ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಅವಕಾಶ ನೀಡದೆ ನಿರ್ಬಂಧಿಸಿರುವ ಘಟನೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಜಾಬ್ ಮೇಲಿನ ನಿಷೇಧವು ಧಾರ್ಮಿಕ ನಂಬಿಕೆಯ ಹಕ್ಕನ್ನು ಚ್ಯುತಿಗೊಳಿಸುತ್ತದೆ ಎಂದು ಅಂತರಾಷ್ಟ್ರೀಯ ವಲಯದಲ್ಲೂ ಕರ್ನಾಟಕದ ಹಿಜಾಬ್ ನಿಷೇಧದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ʼಹೊರದೇಶದವರು ಹಾಗೂ ಭಾರತಕ್ಕೆ ಸಂಬಂಧಪಡದವರು ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕಬಾರದು, ಹೊರಗಿನವರ ಯಾವ ಪ್ರತಿಕ್ರಿಯೆಯೂ ಸ್ವೀಕಾರ್ಹವಲ್ಲ ಎಂದು ಹೇಳಿ ಸರ್ಕಾರಕ್ಕಾಗುತ್ತಿರುವ ಮುಜುಗರವನ್ನು ತಪ್ಪಿಸಲು ನೋಡಿದೆ.
ಇನ್ನು, ಹಿಜಾಬ್ ವಿವಾದವನ್ನಾಗಿ ಮಾಡಿರುವ ಹಿಂದೆ ಪ್ರಭುತ್ವದ ಕಾಣದ ಕೈ ಇದೆ ಎಂಬ ವಿಶ್ಲೇಷಣೆಗಳಿವೆ. ಹಿಜಾಬ್ ವಿರೋಧಿಸಿ ಬಂದ ಕೇಸರಿಧಾರಿ ಮಕ್ಕಳಿಗೆ ಸ್ಥಳೀಯ ಹಿಂದೂ ಸಂಘಟನೆಗಳ, ಬಿಜೆಪಿ ಮುಖಂಡರ ಕುಮ್ಮಕ್ಕು ಇದೆ ಎನ್ನುವುದರ ಮೇಲೆ ಬೆಳಕು ಚೆಲ್ಲುವಂತಹ ಹಲವು ವಿಡಿಯೋ ತುಣುಕುಗಳು ವೈರಲ್ ಆಗಿದ್ದವು. ಕಾರಿನಲ್ಲಿ ಬಂದು ಕೇಸರಿ ಶಾಲು ಮತ್ತು ಪೇಟವನ್ನು ವಿದ್ಯಾರ್ಥಿಗಳಿಗೆ ಹಂಚುವ ಹಾಗೂ ಏಕಾಏಕಿ ಪೀಣ್ಯ ಕೈಗಾರಿಕಾ ವಲಯದ ಒಂದು ಕಾರ್ಖಾನೆಯಿಂದ ಸಾವಿರಾರು ಕೇಸರಿ ಶಾಲು ಮತ್ತು ರುಮಾಲು ಖರೀದಿಯಾಗಿರುವ ಕುರಿತು ಕೇಳಿಬಂದ ಆರೋಪಗಳು ಹಿಜಾಬ್ ವಿವಾದದಲ್ಲಿ ಪ್ರಭುತ್ವದ ಶಾಮೀಲಾತಿಯ ಬಗ್ಗೆ ಬೆಳಕು ಚೆಲ್ಲಿತ್ತು.
ಇದೀಗ, ಡೆಕ್ಕನ್ ಹೆರಾಲ್ಡ್ ಪ್ರಕಟಿಸಿರುವ ವರದಿಯು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಇನ್ನಷ್ಟು ಗುಮಾನಿಗಳು ಏಳುವಂತೆ ಮಾಡಿದೆ.
ಹಿಜಾಬ್ ನಿಷೇಧದ ಗಲಾಟೆ ತೀವ್ರಗೊಳ್ಳುತ್ತಿದ್ದಂತೆ, ರಾಜ್ಯ ಸರ್ಕಾರವು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ, ವಿಶೇಷವಾಗಿ, 1 ರಿಂದ 10 ನೇ ತರಗತಿಗೆ ದಾಖಲಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಅಂಕಿಅಂಶವನ್ನು ಸದ್ದಿಲ್ಲದೆ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ 17,39,742 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದು, ಒಟ್ಟು 1,55,104 ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣದಲ್ಲೇ ಇದ್ದಾರೆ. ನಂತರದ ಸ್ಥಾನದಲ್ಲಿ ಕಲಬುರಗಿ 1,31,802, ಮತ್ತು ಬೆಂಗಳೂರು ಉತ್ತರದಲ್ಲಿ 1,22,993 ವಿದ್ಯಾರ್ಥಿಗಳು ಇದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಮುಸ್ಲಿಂ ವಿದ್ಯಾರ್ಥಿಗಳಿದ್ದು, ಒಟ್ಟು ಸಂಖ್ಯೆ 9,603 ಎಂದು ವರದಿಯಾಗಿದೆ.
