ರಾಜೇಶ್ವರಿ ಚಟರ್ಜಿ

ತಮ್ಮ ಗುರಿ ತಲುಪುವವರೆಗೂ ವಿಚಲಿತರಾಗದೆ ಸಾಧನೆಗೈದ ಮಹಿಳೆಯ ಯಶಸ್ಸಿನ ಪಯಣ
ಲೇ : ಮುಸ್ಕಾನ್ ಭಾಟಿಯಾ
(ಆಧಾರ : Karnataka’s first woman engineer didn’t let anything thwart her PhD dream- ದ ಪ್ರಿಂಟ್ 24 ಜನವರಿ 2025)
ಕನ್ನಡಕ್ಕೆ : ನಾ ದಿವಾಕರ
ಭಾರತದಲ್ಲಿ ಮೈಕ್ರೋವೇವ್ ಎಂಜಿನಿಯರಿಂಗ್ ಕ್ಷೇತ್ರದ ಪ್ರವರ್ತಕಿಯಾಗಿ ರೂಪುಗೊಂಡ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಮೊದಲ ಮಹಿಳಾ ಎಂಜಿನಿಯರ್ ರಾಜೇಶ್ವರಿ ಚಟರ್ಜಿ ತಮ್ಮ ಅತ್ಯಂತ ಕಷ್ಟಕರವಾದ ಕೆಲಸವನ್ನು ಮುಂದುವರೆಸಿದ್ದರು. ತಮ್ಮ 85 ನೇ ವಯಸ್ಸಿನಲ್ಲಿ, ರಾಜೇಶ್ವರಿ IISc ಸಂಸ್ಥೆಯ ಶತಮಾನದ ಪ್ರಯಾಣದ ಸ್ಮರಣಾರ್ಥ ಆರ್ಕೈವ್‌ನ ಸಂಗ್ರಹ ಮತ್ತು ಹಳೆಯ ವಿದ್ಯಾರ್ಥಿಗಳ ಪುಸ್ತಕವನ್ನು (Alumni Book) ಸಂಗ್ರಹಿಸಲು ಪ್ರಾರಂಭಿಸಿದರು. 1981 ರಲ್ಲಿ ಅವರು ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಅಧ್ಯಕ್ಷರಾಗಿ ಸಂಸ್ಥೆಯಿಂದ ನಿವೃತ್ತರಾದ ಸುಮಾರು ಮೂರು ದಶಕಗಳ ನಂತರ ಇದು ಅವರಿಂದ ಸಾಧ್ಯವಾಗಿತ್ತು.
“ 2007 ರಲ್ಲಿ ಪ್ರಾರಂಭವಾಗಿ ಅವರು, ಸೆಪ್ಟೆಂಬರ್ 3, 2010 ರಂದು ನಿಧನರಾಗುವವರೆಗೂ IISc ಆರ್ಕೈವ್ಸ್‌ನ ಆರಂಭಿಕ ದಿನಗಳಲ್ಲಿ ಸಹಾಯ ಮಾಡಲು ಮುಂಚೂಣಿಯಲ್ಲಿದ್ದು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು. ರಾಜೇಶ್ವರಿ ಚಟರ್ಜಿ ಅವರು ತಮ್ಮ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಮಕಾಲೀನರ ಸಂಪರ್ಕಗಳನ್ನು ಪಡೆಯಲು ನಮಗೆ ಸಹಾಯ ಮಾಡಿದರು. ಅವರು ಹಲವಾರು ವೈಯಕ್ತಿಕ ಛಾಯಾಚಿತ್ರಗಳು ಮತ್ತು ಸಂಗ್ರಹಿಸಿದ ಕೆಲವು ವಸ್ತುಗಳನ್ನು IISc ಆರ್ಕೈವ್ಸ್‌ಗೆ ಉಡುಗೊರೆಯಾಗಿ ನೀಡಿದರು, ” ಎಂದು IISc ಯ ಆರ್ಕೈವ್ಸ್ ಮತ್ತು ಪಬ್ಲಿಕೇಷನ್ಸ್ ಸೆಲ್‌ನ ಮಾಜಿ ಹಿರಿಯ ತಾಂತ್ರಿಕ ಅಧಿಕಾರಿ ಶರತ್ ಅಹುಜಾ ಹೇಳುತ್ತಾರೆ.

ಜನವರಿ 24, 1922 ರಂದು ಜನಿಸಿದ ರಾಜೇಶ್ವರಿ ಚಟರ್ಜಿ, ಆಧುನಿಕ ಯುಗದ ಕಂಪ್ಯೂಟರ್‌ಗಳು ಅಥವಾ ಅಂತರ್ಜಾಲ (Internet) ಪ್ರವೇಶಿಸುವ ಬಹಳ ಹಿಂದೆಯೇ ಹೊಸ ತಂತ್ರಜ್ಞಾನಗಳನ್ನು ಉತ್ಸಾಹದಿಂದ ಅಳವಡಿಸಿಕೊಳ್ಳುವ ಮತ್ತು ತಮ್ಮ ಜೀವನದಲ್ಲಿ ಸಂಯೋಜಿಸುವ ಮೂಲಕ ತಮ್ಮ ಯುಗದ ಇತಿ ಮಿತಿಗಳನ್ನು ಧಿಕ್ಕರಿಸಿ ನಡೆದಿದ್ದರು. ” ಸದಾ ಸ್ವತಂತ್ರಳಾಗಿರಲು ಬಯಸುತ್ತಿದ್ದ ಅವರು ಆತ್ಮಶಕ್ತಿಯ ಭಂಡಾರವಾಗಿದ್ದರು, ಅವರು ತನ್ನ ಮನಸ್ಸಿಗೆ ಬಂದದ್ದನ್ನು ಸಾಧಿಸುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ” ಎಂದು ಶರತ್ ಅಹುಜಾ ಹೇಳುತ್ತಾರೆ. ಈ ಗುಣಗಳು ರಾಜೇಶ್ವರಿ ಅವರ ವ್ಯಕ್ತಿತ್ವದಲ್ಲಿ ಆಳವಾಗಿ ಬೇರೂರಿದ್ದವು ಮತ್ತು ಜೀವನದುದ್ದಕ್ಕೂ ಅವರೊಂದಿಗೆ ಉಳಿದುಕೊಂಡಿದ್ದವು.
“1949 ರಲ್ಲಿ ರಜಾದಿನಗಳಲ್ಲಿ ನಾನು MIT ಗೆ ಭೇಟಿ ನೀಡಿದಾಗ, ಹಲವಾರು ದೊಡ್ಡ ಕೋಣೆಗಳಲ್ಲಿ ಇರಿಸಲಾದ ಮೊದಲ ಕಂಪ್ಯೂಟರ್‌ಗಳಲ್ಲಿ ಒಂದನ್ನು ನಾನು ನೋಡಿದೆ ! ನಿಮ್ಮ ಅಂಗೈಯಲ್ಲಿ ಹಿಡಿದಿಡಬಹುದಾದ ಆಧುನಿಕ ಲ್ಯಾಪ್‌ಟಾಪ್‌ಗಳು ಆರಂಭಿಕ ದಿನಗಳ ಆ ಬೃಹತ್ ಕಂಪ್ಯೂಟರ್‌ಗಳಿಗಿಂತ ಹೆಚ್ಚಿನ ಕೆಲಸವನ್ನು ಮಾಡಬಹುದು ಎಂದು ನೀವು ಊಹಿಸಬಲ್ಲಿರಾ ?” ಅವರು 2009 ರಲ್ಲಿ ಪ್ರಕಟವಾದ IISc ಹಳೆಯ ವಿದ್ಯಾರ್ಥಿಗಳ ಪುಸ್ತಕದಲ್ಲಿ ರಾಜೇಶ್ವರಿ ಬರೆದಿದ್ದಾರೆ.
ಎಂದಿಗೂ ಹೆಜ್ಜೆ ಹಿಂದೆ ಇಡದ ವ್ಯಕ್ತಿತ್ವ
ವಿದೇಶದಲ್ಲಿ ಪಿಎಚ್‌ಡಿ ಗಳಿಸುವ ರಾಜೇಶ್ವರಿ ಚಟರ್ಜಿಯವರ ಕನಸಿಗೆ ಆಗ ನಡೆಯುತ್ತಿದ್ದ ಎರಡನೇ ಮಹಾಯುದ್ಧ ಭಂಗ ಉಂಟುಮಾಡಿತು. ಆದರೆ ಇತಿಹಾಸದೊಡನೆ ಈ ಸಂಘರ್ಷದಲ್ಲಿ ಅವರು ತಮ್ಮ ಆಕಾಂಕ್ಷೆಗಳನ್ನು ಬಿಟ್ಟುಕೊಡಲು ಸಿದ್ಧವಾಗಿರಲಿಲ್ಲ. ಆಗಿನ ಜಟಿಲ ಸಂದರ್ಭಗಳಿಂದ ವಿಚಲಿತರಾಗದೆ, ಯುದ್ಧ ಮುಗಿಯುವವರೆಗೂ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಿದರು.

“ ನಾನು ಸರ್ ಸಿ.ವಿ. ರಾಮನ್ ಅವರನ್ನು ಭೇಟಿಯಾಗಿ ನನ್ನನ್ನು ಸಂಶೋಧನಾ ವಿದ್ಯಾರ್ಥಿಯಾಗಿ ತೆಗೆದುಕೊಳ್ಳುವಂತೆ ವಿನಂತಿಸಿದೆ. ನನ್ನ ಎಂ.ಎಸ್ಸಿ ಪದವಿಗಳು ಗಣಿತಶಾಸ್ತ್ರದಲ್ಲಿವೆ ಎಂದು ತಿಳಿದ ನಂತರ ಅವರು, ಉನ್ನತ ಪ್ರಥಮ ದರ್ಜೆಯೊಂದಿಗೆ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪಡೆದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ನನಗೆ ಹೇಳಿದ್ದರು ” ಎಂದು IISc ಹಳೆಯ ವಿದ್ಯಾರ್ಥಿಗಳ (Alumni Book) ಪುಸ್ತಕದಲ್ಲಿ ರಾಜೇಶ್ವರಿ ಚಟರ್ಜಿ ಬರೆದುಕೊಂಡಿದ್ದಾರೆ.
ಈ ಹಿನ್ನಡೆ ರಾಜೇಶ್ವರಿ ಚಟರ್ಜಿಯವರನ್ನು ಮುಂದಣ ಹೆಜ್ಜೆಯಿಂದ ತಡೆಯಲಿಲ್ಲ. ವಿದೇಶದಲ್ಲಿ ಭವಿಷ್ಯದ ಅಧ್ಯಯನಕ್ಕಾಗಿ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಮತ್ತಷ್ಟು ವೃದ್ಧಿಸಲು ನಿರ್ಧರಿಸಿದ ಅವರು, ಅಂದಿನ ಸಾಮಾಜಿಕ ವಾತಾವರಣದಲ್ಲಿ ಅನುಸರಿಸಲಾಗುತ್ತಿದ್ದ ಪದ್ದತಿಗಳನ್ನು ಧಿಕ್ಕರಿಸಬೇಕಾಯಿತು. ಈ ಸನ್ನಿವೇಶದಲ್ಲಿ ಮಹಿಳೆಯರಿಗೆ ವೃತ್ತಿಜೀವನವನ್ನು ಬಿಟ್ಟು ಶಿಕ್ಷಣವನ್ನು ಮುಂದುವರಿಸಲು ವಿರಳವಾಗಿ ಅವಕಾಶ ನೀಡಿದ ಆ ಕಾಲಘಟ್ಟವನ್ನು ದಿಟ್ಟತನದಿಂದ ಎದುರಿಸಿ ದಾಟುವುದರಲ್ಲಿ ಯಶಸ್ವಿಯಾಗಿದ್ದರು. ಕೌಟುಂಬಿಕ ನಿರ್ಬಂಧಗಳಿಂದಾಗಿ ಗಣಿತದ ಕೇಂದ್ರವಾದ ಕೋಲ್ಕತ್ತಾಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗದೆ, ಅವರು IISc ಯ ವಿದ್ಯುತ್ ತಂತ್ರಜ್ಞಾನ ವಿಭಾಗದಲ್ಲಿ ಮೂರು ವರ್ಷಗಳ ಪ್ರಮಾಣಪತ್ರ ಕೋರ್ಸ್‌ಗಾಗಿ IISc ಯ ವಿದ್ಯುತ್ ತಂತ್ರಜ್ಞಾನ ವಿಭಾಗದತ್ತ ತಮ್ಮ ದೃಷ್ಟಿ ನೆಟ್ಟರು.
