ʼಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ರಾಜ್ಯ ಸರಕಾರವು ₹ 15 ಸಾವಿರ ಕೋಟಿಗೂ ಹೆಚ್ಚು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆʼ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದೆ.

ʼಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಮತ್ತು ಜಲ ಸಂಪನ್ಮೂಲ ಇಲಾಖೆಯಲ್ಲಿ ಅಂದಾಜು ತಲಾ ₹ 3,000 ಕೋಟಿ ,ಲೋಕೋಪಯೋಗಿ ಇಲಾಖೆಯಲ್ಲಿ₹ 4,500 ಕೋಟಿಯಷ್ಟು ಬಿಲ್ ಪಾವತಿಸಲು ಬಾಕಿ ಇದೆʼ ಎಂದು ಮೂಲಗಳು ತಿಳಿಸಿದೆ.
ʼ2019 ರ ಜುಲೈ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯು ಗುತ್ತಿಗೆದಾರರಿಗೆ ಪಾವತಿಸಬೇಕಾದ ಮೊತ್ತ ಸುಮಾರು ₹ 1,300 ಕೋಟಿಯಿಂದ ₹ 1,500 ಕೋಟಿಯಷ್ಟಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಮೊತ್ತ ಮೂರು ಪಟ್ಟು ಹೆಚ್ಚಿದೆ. ಅತೀ ಹೆಚ್ಚು ಮೊತ್ತ ಪಾವತಿಗೆ ಬಾಕಿ ಇರುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕೂಡಾ ಸೇರಿದೆʼ ಎಂದು ತಿಳಿಸಿದೆ.
ʼಕುಮಾರಸ್ವಾಮಿ ನೇತೃತೃತ್ವದ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ವೇಳೆಗೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರ ಬಾಕಿ ಮೊತ್ತ ₹ 4,500 ಕೋಟಿಯಿಂದ ₹ 5,000 ಕೋಟಿಯಷ್ಟಿತ್ತು. ನಂತರದ ದಿನಗಳಲ್ಲಿ ಈ ಮೊತ್ತ ಹೆಚ್ಚುತ್ತಲೇ ಹೋಗಿದೆ. ಅಲ್ಲದೆ, ಕೋವಿಡ್ ಮತ್ತು ಲಾಕ್‌ಡೌನ್ ಕಾರಣ ವರಮಾನದಲ್ಲಿ ಕುಸಿತ ಉಂಟಾಗಿದೆ. ಅದರಲ್ಲೂ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಭಾರಿ ಕೊರತೆ ಆಗಿದೆ. ಹೀಗಾಗಿ, ಬಿಲ್ ಪಾವತಿಗೆ ಉಳಿದ ಮೊತ್ತವೂ ಏರಿಕೆ ಆಗಿದೆʼ ಎಂದು ವಿವರಿಸಿದೆ..
ʼಹಿಂದೆಂದೂ ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇರಲಿಲ್ಲ. ‘ಬಿಲ್ ಬಾಕಿ ಸಾಮಾನ್ಯವಾಗಿದ್ದು, ಪಾವತಿಗೆ ಉಳಿದುಕೊಂಡಿರುವ ಮೊತ್ತವನ್ನು ಪಾವತಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. 2018–19 ರಿಂದಲೇ ಬಿಲ್ ಬಾಕಿ ಉಳಿದುಕೊಂಡಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ʼಈ ಹಿಂದಿನ ವರ್ಷಗಳಲ್ಲಿ ಬಿಲ್ ಪಾವತಿ ವಿಳಂಬವಾಗುತ್ತಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣಕ್ಕೆ ತಲುಪಿದ ಬಗ್ಗೆ ನನಗಂತೂ ಗೊತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಬಿಲ್‌ಗಳು ಪಾವತಿಗೆ ಬಾಕಿ ಇದ್ದರೂ, ಇದು ಸಹಜ ಪ್ರಕ್ರಿಯೆ. ಪಾವತಿಗೆ ಬಾಕಿ ಇರುವ ₹ 15 ಸಾವಿರ ಕೋಟಿಯಲ್ಲಿ ಬಹುತೇಕ ಬಿಲ್‌ಗಳು ಹಿಂದಿನ ಸರ್ಕಾರದ ಅವಧಿಯದ್ದು. ಎಲ್ಲ ಬಾಕಿ ಬಿಲ್‌ಗಳನ್ನು ನಾವು ಪಾವತಿಸುತ್ತಿದ್ದೇವೆ. ವಿವಿಧ ಮೂಲಗಳಿಂದ ಬರಬೇಕಾಗಿದ್ದ ರಾಜ್ಯದ ವರಮಾನದಲ್ಲಿ ಕುಂಠಿತವಾಗಿದೆ. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಬಿಲ್ ಪಾವತಿಯ ಮೇಲೆಯೂ ಪರಿಣಾಮ ಬೀರಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
