ಗುಜರಾತ್ ನ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತ ಸೇರಿಸುವ ಕೆಲಸ ಅಂತಿಮ ಹಂತಕ್ಕೆ ತಲುಪಿದೆ. ಈ ಹಿನ್ನೆಲೆ ರಾಜ್ಯದಲ್ಲಿನ ಶಾಲಾ ಪಠ್ಯಕ್ರಮದಲ್ಲೂ ಭಗವದ್ಗೀತೆ ಸೇರಿಸುವ ಚರ್ಚೆ ಜೋರಾಗಿ ನಡೀತಿದೆ. ಈ ವಿಚಾರವೀಗ ರಾಜಕೀಯ ಮೇಲಾಟಗಳಿಗೆ ದಾರಿ ಮಾಡಿಕೊಟ್ಟಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಬಿಜೆಪಿ ಯೋಚನೆ?
ರಾಜ್ಯದ ಪ್ರಾಥಮಿಕ ಶಾಲಾ ಹಂತದ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಯಾಗಯತ್ತಾ ಅನ್ನೋ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಗುಜರಾತ್ ನಲ್ಲಿ 6-8 ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆಯನ್ನ ಸೇರಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಪ್ರಾಥಮಿಕ ಶಾಲಾ ಹಂತದ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಕುರಿತು ಚರ್ಚೆ ಶುರುವಾಗಿದೆ.ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್, ಮಕ್ಕಳಲ್ಲಿ ನೀತಿಪಾಠ ಹೆಚ್ಚಿಸುವ ಸಲುವಾಗಿ ಪಠ್ಯಕ್ರಮ ಅಳವಡಿಸುವ ಬಗ್ಗೆ ಪ್ರಸ್ತಾಪ ಇದೆ. ಅದರಲ್ಲಿ ಏನಿರಬೇಕು ಅನ್ನೋದನ್ನ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅದಾಗಿಯೂ ಈ ಸಾಲಿನ ಪಠ್ಯದಲ್ಲಿ ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾಥಮಿಕ ಶಾಲಾ ಹಂತದ ಪಠ್ಯಕ್ಕೆ ಭಗವದ್ಗೀತೆ ಪಠ್ಯ ಸೇರಿಸುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ನಾನು ಆರಂಭದಲ್ಲೇ ವಿರೋಧ ಮಾಡಿದ್ದೆ. ಆದ್ರೆ ಎಲ್ಲಾ ತಿಳಿದವರು ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಹೊಸದಾಗಿ ಏನನ್ನೂ ಸೇರಿಸುವ ಅಗತ್ಯ ಇಲ್ಲ. ಎಲ್ಲಾ ಧರ್ಮದ ಆಚಾರ ವಿಚಾರಗಳನ್ನ ಜನ ತಿಳಿದುಕೊಳ್ಳೊದ್ರಲ್ಲಿ ತಪ್ಪಿಲ್ಲ. ಈಗಾಗಲೇ ಭಗವದ್ಗೀತೆ, ರಾಮಾಯಣ ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರುಪಾಯಿ ಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ರು. ಆದ್ರೆ ಬಿಜೆಪಿಯವರು ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಹಿಜಾಬ್ ಆಯ್ತು ಈಗ ಭಗವದ್ಗೀತೆ ಸರದಿ.. ರಾಜಕೀಯ ಮೇಲಾಟ ಶುರು!
ಈಗಷ್ಟೇ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಗೊಂದಲ ಅಲ್ಪ ಮಟ್ಟಿಗೆ ತಣ್ಣಗಾಗಿದೆ. ಇದರ ನಡುವೆ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎನ್ನುವ ಬೇಡಿಕೆ ಹಲವು ಪರ ವಿರೋಧಕ್ಕೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ನಾಯಕರು ಮುಂದಿನ ಸಾಲಿನಲ್ಲಿ ಈ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದರೆ ಕಾಂಗ್ರೆಸ್ ನಾಯಕರು ಇದೊಂದು ರಾಜಕೀಯ ತಂತ್ರಗಾರಿಕೆ ಎಂದು ಜರಿದಿದ್ದಾರೆ. ಒಟ್ಟಿನಲ್ಲಿ ದಿನಕ್ಕೊಂದು ವಿಷಯಗಳು ಬಂದು ಚರ್ಚೆಯಾಗುತ್ತಿದ್ದು, ಪರ ವಿರೋಧಗಳು ವ್ಯಕ್ತವಾಗುತ್ತಿದೆ.