ಗೋಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ತೀರ್ಥಹಳ್ಳಿಯಲ್ಲಿ ಗೋಕಳ್ಳರು ಯುವಕರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳೂ ಸಹ ಬಿಜೆಪಿ ನಾಯಕರು ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತಿರುಗಿಬಿದ್ದಿದ್ದವು. ಈ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಪೊಲೀಸರ ಮೇಲೆಯೇ ಗೂಬೆ ಕೂರಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಜಾನುವಾರ ಕಳ್ಳಸಾಗಣೆ ವಿಶೇಷ ಕಾನೂನನ್ನ ನಮ್ಮ ಸರ್ಕಾರ ಜಾರಿಗೆ ತಂದಿದೆ. ಆದರೂ ಸಹ ಅಲ್ಲಲ್ಲಿ ಜಾನುವಾರಗಳನ್ನ ಕಳ್ಳ ಸಾಗಣೆ ಮಾಡೋದು, ಕಡಿದು ಮಾರುವುದು ನಡೀತಾನೇ ಇದೆ. ತೀರ್ಥಹಳ್ಳಿಯಲ್ಲಿ ಗೋ ಕಳ್ಳಸಾಗಣೆ ತಡೆಯಲು ಎರಡು ಮೂರು ಯುವಕರು ಪ್ರಯತ್ನಿಸಿದ್ದಾರೆ. ಅವರ ಬೈಕ್‌ಗೆ ಡಿಕ್ಕಿ ಹೊಡಿಸಿ ಸಾಯಿಸುವ ಪ್ರಯತ್ನವನ್ನ ಗೋಕಳ್ಳರು ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರು ಹೋಗಿ ನಿರ್ಬಂಧ ಮಾಡಿದ್ದಾರೆ. ಕಾನೂನು ಕ್ರಮ ಜರುಗಿಸಿದ್ದಾರೆ. ಸಾವು ಬದುಕಿನ ಹೋರಾಟ ನಡೆಸುತ್ತಿದ್ದವರನ್ನ ನಾವೂ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್‌ಗೆ ಕಳುಹಿಸಿಕೊಟ್ಟಿದ್ದೇವೆ. ನಿನ್ನೆ ಮುಂಜಾನೆಯೂ ಸಹ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಯುವಕರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಬಂದಿದ್ದೇನೆ. ಸದ್ಯ ಯುವಕರ ಜೀವಕ್ಕೇನೂ ಅಪಾಯವಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಗೋಕಳ್ಳ ಸಾಗಣೆಯನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಯಂತ್ರಣಕ್ಕೆ ತಂದಿದ್ದಾರೆ. ಗೋವಧೆ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಎಲ್ಲಾ ಕಡೆ ಗೋ ಸಾಗಾಣಿಕ ಅಕ್ರಮ ನಡೆಯುತ್ತಿರುವುದು ನಿಜ. ಕೆಲವೆಡೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಗೋವಧೆ ನಿರತರ ಜೊತೆಗೆ ಶಾಮೀಲಾಗಿಯೂ ಸಹ ಕೆಲಸ ಮಾಡುತ್ತಿದ್ದಾರೆ. ಯಾರದನ್ನ ತಿಂದೇ ಬದುಕಬೇಕು, ಸಾಗಣೆ ಮಾಡಿಯೇ ಬದುಕಬೇಕು ಎಂದು ಅಂದುಕೊಂಡಿದ್ದಾರೋ ಅವರನ್ನ ಸುಮ್ಮನೇ ಬಿಡೋದಿಲ್ಲ
ಕೋರ್ಟ್ ಆದೇಶವೂ ಇದೆ, ಬಿಗಿಯಾದ ಕಾನೂನನ್ನೂ ಮಾಡಿಕೊಟ್ಟಿದ್ದೇವೆ. ಹಾಗೇನಾದರೂ ಮುಲಾಜು ನೋಡುತ್ತಾರೆ ಎಂದರೆ ಆಯಾ ಠಾಣೆಯ ಪೊಲೀಸರ ಮೇಲೆ ಕ್ರಮ ಜರುಗಿಸುತ್ತೇವೆ. ತೀರ್ಥಹಳ್ಳಿಯಲ್ಲಿ ಗೋಕಳ್ಳರ ವಿರುದ್ಧ ಪ್ರತಿಭಟನೆಯಾಗಿದ್ದು ಜನರ ಸಹಜ ಪ್ರತಿಕ್ರಿಯೆ. ನಮ್ಮ ಗೋವುಗಳ ಸಂಖ್ಯೆಯೂ ಸಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ ಎಂದು ಆರಗ ಹೇಳಿದರು.
ಇನ್ನು ಬಿಜೆಪಿ ಶಾಸಕ ವಿಶ್ವನಾಥ್‌ರನ್ನ ಕೊಲೆ ಮಾಡಲು ಸಂಚು ಹೂಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಇದರ ಹಿಂದೆ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸರಿಗೆ ಸೂಚನೆ ನೀಡಿ ವಿಶ್ವನಾಥ್ ಗೆ ವಿಶೇಷ ರಕ್ಷಣೆ ನೀಡಲಾಗಿದೆ. ಅವರ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನ ವಿಶೇಷವಾಗಿ ಪರಿಗಣಿಸಲಾಗಿದೆ. ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಗಳನ್ನ ತಳ್ಳಬಹುದು ಆದರೆ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೊಲೆ ಸಂಚು ಆರೋಪಕ್ಕೆ ಪೂರಕವಾಗಿ ಸಾಕ್ಷ್ಯಾಧಾರಗಳಿವೆ. ಹಫ್ತಾ ಕೊಟ್ಟು ಕೊಲೆ ಮಾಡಲು ಹೇಳ್ತಾರೆ ಅಂದರೆ ಅದು ದುರಾದೃಷ್ಟ ಅದು ಆಗಬಾರದು ನಮ್ಮ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಾರೆ. ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿ ಸ್ವತಂತ್ರವಾಗಿ ಸಮಂಜಸವಾಗಿ ನ್ಯಾಯಬದ್ಧವಾಗಿ ತನಿಖೆ ಮಾಡಲು ಹೇಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.