ್ಯಾಯ, ಸಂವಿಧಾನದ ವಿರೋಧಿಗಳು : ಗಣತಂತ್ರ ದಿನದಂದೇ ವಿಪಕ್ಷಗಳ ವಿರುದ್ಧ ಸಿಎಂ ಗುಡುಗು

ಆದರೆ ಈ ವಿಚಾರದಲ್ಲಿ ಎಲ್ಲ ಜನಪ್ರತಿನಿಧಿಗಳ ನಡೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯದ ಬಿಜೆಪಿ ನಾಯಕರೂ ಕೂಡ ಇದರ ಬಗ್ಗೆ ಧ್ವನಿ ಎತ್ತದಿರುವುದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿದೆ. ರಾಜ್ಯವನ್ನು ಪ್ರತಿನಿಧಿಸಿ ಕೇಂದ್ರದಲ್ಲಿ ಸಂಸದರು ಹಾಗೂ ಮಂತ್ರಿಗಳಾದವರೂ ಕೂಡ ಪಕ್ಷಾತೀತವಾಗಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯದ ವಿಚಾರದಲ್ಲಿ ಪಕ್ಷ ಭೇದ ಮರೆತು ಕನ್ನಡಿಗರ ಅಸ್ಮಿತೆ ಎತ್ತಿ ಹಿಡಿದು, ಕರ್ನಾಟಕದ ಹಿತವನ್ನು ಕಾಯಬೇಕಿದ್ದವರು ರಾಜಕಾರಣದಲ್ಲಿ ಮುಳುಗಿ ಗಣತಂತ್ರ ದಿನದಂದೇ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದದ್ದು ಮಾತ್ರ ಅಕ್ಷಮ್ಯ..!