ಆದರೆ ಅವರ ಸಂದರ್ಶನವು ಮತ್ತೊಂದು ಅಡಚಣೆಯನ್ನು ಎದುರಿಸಬೇಕಾಯಿತು. ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಎಸ್. ಪಿ. ಚಕ್ರವರ್ತಿ ಅವರ ಶೈಕ್ಷಣಿಕ ಅರ್ಹತೆಗಳನ್ನು ಒಪ್ಪಿಕೊಂಡರು ಆದರೆ ದಾಖಲಾಗದಂತೆ ಸಲಹೆ ನೀಡಿದರು. ಏಕೈಕ ಮಹಿಳಾ ವಿದ್ಯಾರ್ಥಿನಿಯಾಗಿ, ವಿಶೇಷವಾಗಿ ಕೋಲ್ಕತ್ತಾ ಮತ್ತು ಜಮ್‌ಷೆಡ್‌ಪುರದಲ್ಲಿ ಪ್ರಾಯೋಗಿಕ ತರಬೇತಿಯ ಸಮಯದಲ್ಲಿ ಮಹಿಳೆಯಾಗಿ ಅವರು ಎದುರಿಸಬಹುದಾದ ಸವಾಲುಗಳನ್ನು ಪ್ರೊ. ಚಕ್ರವರ್ತಿ ಅವರು ರಾಜೇಶ್ವರಿ ಅವರ ಮುಂದಿಟ್ಟಿದ್ದರು. ಆದ್ದರಿಂದ ಪ್ರಮಾಣಪತ್ರ ಕೋರ್ಸ್ ಅನ್ನು ಮುಂದುವರಿಸುವ ಬದಲು, ರಾಜೇಶ್ವರಿ ಚಟರ್ಜಿ ,ಪ್ರೊ. ಚಕ್ರವರ್ತಿ ಅವರ ಸಲಹೆಯನ್ನು ಪಡೆದು ಸಂಶೋಧನಾ ವಿದ್ಯಾರ್ಥಿನಿಯಾಗಿ ಅವರ ಪ್ರಯೋಗಾಲಯಕ್ಕೆ ಸೇರಿದರು. ಅಲ್ಲಿ, ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಅಧ್ಯಯನ-ಸಂಶೋಧನೆಯನ್ನು ಮುಂದುವರೆಸಿ ಮತ್ತು ಯುದ್ಧಾನಂತರದ ವಿದ್ಯಾರ್ಥಿವೇತನಕ್ಕಾಗಿ ಅವರ ಅವಕಾಶಗಳನ್ನು ಗಟ್ಟಿಗೊಳಿಸಲು ಪ್ರಬಂಧಗಳನ್ನು ಪ್ರಕಟಿಸಿದರು.

