ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರತ್ಯೇಕ ಪೊಲೀಸ್ ಠಾಣಾ ಸ್ಥಾನಮಾನ ನೀಡುವ ರಾಜ್ಯ ಸರಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಲೋಕಾಯಕ್ತ ವ್ಯಾಪ್ತಿಗೆ ಎಸಿಬಿ ವರ್ಗಾಯಿಸುವಂತೆ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಾಧೀಶ ಬಿ. ವೀರಪ್ಪ, ನ್ಯಾಯಾಧೀಶರಾದ ಕೆಎಸ್ ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ಆದೇಶ ಹೊರಡಿಸಿದ್ದು, ಎಸಿಬಿಗೆ ಪೊಲೀಸ್ ಠಾಣಾ ಸ್ಥಾನಮಾನ ನೀಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
2014ರಲ್ಲಿ ರಚನೆಯಾದ ಎಸಿಬಿಗೆ ಪೊಲೀಸ್ ಠಾಣಾ ಸ್ಥಾನಮಾನ ನೀಡುವ ಕಾಯ್ದೆಯನ್ನು ರದ್ದುಗೊಳಿಸಿದೆ. ಭ್ರಷ್ಟಾಚಾರ ಕುರಿತ ತನಿಖೆಯನ್ನು ಲೋಕಾಯುಕ್ತ ಪೊಲೀಸರೇ ನಡೆಸಬೇಕು. ಲೋಕಾಯುಕ್ತ ವ್ಯಾಪ್ತಿಯಲ್ಲಿ ಎಸಿಬಿ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

ಎಸಿಬಿ ಕಾಯ್ದೆ ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ದೂರುಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ತರಬೇಕು ಹಾಗೂ ಮೂರು ವರ್ಷಗಳ ಅವಧಿಗೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡಿದಂತಾಗಿದೆ.