ಇಂದಿನಿಂದ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಆರಂಭವಾಗುತ್ತಿದೆ. ಜನವರಿ 3ರಂದು ಮಕ್ಕಳ ಲಸಿಕಾ ಅಭಿಯಾನ ಆರಂಭಗೊಂಡಿದ್ದು ಜನವರಿ 10 ರಿಂದ ಮೂರನೇ ಡೋಸ್ ಎಂದರೆ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಜನವರಿ 3ರಂದು ಮಕ್ಕಳ ಲಸಿಕೆ ಆರಂಭಗೊಂಡರೂ ಮಂದಗತಿಯಲ್ಲಿ ಸಾಗುತ್ತಿದೆ. ಹಲವು ಕಾರಣಗಳಿಂದ ಮಕ್ಕಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನಡುವೆ ಪೋಷಕರೂ ಕೂಡ ಲಸಿಕೆ ಬಗ್ಗೆ ಅಪನಂಬಿಕೆ ಹೊಂದಿದ್ದು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಆದರೂ ಆರೋಗ್ಯ ಇಲಾಖೆ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಎಲ್ಲೆಡೆ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಕರೋನಾ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆ ಬೂಸ್ಟರ್ ಡೋಸ್ ಗೆ ಬೇಡಿಕೆ ಹೆಚ್ಚಾಗಿತ್ತು. ಕೋಮಾರ್ಬಿಟ್ ರೋಗಿಗಳಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯತೆ ಇದೆ ಎಂಬ ನೆಲೆಗಟ್ಟಿನಲ್ಲಿ ತಜ್ಞರು ಮೂರನೇ ಡೋಸ್ ನೀಡುವ ಬಗ್ಗೆ ಸಲಹೆಯನ್ನು ನೀಡಿದ್ದರು. ಇದನ್ನು ಪುರಸ್ಕರಿಸಿದ ICMR ಕೇಂದ್ರ ಸರ್ಕಾರ ಮೂರನೇ ಡೋಸ್ ನೀಡುವ ಬಗ್ಗೆ ವರದಿ ಒಪ್ಪಿಸಿತ್ತು. ಇದನ್ನು ಒಪ್ಪಿಕೊಂಡ ಒಕ್ಕೂಟ ಸರ್ಕಾರ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲು ಚಾಲನೆ ನೀಡಿದೆ. ಅಂದಹಾಗೆ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಈ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಬೂಸ್ಟರ್ ಡೋಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು :
ಮೂರನೇ ಡೋಸ್ ಪಡೆಯಲು ಹೊಸದಾಗಿ ಆನ್ ಲೈನ್ ನೋಂದಣಿ ಮಾಡುವ ಅಗತ್ಯವಿಲ್ಲ. ಅದಾಗಿಯೂ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ. ಮೊದಲು ಯಾವ ಲಸಿಕೆ ಪಡೆದಿರುತ್ತಾರೋ ಅದೇ ಲಸಿಕೆಯನ್ನಷ್ಟೇ ಮೂರನೇ ಡೋಸ್ ಆಗಿ ಪಡೆಯಬೇಕು. (ಮೊದಲೆರಡು ಬಾರಿ ಕೋವ್ಯಾಕ್ಸಿನ್ ಪಡೆದಿದ್ದರೆ ಮೂರನೇ ಬಾರಿಯೂ ಕೋವ್ಯಾಕ್ಸಿನ್ ಅನ್ನೇ ಪಡೆಯುವುದು ಕಡ್ಡಾಯ). ಮೊದಲೆರಡು ಡೋಸ್ ಪಡೆದು 9 ತಿಂಗಳು (39 ವಾರಗಳು) ಕಳೆದಿರಬೇಕು. ಮೂರನೇ ಡೋಸ್ ಪಡೆಯಲು ಬರುವಾಗ ಮೊದಲೆರಡು ಬಾರಿ ಪಡೆದ ಲಸಿಕಾ ಪ್ರಮಾಣ ಪತ್ರ ಹೊಂದಿರಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಲಸಿಕಾ ಕೇಂದ್ರಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಬಿಬಿಎಂಪಿ ಪಿಎಚ್ ಸಿ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ.
ಇಂದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿಧ್ಯಾಲಯದಲ್ಲಿ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು ಬೂಸ್ಟರ್ ಡೋಸ್ ಪಡೆಯಲು 21 ಲಕ್ಷ ಮಂದಿ ಅರ್ಹ ಫಲಾನುವಭವಿಗಳಿದ್ದಾರೆ. ಈ ಪೈಕಿ ಆರೋಗ್ಯ ಕಾರ್ಯಕರ್ತರು 6 ಲಕ್ಷ, ಕರೋನಾ ವಾರಿಯರ್ಸ್ 7 ಲಕ್ಷ ಹಾಗೂ 60 ವರ್ಷ ಮೇಲ್ಪಟ್ಟ ಮತ್ತು ಅನಾರೋಗ್ಯ ಇರುವವರು 8 ಲಕ್ಷ ಮಂದಿ ಇದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸದ್ಯ ಇಡೀ ದೇಶದಲ್ಲಿ 148 ಕೋಟಿ ಡೋಸ್ ಲಸಿಕೆ ಹಂಚಿಕೆಯಾಗಿದೆ. ಈ ಪೈಕಿ 91% ನಷ್ಟು ಜನರು ಮೊದಲ ಡೋಸ್ ಪಡೆದುಕೊಂಡಿದ್ದಾರೆ. 66% ನಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಒಂದು ವಾರಗಳ ಹಿಂದೆಯಷ್ಟೇ ಲಸಿಕೆ ಅಭಿಯಾನ ಆರಂಭಿಸಿದ್ದು, ಈಗಾಗಲೇ ದೇಶದ 17% ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.