ಜುಲೈ 1944 ರಲ್ಲಿ, ಅವರು ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ವ್ಯಾಕ್ಯೂಮ್ ಟ್ಯೂಬ್‌ಗಳು, ಎಲೆಕ್ಟ್ರೋ-ಅಕೌಸ್ಟಿಕ್ಸ್ ಮತ್ತು ಲೈನ್ ಕಮ್ಯುನಿಕೇಷನ್‌ನಲ್ಲಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರು. ಅವರ ಪ್ರಯತ್ನಗಳ ಫಲವಾಗಿ ಮೂರು ಪ್ರಕಟಣೆಗಳನ್ನು ಹೊರತರಲು ಸಾಧ್ಯವಾಯಿತು. ಎರಡು ಪ್ರಕಟಣೆಗಳನ್ನು ಪ್ರೊಫೆಸರ್ ಚಕ್ರವರ್ತಿಯೊಂದಿಗೆ ಹೊರತಂದಿದ್ದರು. ಮತ್ತೊಂದನ್ನು 1946 ರಲ್ಲಿ ವಿಭಾಗಕ್ಕೆ ಸೇರಿದ ಉಪನ್ಯಾಸಕ ಮತ್ತು ನಂತರ ಅವರು ವಿವಾಹವಾದ ಶ್ರೀಯುತ ಎಸ್.ಕೆ. ಚಟರ್ಜಿ ಅವರೊಂದಿಗೆ ಪ್ರಕಟಿಸಿದ್ದರು. IIScಯಲ್ಲಿನ ಅವರ ಅನುಭವವು ಅಂತಿಮವಾಗಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಗಳಿಸಿತು, ಇದು ಅವರ ಪ್ರವರ್ತಕ ವೃತ್ತಿಜೀವನಕ್ಕೆ ವೇದಿಕೆಯನ್ನು ಸಿದ್ಧಪಡಿಸಿತು.
ಅಮೆರಿಕದ ಪಯಣ- ಮರಳಿ ತವರಿಗೆ
1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ, ಭಾರತವು ದೇಶದ ಕೈಗಾರಿಕೆ ಮತ್ತು ಆರ್ಥಿಕತೆಯನ್ನು ನಿರ್ಮಿಸಲು ಉತ್ಸುಕವಾಗಿತ್ತು, ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಕೆನಡಾ, ಬ್ರಿಟನ್ ಅಥವಾ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಘೋಷಿಸಿತು. ರಾಜೇಶ್ವರಿ ಚಟರ್ಜಿ ಅವರು ತಮ್ಮ ಸ್ನೇಹಿತರಾದ ಭೌತಶಾಸ್ತ್ರಜ್ಞ ಮತ್ತು ಹವಾಮಾನಶಾಸ್ತ್ರಜ್ಞರಾದ ಶ್ರೀಮತಿ ಅನ್ನಾ ಮಣಿ ಮತ್ತು ರಸಾಯನಶಾಸ್ತ್ರಜ್ಞರಾದ ರೋಶನ್ ಇರಾನಿ ಅವರ ನಂತರ IIScಯಿಂದ ವಿದ್ಯಾರ್ಥಿವೇತನವನ್ನು ಪಡೆದ ಮೂರನೇ ಮಹಿಳೆಯಾದರು.
“ ಅಂತಿಮವಾಗಿ ನಾನು ಭಾರತವನ್ನು ಬಿಟ್ಟು ಹೆಚ್ಚು ಮುಂದುವರಿದ ದೇಶಕ್ಕೆ ಹೋಗುತ್ತಿದ್ದೇನೆ, ಅಲ್ಲಿ ಉತ್ತಮವೋ ಕಳಪೆಯೋ , ವಿಭಿನ್ನವಾದದ್ದನ್ನು ಕಲಿಯಲು ಹೋಗುತ್ತೇನೆ ಎಂದು ಭಾವಿಸಿದ್ದೆ ” ಎಂದು ಅವರು ಹಳೆಯ ವಿದ್ಯಾರ್ಥಿಗಳ ಪುಸ್ತಕದಲ್ಲಿ (Alumni book) ದಾಖಲಿಸಿದ್ದಾರೆ. ಜೂನ್ 1947 ರಲ್ಲಿ, ಅವರು SS Marine Adder ಮೂಲಕ ಸ್ಯಾನ್ ಫ್ರಾನ್ಸಿಸ್ಕೋಗೆ ಒಂದು ತಿಂಗಳ ಪ್ರಯಾಣವನ್ನು ಪ್ರಾರಂಭಿಸಿದರು, ನಂತರ ಮಿಚಿಗನ್‌ಗೆ ರೈಲು ಪ್ರಯಾಣವನ್ನು ಮಾಡಿದರು. ರಾಜೇಶ್ವರಿ ಚಟರ್ಜಿ ಈ ಸಾಹಸವನ್ನು ದಿಟ್ಟತನದಿಂದ ಸ್ವೀಕರಿಸಿ ಅಮೆರಿಕದಲ್ಲಿ ತಾವು ಕಳೆದ ಸಮಯವನ್ನು ಆನಂದದಿಂದ, ಆತ್ಮತೃಪ್ತಿಯಿಂದ ಕಳೆದಿದ್ದರು. ಜನವರಿ 1949 ರ ಹೊತ್ತಿಗೆ, ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಲು ನಿರ್ಧರಿಸಿದರು.
