ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ (2020 ಎಪ್ರಿಲ್ ನಿಂದ ಮೇ 2021 ರವರೆಗೆ) ರಾಜ್ಯದಲ್ಲಿ ಮರಣ ಪ್ರಮಾಣ ಗಣನೀಯ ಹೆಚ್ಚಳ ಕಂಡುಬಂದಿದೆ. ಈ ಹಿಂದೆ ಇದೇ ಅವಧಿಯಲ್ಲಿ 29,090 ಇದ್ದ ʼಹೆಚ್ಚುವರಿ ಮರಣʼಗಳ ಸಂಖ್ಯೆ, ಸಾಂಕ್ರಾಮಿಕ ರೋಗದ ಅವಧಿಯಲ್ಲಿ 1,67,788 ಕ್ಕೆ ಏರಿದೆ. ಅಂದರೆ, ಈ ಹಿಂದಿನ ಇದೇ ಅವಧಿಗೆ ಹೋಲಿಸಿದರೆ, 5.8 ಪಟ್ಟು ಈ ʼಹೆಚ್ಚುವರಿ ಮರಣʼಗಳ ಸಂಖ್ಯೆ ಏರಿದೆ.
ಕೋವಿಡ್ ಎರಡನೆಯ ಅಲೆಯ ಅವಧಿಯಾದ 2021 ರ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ದಾಖಲಾದ ಸಾವುಗಳು ಹೆಚ್ಚುವರಿ ಸಾವುಗಳ ಗಣನೀಯ ಏರಿಕೆಗೆ ಕಾರಣವಾಗಿದೆ.

ಕರ್ನಾಟಕ ನಾಗರಿಕ ನೋಂದಣಿ ವ್ಯವಸ್ಥೆ (CRS) ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಈ ವರ್ಷದ ಜನವರಿ 1 ರಿಂದ ಜೂನ್ 15 ರವರೆಗೆ ಒಟ್ಟು 3,37,580 (3.37 ಲಕ್ಷ) ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷದ ಇದೇ ಅವಧಿಯ ಮರಣ ಪ್ರಮಾಣಗಳಿಗೆ ಹೋಲಿಸಿದರೆ, ಈ ವರ್ಷದ ಮರಣ ಪ್ರಮಾಣ ವಿಪರೀತ ಹೆಚ್ಚಾಗಿದೆ. 2019 ರ ಇದೇ ಅವಧಿಯಲ್ಲಿ ಈ ಪ್ರಮಾಣ 2.35 ಲಕ್ಷದಷ್ಟಿದ್ದರೆ, 2018 ರ ಜನವರಿ ಜೂನ್ ನಡುವಿನ ಅವಧಿಯಲ್ಲಿ 2.24 ಲಕ್ಷ ಮಂದಿ ಮೃತಪಟ್ಟಿದ್ದರು.
ಅಂದರೆ, 2019ರ ಜನವರಿ-ಜೂನ್ ಅವಧಿಗೆ ಹೋಲಿಸಿದರೆ ಈ ವರ್ಷ 1,02,429 ಹೆಚ್ಚುವರಿ ಮರಣಗಳು ದಾಖಲಾಗಿವೆ. ಆತಂಕಕಾರಿ ವಿಚಾರವೆಂದರೆ, ಈ ಹೆಚ್ಚುವರಿ ಮರಣಗಳಲ್ಲಿ 21,048 ಮರಣಗಳನ್ನು ಮಾತ್ರ ಕೋವಿಡ್ ಮರಣಗಳೆಂದು ಪರಿಗಣಿಸಲಾಗಿದೆ. ಅಂದರೆ, ಕೋವಿಡ್ ಮರಣಗಳೆಂದು ಸರ್ಕಾರ ನೀಡಿರುವ ದತ್ತಾಂಶಗಳಿಗಿಂತ 5 ಪಟ್ಟು ಹೆಚ್ಚುವರಿ ಮರಣಗಳು ಈ ವರ್ಷ ಸಂಭವಿಸಿದೆ.
ತಜ್ಞರ ವಿಶ್ಲೇಷಣೆ ಪ್ರಕಾರ ಈ ಹೆಚ್ಚುವರಿ ಮರಣಗಳು ಕೋವಿಡ್ ದತ್ತಾಂಶಗಳಲ್ಲಿ ದಾಖಲಾಗದೇ ಬಾಕಿಯಾದದ್ದೇ ಬಹುತೇಕ. ಸಾವು ಸಂಭವಿಸಿದ 21 ದಿನಗಳೊಳಗೆ ವರದಿ ಮಾಡಬೇಕೆಂಬ ನಿಯಮ ಇರುವುದರಿಂದ ಬಹುತೇಕ ಕೋವಿಡ್ ಮರಣಗಳು ಸರ್ಕಾರದ ಅಧಿಕೃತ ಕೋವಿಡ್ ದತ್ತಾಂಶಗಳಲ್ಲಿ ಸೇರಿಕೊಂಡಿಲ್ಲ ಎನ್ನುವುದು ವಾಸ್ತವ.
2015 ರಿಂದ 2019 ರವರೆಗೆ ಕರ್ನಾಟಕ ಸರ್ಕಾರವು ಸರಾಸರಿ 4,57,669 ಮರಣ ಪ್ರಮಾಣ ಪತ್ರಗಳನ್ನು ವಿತರಿಸಿದೆ. ಈ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಮರಣ ಸಂಖ್ಯೆಗಳ ಪ್ರಮಾಣವು ಕ್ರಮೇಣ ಏರಿಕೆಯಾಗಿದೆ. (2020ರ ಎಲ್ಲಾ ಮರಣಗಳ ಮಾಹಿತಿಯು ಲಭ್ಯವಿಲ್ಲ)

