ಬೆಂಗಳೂರು(Bengaluru) : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕ (Karnataka) 3 ನೇ ಸ್ಥಾನದಲ್ಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಈಗ ಅಪರಾಧಗಳ ರಾಜಧಾನಿ, ಸೈಬರ್ ಅಪಾರಾಧಗಳ ಕೇಂದ್ರ ಎಂಬ ಕುಖ್ಯಾತಿಗೆ ಒಳಗಾಗಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ.ನಷ್ಟು ಸೈಬರ್ ವಂಚನೆ ನಡೆದಿದೆ. ಬಿಜೆಪಿ ಅವಧಿಯ 2020-21 ರಲ್ಲಿ 6,422 ಸೈಬರ್ ಅಪರಾಧ ಪ್ರಕರಣ ದಾಖಲಾಗಿತ್ತು. 2023 ರಲ್ಲಿ 17,623 ಪ್ರಕರಣ ದಾಖಲಾಗಿದೆ. ಬೆಂಗಳೂರು ಈಗ ಸೇಫ್ ಸಿಟಿ ಬದಲು ಕ್ರೈಂ ಸಿಟಿ ಎಂಬ ಹೆಸರು ಪಡೆದಿದೆ. ಕೆಎಫ್ ಡಿ ಮೊದಲಾದ ಸಂಘಟನೆಗಳ ಮೇಲಿದ್ದ ಪ್ರಕರಣ ಹಿಂಪಡೆದಿರುವುದರಿಂದ ದುಷ್ಕರ್ಮಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದರು.
ಗುಪ್ತಚರ ದಳ ಹಾಗೂ ಪೊಲೀಸ್ ಇಲಾಖೆಯಿಂದ ಕಾನೂನು ಕಾಪಾಡುವ ಕೆಲಸ ನಡೆಯುತ್ತಿಲ್ಲ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಮಾಜಿ ಸಚಿವ ಕೆ.ಗೋಪಾಲಯ್ಯ (K Gopalaiah) ಅವರಿಗೆ ಬೆದರಿಕೆ ಬಂದಿರುವುದು ಕಾನೂನು ಅವ್ಯವಸ್ಥೆಗೆ ಉದಾಹರಣೆ. ಮಾಜಿ ಕಾರ್ಪೊರೇಟರ್ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಮತ್ತು ಹೂಡಿಕೆಯ ತಾಣವಾಗಿರುವ ಕರ್ನಾಟಕ ಈಗ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ. NCRB ವರದಿಯ ಪ್ರಕಾರ, ಕಳೆದ ವರ್ಷ 1,80,742 ಪ್ರಕರಣ ದಾಖಲಾಗಿದೆ. ಇದು ಬಿಜೆಪಿ ಅವಧಿಗಿಂತ ಶೇ.46 ಕ್ಕೂ ಅಧಿಕ. ಹಿರಿಯ ನಾಗರಿಕರ ವಿರುದ್ಧ ನಡೆದ ಅಪರಾಧಿ ಚಟುವಟಿಕೆ 50 ಸಾವಿರದಷ್ಟು ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಲೀಪರ್ ಸೆಲ್ ಕೇಂದ್ರ: ಮಹಾಪುರುಷರ ಜಯಂತಿ, ರಾಜಕಾರಣಿಗಳ ಜನ್ಮದಿನದಂದು ಸಾರ್ವಜನಿಕ ಸ್ಥಳದಲ್ಲಿ ಕಟೌಟ್ ಹಾಕುತ್ತಾರೆ. ಆದರೆ ಮೊದಲ ಬಾರಿಗೆ ಕೋಲಾರದಲ್ಲಿ ಸ್ಟೀಲ್ ನಲ್ಲಿ ತಯಾರಿಸಿದ 40 ಅಡಿ ಉದ್ದದ ಲಾಂಗು, ಮಚ್ಚು ಹಾಕಲಾಗಿತ್ತು. ಎನ್ಐಎ ತಂಡ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಂಟು ಶಂಕಿತ ಉಗ್ರರನ್ನು ಪತ್ತೆ ಮಾಡಿದ್ದು, ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಬಳ್ಳಾರಿಯಲ್ಲಿ ಬಂಧನಕ್ಕೊಳಗಾದ ಮಹಮ್ಮದ್ ಸುಲೇಮಾನ್ ಕಿಂಗ್ ಪಿನ್ ಆಗಿದ್ದ. ಈತ ಅಮಾಯಕರನ್ನು ಧರ್ಮ ಹಾಗೂ ಹಣದ ಆಮಿಷಕ್ಕೊಳಪಡಿಸುವ ತಜ್ಞನಾಗಿದ್ದ. ಬೆಂಗಳೂರಿನ ಪುಲಕೇಶಿನಗರದಲ್ಲೂ ಶಂಕಿತರನ್ನು ಬಂಧಿಸಲಾಗಿದೆ. ಇವರೆಲ್ಲರೂ ಐಸಿಸ್ ಚಿಂತನೆಗಳನ್ನು ಹೊಂದಿರುವವರು. ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದು, ಈಗ ರಾಜ್ಯ ಸ್ಲೀಪರ್ ಸೆಲ್ ಗಳ ಕೇಂದ್ರವಾಗಿದೆ ಎಂದು ತಿಳಿದು ಆತಂಕವಾಗಿದೆ ಎಂದರು.
ವಂಟಮುರಿ ಪ್ರಕರಣ : ಬೆಳಗಾವಿಯ (belagavi) ವಂಟಮುರಿಯಲ್ಲಿ ನಡೆದ ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇದಕ್ಕೆ ನ್ಯಾಯಾಲಯ ಕೂಡ ಖೇದ ವ್ಯಕ್ತಪಡಿಸಿದೆ. ಈ ಘಟನೆ ಅಧಿವೇಶನದಲ್ಲಿ ಚರ್ಚೆಯೇ ಆಗದಂತೆ ಪೊಲೀಸರು ಮರೆಯಾಗಿಸಿ ಇಟ್ಟಿದ್ದರು. ಮನೆಗೆ ನುಗ್ಗಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಹೊಡೆದರೂ ಅದು ಪೊಲೀಸರಿಗೆ ತಿಳಿಯಲಿಲ್ಲ. ಸಿನಿಮಾದಂತೆಯೇ ಎಲ್ಲ ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಇದು ಕೂಡ ಉಚಿತ ಭಾಗ್ಯವೇ ಎಂದು ಪ್ರಶ್ನಿಸಿದರು.
#bengaluru #karnataka #congressgovrnment #rashok