ಆದಾಗ್ಯೂ, ಸರ್ಕಾರ ಆದೇಶಿಸಿದ ಪ್ರಾಯೋಗಿಕ ತರಬೇತಿಯ ಅಗತ್ಯವನ್ನು ಪೂರೈಸಲು ಅವರು ಡಾಕ್ಟರೇಟ್ ಅಧ್ಯಯನಕ್ಕೆ ಪ್ರವೇಶಿಸುವ ಯೋಜನೆಗಳನ್ನು ಐದು ತಿಂಗಳು ಮುಂದೂಡಬೇಕಾಯಿತು. ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ರಾಷ್ಟ್ರೀಯ ಮಾನದಂಡಗಳ ಬ್ಯೂರೋವನ್ನು (National Bureau of Standards) ಸೇರಿದರು, ಅಲ್ಲಿ ಅವರು ರೇಡಿಯೋ ಆವರ್ತನ ಮಾಪನಗಳಲ್ಲಿ (Radio Frequency Measurements) ತರಬೇತಿ ಪಡೆದರು. ಈ ಸಮಯದಲ್ಲಿ, ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಬಾರ್ಬೊರ್ (Barbour Scholarship) ವಿದ್ಯಾರ್ಥಿವೇತನವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಇದರ ಫಲವಾಗಿ ಅವರ ಪಿಎಚ್‌ಡಿ ಕನಸುಗಳಿಗೆ ಹಸಿರು ನಿಶಾನೆ ತೋರುವಂತೆ ಭಾರತ ಸರ್ಕಾರಕ್ಕೆ ಮನವರಿಕೆಯಾಗಿತ್ತು.

ರಾಜೇಶ್ವರಿ ಚಟರ್ಜಿ ಉತ್ತಮ ಮಾರ್ಗದರ್ಶಕರನ್ನು ಹೊಂದಿದ್ದ ಅದೃಷ್ಟಶಾಲಿ ವ್ಯಕ್ತಿಯಾಗಿದ್ದರು. ಅವರ ಸಲಹೆಗಾರರಾಗಿದ್ದ ಪ್ರಾಧ್ಯಾಪಕ ವಿಲಿಯಂ ಗೌಲ್ಡ್ ಡೌ ಅವರ ಮಾರ್ಗದರ್ಶನದೊಂದಿಗೆ, ಅವರು ಆರಂಭಿಕ ಕಂಪ್ಯೂಟರ್‌ಗಳಿಗೆ ಅಡಿಪಾಯವಾದ ನಿರ್ವಾತ ಟ್ಯೂಬ್ ಟ್ರಿಗ್ಗರ್ ಸರ್ಕ್ಯೂಟ್‌ಗಳ (Vacuum tube trigger circuits ) ಕುರಿತು ಪಿಎಚ್‌ಡಿ ಸಂಶೋಧನಾ ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡರು. ವಿದೇಶದಲ್ಲಿ ಐದೂವರೆ ವರ್ಷಗಳ ಅಧ್ಯಯನ-ವ್ಯಾಸಂಗ-ಸಂಶೋಧನೆಯ ನಂತರ, ಅವರು ಏಪ್ರಿಲ್ 1954 ರಲ್ಲಿ ಭಾರತಕ್ಕೆ ಮರಳಿದರು. ಭಾರತ ಸರ್ಕಾರದ ಸೌಜನ್ಯದಿಂದ ರಾಜೇಶ್ವರಿ ಅವರು ಹೆಮ್ಮೆಯಿಂದ Queen Mary and SS Batory ಯಲ್ಲಿ ನೌಕಾಯಾನ ಮಾಡಿದರು. ಸುಮಾರು ಒಂದು ದಶಕದ ನಂತರ IISc ಗೆ ಹಿಂತಿರುಗಿದ ಚಟರ್ಜಿ ಅವರು ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ (ECE) ಮೊದಲ ಮಹಿಳಾ ಎಂಜಿನಿಯರ್ ಆಗಿ ತಮ್ಮ ತವರಿಗೆ ಮರಳಿದ್ದರು.
ವಿಶೇಷ ಟಿಪ್ಪಣಿ (ಅನು) ರಾಜೇಶ್ವರಿ ಚಟರ್ಜಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಬಿ. ಎಸ್‌ಸಿ (ಆನರ್ಸ್ ) ಪ್ರಥಮ ಶ್ರೇಣಿ ಪಡೆದಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ. · ಎಂ.ಎಸ್‌ಸಿ ಯಲ್ಲಿ ಪ್ರಥಮ ಶ್ರೇಣಿ ಪಡೆದಿದ್ದಕ್ಕಾಗಿ ಎಂ.ಟಿ. ನಾರಾಯಣ ಐಯ್ಯಂಗಾರ್ ಮತ್ತು ವಾಟರ್ಸ್ ಮೆಮೋರಿಯಲ್ ಪ್ರಶಸ್ತಿ. · ಬ್ರಿಟನ್ನಿನ Institute of Electrical and Radio Engineering ಸಂಸ್ಥೆಯಿಂದ ಅತ್ಯುತ್ತಮ ಪ್ರಬಂಧಕ್ಕಾಗಿ ಮೌಂಟ್ ಬ್ಯಾಟನ್ ಪ್ರಶಸ್ತಿ · ಅತ್ಯುತ್ತಮ ಸಂಶೋಧನೆ ಮತ್ತು ಬೋಧನೆಗಾಗಿ Institute of Electronics and telecommunication Engineers.ವತಿಯಿಂದ ರಾಮ್‌ಲಾಲ್ ವಾರ್ಧಾ ಪ್ರಶಸ್ತಿ · 2017ರಲ್ಲಿ ಭಾರತ ಸರ್ಕಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ರಾಜೇಶ್ವರಿ ಅವರಿಗೆ “ ಭಾರತದ ಮೊದಲ ಮಹಿಳಾ ಸಾಧಕಿ ” ಪ್ರಶಸ್ತಿಯನ್ನು (ಮರಣೋತ್ತರ) ನೀಡಿ ಗೌರವಿಸಿದೆ |

IISc ಯ ನಲ್ಮೆಯ ಅಸ್ಮಿತೆಗಳ ನಡುವೆ
ರಾಜೇಶ್ವರಿ ಚಟರ್ಜಿ ಮತ್ತು ಅವರ ಪತಿ ಎಸ್.ಕೆ. ಚಟರ್ಜಿ ಅವರು ಅನುದಾನದ ಕೊರತೆಯಿದ್ದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ದೇಶದ ಮೊದಲ ಮೈಕ್ರೋವೇವ್ ಎಂಜಿನಿಯರಿಂಗ್ ಲ್ಯಾಬ್ ಅನ್ನು ಮೊದಲಿನಿಂದ ನಿರ್ಮಿಸಿದರು. ಅವರು 1960 ರ ದಶಕದಲ್ಲಿ ಮೈಕ್ರೋವೇವ್ ತಂತ್ರಜ್ಞಾನ ಮತ್ತು ಉಪಗ್ರಹ ಸಂವಹನದ ಕುರಿತು ಕೋರ್ಸ್‌ಗಳನ್ನು ಸಹ ಪರಿಚಯಿಸಿದರು. ಮೈಕ್ರೋವೇವ್ ಸಂಶೋಧನೆಗೆ ಚಟರ್ಜಿ ಅವರ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ, ವಿಶೇಷವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ RADAR ತಂತ್ರಜ್ಞಾನ ಮತ್ತು ಅನ್ವಯಿಕೆಗಳಲ್ಲಿ ಇದು ಇಂದಿಗೂ ತಮ್ಮ ಸ್ಥಾನ ಉಳಿಸಿಕೊಂಡಿವೆ. ಅವರ ವೈಜ್ಞಾನಿಕ ಸಾಧನೆಗಳನ್ನು ಮೀರಿ, ಚಟರ್ಜಿ ದಂಪತಿಗಳು ಅಸಾಧಾರಣ ಮಾರ್ಗದರ್ಶಕರಾಗಿದ್ದರು, ಹಾಗಾಗಿ ಅವರ ವಿದ್ಯಾರ್ಥಿ ವೃಂದದ ಅಚಲ ಬೆಂಬಲ ಪಡೆದು ಪ್ರಸಿದ್ಧಿ ಪಡೆದಿದ್ದರು.