CRS ದತ್ತಾಂಶದ ಪ್ರಕಾರ, 2019 ರ ಜೂನ್ ಇಡೀ ತಿಂಗಳಲ್ಲಿ 37,403 ಮರಣಗಳು ದಾಖಲಾಗಿತ್ತು. ಆದರೆ, ಕೇವಲ 2021 ಜೂನ್ ತಿಂಗಳ ಆರಂಭದಿಂದ 15 ರವರೆಗೆ 55,627 ಮರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಅಂದರೆ, 2021ರ ಅರ್ಧ ಜೂನ್‌ನಲ್ಲಿ, 2019ರ ಜೂನ್ ಪೂರ್ತಿ ತಿಂಗಳಲ್ಲಿ ದಾಖಲಾದ ಮರಣಕ್ಕಿಂತ 48.7% ಹೆಚ್ಚಾಗಿದೆ. ಈ ಜೂನ್ ಅಂತ್ಯದ ವೇಳೆಗೆ ಮರಣ ಪ್ರಮಾಣ ಇದೇ ರೀತಿ ಮುಂದುವರೆದರೆ 2019ರ ಜೂನ್ ನಲ್ಲಿ ಸಂಭವಿಸಿದ ಮರಣಕ್ಕಿಂತ 2021 ರ ಜೂನ್‌ನಲ್ಲಿ ಸಂಭವಿಸುವ ಮರಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲೇ ಹೆಚ್ಚು!
ಕರ್ನಾಟಕದ ಒಟ್ಟು ಮೊತ್ತ ಅಂಕಿ ಅಂಶಗಳನ್ನು ಗಮನಿಸಿದರೆ, ಮರಣ ಪ್ರಮಾಣ ಕೂಡಾ ಬೆಂಗಳೂರಿಗೇ ಕೇಂದ್ರೀಕರಿಸಿದೆ. 2021 ರ ಜನವರಿ 1 ರಿಂದ ಜೂನ್ 15ರವರೆಗೆ ಬಿಬಿಎಂಪಿಯು 87,082 ಮರಣ ಪ್ರಮಾಣ ಪತ್ರಗಳನ್ನು ವಿತರಿಸಿದೆ ಎಂದು CRS ಅಂಕಿ ಅಂಶಗಳು ತಿಳಿಸಿದೆ.
2020 ರ ಸಾಂಕ್ರಾಮಿಕ ಕಾಲದ ಸರಿಯಾದ ಮಾಹಿತಿ ದೊರಕದ ಕಾರಣ, 2019ರ ಇದೇ ಅವಧಿಯ ದತ್ತಾಂಶಗಳನ್ನು ತಾಳೆ ಹಾಕಲಾಗಿದೆ. ಈ ಪ್ರಕಾರ, 2019 ರ ಜನವರಿ-ಜೂನ್ ಅವಧಿಯಲ್ಲಿ 37,195 ಮರಣಗಳು ದಾಖಲಾಗಿವೆ. 2018 ರ ಇದೇ ಅವಧಿಯಲ್ಲಿ 35,262 ಮರಣಗಳು ದಾಖಲಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ COVID-19 ಸಾವಿನ ದತ್ತಾಂಶದಲ್ಲಿ ದಾಖಲಾಗದ ಇನ್ನೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಈ ಅಂಕಿ ಅಂಶ ಸ್ಪಷ್ಟವಾಗಿ ತೋರಿಸುತ್ತದೆ. ಬೆಂಗಳೂರು ನಗರ ಭಾಗದಲ್ಲಿ, ಜನವರಿ ಒಂದರಿಂದ ಜೂನ್ 15 ರ ವರೆಗೆ 11,018 ಕೋವಿಡ್ ಮರಣಗಳೆಂದು ಸರ್ಕಾರದ ಕೋವಿಡ್ ಬುಲೆಟಿನ್ ತಿಳಿಸುತ್ತದೆ.

