‘ಪೆಟ್ರೋಲ್ ಬೆಲೆ ಏರಿಕೆಗೆ ಯುಪಿಎ ಸರ್ಕಾರವೇ ಕಾರಣ ಎಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ 70 ವರ್ಷಗಳಲ್ಲಿ ಮಾಡಿದ ಸಾಲವನ್ನು ಮೋದಿ ಸರ್ಕಾರ 7 ವರ್ಷಗಳಲ್ಲಿ ಮಾಡಿರುವುದೇ ಅವರ ನಿಜವಾದ ಸಾಧನೆ’ ಎಂದು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹನುಮಂತಯ್ಯ ಅವರು ‘ಇತ್ತೀಚೆಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಪೆಟ್ರೋಲ್ ಬೆಲೆ ಏರಿಕೆಗೆ ಬಿಜೆಪಿ ಸರ್ಕಾರ ಕಾರಣವಲ್ಲ, ಈ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಈ ಆರೋಪ ಸತ್ಯಕ್ಕೆ ದೂರವಾದುದ್ದು. ಕಾರಣ, ಕಚ್ಚಾ ತೈಲ ಬೆಲೆ ಆಧಾರದ ಮೇಲೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿ ಮಾಡುವ ಪ್ರಕ್ರಿಯೆ ಯುಪಿಎ ಸರ್ಕಾರದಿಂದಲೇ ಆರಂಭವಾಗಿದೆ. 2008ರಲ್ಲಿ ಕಚ್ಚಾತೈಲ ಬೆಲೆ 139.10 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ಬೆಲೆ 50.62 ರೂಪಾಯಿ ಇತ್ತು. 2013ರಲ್ಲಿ ಕಚ್ಚಾತೈಲ ಬೆಲೆ 110.80 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 66.09 ರೂಪಾಯಿ ಇತ್ತು. ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಕಚ್ಛಾತೈಲ ಬೆಲೆ 57.333 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 72.23 ರೂಪಾಯಿ ಇತ್ತು. 2018ರಲ್ಲಿ ಕಚ್ಚಾತೈಲ ದರ 53.80 ಡಾಲರ್ ಇದ್ದಾಗ ಆಗ ಪೆಟ್ರೋಲ್ ಬೆಲೆ 75.55 ರೂಪಾಯಿ ಆಗಿತ್ತು. 2020ರಲ್ಲಿ ಕಚ್ಚಾತೈಲ ಬೆಲೆ 51.08 ಡಾಲರ್ ಗೆ ಬಂದಾಗ ಪೆಟ್ರೋಲ್ 86.52 ರೂಪಾಯಿ ಆಗಿತ್ತು. 2021ರಲ್ಲಿ 72.22 ಡಾಲರ್ ಆಗಿದ್ದು ಪೆಟ್ರೋಲ್ ಬೆಲೆ 99.81 ರೂಪಾಯಿ ಆಗಿದೆ. ಕಾಂಗ್ರೆಸ್ ಸರ್ಕಾರ ಕಚ್ಚಾತೈಲ ಬೆಲೆ 139 ಡಾಲರ್ ಇದ್ದಾಗ 50 ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡಲಾಗಿತ್ತು, ಆದರೆ ಎನ್ ಡಿಎ ಅವಧಿಯಲ್ಲಿ ಕಚ್ಚಾತೈಲ ಬೆಲೆ 72 ಡಾಲರ್ ಇದ್ದಾಗ ಪೆಟ್ರೋಲ್ 98 ರೂಪಾಯಿ ಆಗಿದೆ’ ಎಂದು ವಿವರಿಸಿದ್ದಾರೆ.

‘2014ರಲ್ಲಿ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 9.84% ರಷ್ಟು ತೆರಿಗೆ ಹಾಕಲಾಗಿತ್ತು. ಈಗ 31.90% ತೆರಿಗೆ ಹಾಕಲಾಗುತ್ತಿದೆ. ಡೀಸೆಲ್ ಮೇಲೆ ಆಗಿನ ಸರ್ಕಾರ 3.56% ತೆರಿಗೆ ಹಾಕಿದರೆ ಈಗಿನ ಸರ್ಕಾರ 31.80% ಗೆ ಏರಿಕೆಯಾಗಿದೆ. ಅಲ್ಲಿಗೆ ಡೀಸೆಲ್ ಮೇಲಿನ ತೆರಿಗೆಯನ್ನು 10 ಪಟ್ಟು ಹೆಚ್ಚು ಮಾಡಲಾಗಿದೆ. ಇದರಿಂದ ಮಧ್ಯಮವರ್ಗ, ಕೆಳ ವರ್ಗದವರಿಗೆ ಹೊರೆಯಾಗಿದೆ. ಈ ಮಧ್ಯೆ ಬಿಜೆಪಿ ಸರ್ಕಾರ ಇದಕ್ಕೆ ಕಾಂಗ್ರೆಸ್ ಮೆಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದ್ದಾರೆ.
