2020-21 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 19 ಮತ್ತು 22 ರಂದು ನಡೆಯಲಿವೆ . 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ 6 ದಿನಗಳ ಪರೀಕ್ಷೆ ನಡೆಸಿದ್ದೆವು. ಈ ಬಾರಿ ಕೋವಿಡ್ ತ್ವರಿತಗತಿಯ ಕಾರಣದಿಂದ ಎರಡು ದಿನಗಳ ಪರೀಕ್ಷೆ ನಡೆಯಲಿಕ್ಕಿದೆ. ಮೂರು ಕೋರ್ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಜುಲೈ 19ರಂದು ನಡೆಯಲಿದೆ. ಇನ್ನುಳಿದ ಮೂರು ಭಾಷಾ ವಿಷಯಗಳಾದ ಕನ್ನಡ , ಹಿಂದಿ, ಇಂಗ್ಲೀಷ್ ಜುಲೈ 22ರಂದು ನಡೆಯಲಿದೆ. ಬೆಳಿಗ್ಗೆ 10:30 ರಿಂದ 1:30 ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ಹೇಳಿದರು.

73,066 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಿಕ್ಕಿದ್ದು, ಜೂನ್ 30ರಂದು ವಿದ್ಯಾರ್ಥಿಗಳ ಹಾಲ್ ಟಿಕೇಟ್ ಗಳನ್ನು ಶಾಲೆಗೆ ಕಳುಹಿಸಲಾಗುವುದು. ಕೋವಿಡ್ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ಎಲ್ಲಾ ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.