ಬಿಹಾರ, ಮಧ್ಯಪ್ರದೇಶದಲ್ಲೂ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ
ಇತ್ತೀಚಿಗೆ ನ್ಯಾಯಾಲಯವು ಬಿಹಾರದ ಕೋವಿಡ್ ಸಾವುಗಳನ್ನು ಪುನರ್ ಪರಿಶೀಲಿಸಲು ಆದೇಶ ನೀಡಿದ ನಂತರ, 72%ದಷ್ಟು ಕೋವಿಡ್ ಸಾವುಗಳಲ್ಲಿ ಏರಿಕೆ ಕಂಡಿತ್ತು. ದೇಶದಲ್ಲಿಯೇ ಅತೀ ಹೆಚ್ಚು ಕೋವಿಡ್ ಸಾವುಗಳನ್ನು ಕಂಡ ರಾಜ್ಯಗಳಲ್ಲಿ ಬಿಹಾರ ಮೊದಲ ಸ್ಥಾನದಲ್ಲಿ ನಿಂತಿತ್ತು.
ಬಳಿಕ, ಮಧ್ಯಪ್ರದೇಶದಲ್ಲಿ ಕೂಡಾ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾವಿನ ಪ್ರಮಾಣ ಅಧಿಕೃತ ಅಂಕಿಅಂಶಗಳಿಗಿಂತ ಮೂರು ಪಟ್ಟು ಹೆಚ್ಚಾಗಿರುವ ಕುರಿತು ಮಾಹಿತಿ ಬಹಿರಂಗವಾಗಿತ್ತು.
2018 ಮತ್ತು 2019ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರಾಸರಿ 59,000 ಸಾವುಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಆದರೆ, ಕೋವಿಡ್ ಎರಡನೇ ಅಲೆಯ ಸಂರ್ಭದಲ್ಲಿ ಈ ಸಾವುಗಳ ಸಂಖ್ಯೆ ಸರಾಸರಿಗಿಂತ 290% ಏರಿಕೆಯಾಗಿ 2.3 ಲಕ್ಷಕ್ಕೇರಿದ್ದು, ಸರಾಸರಿಗಿಂತ ಹೆಚ್ಚಾಗಿರುವ 1.74 ಲಕ್ಷ ಸಾವುಗಳಲ್ಲಿ ಅತೀ ಹೆಚ್ಚು ಸಾವುಗಳು ಮೇ ಒಂದೇ ತಿಂಗಳಲ್ಲಿ ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಮೇ ಒಂದರಲ್ಲೇ 1.6 ಲಕ್ಷ ಹೆಚ್ಚುವರಿ ಸಾವು ಸಂಭವಿಸಿರುವ ಕುರಿತ ದತ್ತಾಂಶಗಳು ಬಹಿರಂಗಪಡಿಸಿತ್ತು.

ದತ್ತಾಂಶಗಳ ಅಸಮರ್ಪಕ ನಿರ್ವಹಣೆಗೆ ಬಿಹಾರ ಹೈಕೋರ್ಟ್ ತಪರಾಕಿ
ಕೋವಿಡ್ ದತ್ತಾಂಶಗಳ ಅಸಮರ್ಪಕ ನಿರ್ವಹಣೆ ಕುರಿತಂತೆ ಬಿಹಾರ ಸರ್ಕಾರವನ್ನು ಕಳೆದ ಕೆಲವು ದಿನಗಳಿಂದ ತರಾಟೆಗೆ ತೆಗೆದುಕೊಳ್ಳುತ್ತಿರುವ ಬಿಹಾರ ಹೈಕೋರ್ಟ್, ಸಾವಿನ ಪ್ರಮಾಣ ತಿಳಿಯಲು ನಾಗರಿಕರಿಗೆ ಅರ್ಹತೆಯಿದೆ ಎಂದು ಹೇಳಿದೆ.
ಈ ಡಿಜಿಟಲ್ ಯುಗದಲ್ಲಿ ದತ್ತಾಂಶಗಳ ಸಮರ್ಪಕ ಶೇಖರಣೆ ಹಾಗೂ ಪ್ರಕಟನೆ ಅಸಾಧ್ಯ ಎಂದು ನಾವು ಭಾವಿಸುವುದಿಲ್ಲ, ಕೋವಿಡ್ ಸಾವುಗಳು ಹಾಗೂ ಕೋವಿಡ್ ಅಲ್ಲದ ಸಾವುಗಳ ಅಂಕಿ ಅಂಶವನ್ನು ನಿಯಮಿತವಾಗಿ ಅಪ್‌ಲೋಡ್ ಮಾಡದಿರಲು ಯಾವ ಕಾರಣಗಳೂ ನಮಗೆ ಗೋಚರಿಸುತಿಲ್ಲ. ಪಾರದರ್ಶಕತೆ ಕಾಪಾಡಿ ಎಂದು ಸರ್ಕಾರದ ಕಿವಿ ಹಿಂಡಿದೆ.

ಅಲ್ಲದೆ, ಆಯಾ ಕ್ಷೇತ್ರದ ಶಾಸಕರು, ತಮ್ಮ ಕ್ಷೇತ್ರದ ಅಂಕಿ ಅಂಶಗಳನ್ನು ಪರಾಮರ್ಶಿಸುವಂತೆ ಹಾಗೂ ಸರಿಪಡಿಸುವಂತೆ ಹೈಕೋರ್ಟ್ ಆದೇಶಿಸಿದೆ.