‘ಯುಪಿಎ ಅವಧಿಯಲ್ಲಿ ಪೆಟ್ರೋಲ್ ಬಾಂಡ್ ಗಳನ್ನು ಮಾರಾಟ ಮಾಡಲಾಗಿತ್ತು. ಈವರೆಗೂ 1.30 ಲಕ್ಷ ಕೋಟಿಯಷ್ಟು ಆಯಿಲ್ ಬಾಂಡ್ ಗಳನ್ನು ನೀಡಲಾಗಿದೆ. ಇದನ್ನು 2002ರಲ್ಲಿ ವಾಜಪೇಯಿ ಅವರ ಸರ್ಕಾರ ಇದ್ದಾಗ ಆರಂಭಿಸಲಾಗಿತ್ತು. ಆಗಿನ ಎನ್ ಡಿಎ ಸರ್ಕಾರ 9 ಸಾವಿರ ಕೋಟಿಯಷ್ಟು ತೈಲ ಬಾಂಡ್ ವಿತರಣೆ ಮಾಡಿತ್ತು. ಅದನ್ನೇ ಯುಪಿಎ ಸರ್ಕಾರ ಮುಂದುವರಿಸಿತ್ತು. ಇದರ ಬಡ್ಡಿ ಹೊರೆಯನ್ನು ನಾವು ಹೊತ್ತಿದ್ದು, ಹೀಗಾಗಿ ಜನರ ಮೇಲೆ ತೆರಿಗೆ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಕೇಂದ್ರ ಸರ್ಕಾರ ಈ ಹೊರೆ ನಿಭಾಯಿಸಲು ಎಷ್ಟು ಹಣ ಖರ್ಚು ಮಾಡಿದೆ ಎಂಬ ಲೆಕ್ಕ ನೀಡಬೇಕು. ಆವರೆಗೂ ತೈಲ ಬಾಂಡ್ ಗಳನ್ನು ವಾಪಸ್ ಮಾಡಿರುವುದು ಕೇವಲ ಮೂರೂವರೆ ಸಾವಿರದಷ್ಟು ಮಾತ್ರ’ ಎಂದಿದ್ದಾರೆ.

‘ಕೇಂದ್ರ ಸರ್ಕಾರ ಇತರೆ ಮೂಲಗಳಿಂದ ಸಂಗ್ರಹಿಸಬೇಕಾದ ತೆರಿಗೆ ಪ್ರಮಾಣ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸಲು ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡುತ್ತಿದೆ. ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಇದು ಕರ್ನಾಟಕದ 10 ವರ್ಷಗಳ ಬಜೆಟ್ ಆಗಿದೆ. ಪ್ರಧಾನಮಂತ್ರಿಗಳು ಹಾಗೂ ಅವರ ಮಂತ್ರಿಗಳು ಹೀಗೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು’.‘ಕಾಂಗ್ರೆಸ್ ಸರ್ಕಾರ 70 ವರ್ಷಗಳಲ್ಲಿ 50 ಲಕ್ಷ ಕೋಟಿ ಸಾಲ ಮಾಡಿತ್ತು. ಆದರೆ ಬಿಜೆಪಿ ಮೋದಿ ಅವರ ಅವಧಿಯಲ್ಲಿ 50 ಲಕ್ಷ ಕೋಟಿ ಸಾಲ ಮಾಡಿದೆ. ಒಂದು ಕಡೆ ಆತ್ಮನಿರ್ಭರ ಭಾರತ ಕಟ್ಟುತ್ತೇವೆ ಎನ್ನುವ ಬಿಜೆಪಿ, ಕಾಂಗ್ರೆಸ್ 70 ವರ್ಷದಲ್ಲಿ ಮಾಡಿದ ಸಾಲವನ್ನು ಬಿಜೆಪಿ 7 ವರ್ಷಗಳಲ್ಲಿ ಮಾಡಿದೆ. ಆತ್ಮನಿರ್ಭರ ಭಾರತ ಎಂಬುದು ಬೋಗಸ್ ಘೋಷಣೆಯಾಗಿದೆ. ಕಾಂಗ್ರೆಸ್ ದೇಶದ ಜನರಿಗೆ ಕೊಂಡುಕೊಳ್ಳಬಹುದಾದ ಬೆಲೆಗೆ ಅಡುಗೆ ಅನಿಲ ಪೂರೈಸಿದೆ. ಆದರೆ ಬಿಜೆಪಿ 7 ವರ್ಷದಲ್ಲಿ ಅಡುಗೆ ಅನಿಲದ ದರ ದುಪ್ಪಟ್ಟು ಮಾಡಿ ಸುಲಿಗೆ ಮಾಡುತ್ತಿದೆ’ ಎಂದು ವಿವರಿಸಿದ್ದಾರೆ.