“ಅವರು ಮತ್ತು ನನ್ನ ತಂದೆ ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು” ಎಂದು ಅವರ ಮಗಳು, ಪ್ರೊಫೆಸರ್ ಇಂದಿರಾ ಚಟರ್ಜಿ ಇಮೇಲ್‌ನಲ್ಲಿ ಬರೆಯುತ್ತಾರೆ. “ನಮ್ಮ ಮನೆಯಲ್ಲಿ ಯಾವಾಗಲೂ ವಿದ್ಯಾರ್ಥಿಗಳು ಇರುತ್ತಿದ್ದರು, ಅವರಲ್ಲಿ ಅನೇಕರು ವೃತ್ತಿಪರ ಮತ್ತು ವೈಯಕ್ತಿಕ ಎರಡೂ ಸಮಸ್ಯೆಗಳನ್ನು ಚರ್ಚಿಸಲು ಬರುತ್ತಿದ್ದರು.” ಎಂದು ಹೆಮ್ಮೆಯಿಂದ ಸ್ಮರಿಸುತ್ತಾರೆ. ಈ ದಂಪತಿಗಳ ಆಳವಾದ ಕಾಳಜಿ ಮತ್ತು ಬೆಂಬಲವು ಅವರ ವಿದ್ಯಾರ್ಥಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದು, ಮನ ಹೃದಯಗಳಲ್ಲಿ ಅವರಿಗೆ ವಿಶೇಷ ಸ್ಥಾನವನ್ನು ಗಳಿಸಿಕೊಟ್ಟಿದೆ. ಈಗಲೂ ಈ ಸಾಧಕರನ್ನು ವಿದ್ಯಾರ್ಥಿಗಳು ಪ್ರೀತಿಯಿಂದ ʼ ಪಾ-ಚ ʼ ಮತ್ತು ʼ ಮಾ-ಚ ʼ ಅಂದರೆ – “ ಪಾಪಾ ಚಟರ್ಜಿ ಮತ್ತು ಮಾಮಾ ಚಟರ್ಜಿಯ” ಸಂಕ್ಷಿಪ್ತ ರೂಪದಲ್ಲೇ ಸಂಬೋಧಿಸುತ್ತಾರೆ ಎಂದು ಶರತ್ ಅಹುಜಾ ಹೇಳುತ್ತಾರೆ.

( ಕರ್ನಾಟಕದ–ಭಾರತದ ಮಹಿಳೆಯರಷ್ಟೇ ಅಲ್ಲ ಸಮಸ್ತ ಜನತೆಯೂ ಹೆಮ್ಮೆಯಿಂದ ಸ್ಮರಿಸಬೇಕಾದ ಸಾಧಕಿ ಶ್ರೀಮತಿ ರಾಜೇಶ್ವರಿ ಚಟರ್ಜಿ-ಅನು)
(ಹೃತ್ಪೂರ್ವಕ ಕೃತಜ್ಞತೆ : ದ ಪ್ರಿಂಟ್ ಪತ್ರಿಕೆಗೆ )
-೦-೦-೦-೦-