ಈ ನಡುವೆ, ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳು ತಮ್ಮ ಕಾಲೇಜುಗಳಿಗೆ ದಾಖಲಾದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯ ಅಂಕಿ ಅಂಶವನ್ನು ಸಲ್ಲಿಸಲು ಸಹ ಕೇಳಲಾಗಿದೆ ಎಂದು ತಮಗೆ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಹೇಳಿದೆ.
ಸದ್ಯ ನಡೆಯುತ್ತಿರುವ ಹಿಜಾಬ್ ಪ್ರಕರಣದ ವಿವಾದ ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಸೂಕ್ಷ್ಮ ವಲಯಗಳಾಗಿ ವರ್ಗೀಕರಿಸಲು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಯೋಜನೆ ಹಾಕಿರಬಹುದು ಎಂದು ನಾವು ಭಾವಿಸಿರುವುದಾಗಿ ಬೆಂಗಳೂರು ದಕ್ಷಿಣದಲ್ಲಿರುವ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಅಂಕಿ ಅಂಶ ಸಂಗ್ರಹಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಗಳು, ʼವಿಧಾನಮಂಡಲದ ಅಧಿವೇಶನ ಮತ್ತು ಹೈಕೋರ್ಟ್ ವಿಚಾರಣೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆʼ ಎಂದು ಹೇಳಿದ್ದಾರೆ.
“ವಿಧಾನ ಮಂಡಲ ಅಧಿವೇಶ ನಡೆಯುತ್ತಿರುವುದರಿಂದ ಚುನಾಯಿತ ಪ್ರತಿನಿಧಿಗಳು ಅಂಕಿ ಅಂಶ ಕೇಳಬಹುದು, ಅದೂ ಅಲ್ಲದೆ, ಹೈಕೋರ್ಟ್‌ನಲ್ಲಿ ವಿಚಾರಣೆ ಬೇರೆ ನಡೆಯುತ್ತಿರುವುದರಿಂದ ಈ ದತ್ತಾಂಶಗಳು ಬೇಕಾಗಬಹುದು” ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.
ಇನ್ನು ಮಕ್ಕಳ ದತ್ತಾಂಶ ಸಂಗ್ರಹಿಸುವ ಕ್ರಮವನ್ನು ಶಿಕ್ಷಣ ಸಚಿವ ಬಿಸಿ ನಾಗೇಶ್ ಕೂಡಾ ಸಮರ್ಥಿಸಿಕೊಂಡಿದ್ದಾರೆ. ನಡೆಯುತ್ತಿರುವ ಗಲಾಟೆಗಳನ್ನು ಗಮನಿಸದೆ ಎಷ್ಟು ಮಂದಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ ಎನ್ನುವುದು ಈ ಸಂಗ್ರಹದಿಂದ ತಿಳಿದು ಬರುತ್ತದೆ ಎಂದು ಸಚಿವರು ಹೇಳಿದ್ದಾರೆ.
ʼದಿನನಿತ್ಯ ಮಾಧ್ಯಮಗಳಲ್ಲಿ ತಪ್ಪು ಅಂಕಿಅಂಶಗಳು, ಮಾಹಿತಿಗಳು ವರದಿಯಾಗುತ್ತಿದೆ. ಇದನ್ನು ಎದುರಿಸಲು ನಿಜವಾದ ದತ್ತಾಂಶ ಕಲೆ ಹಾಕುತ್ತಿದ್ದೇವೆ. ಹೈಕೋರ್ಟ್‌ನ ಮಧ್ಯಂತರ ಆದೇಶ ಆಧರಿಸಿ ಮನೆಗೆ ಮರಳಿದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ವಿವಿಧ ಅಂಕಿಅಂಶಗಳನ್ನು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡುತ್ತಿದೆ. ವಿದ್ಯಾರ್ಥಿಗಳು ಈ ಸಮಸ್ಯೆಯಿಂದ ನಿಜವಾಗಿಯೂ ತೊಂದರೆಗೀಡಾಗಿದ್ದಾರೆಯೇ ಅಥವಾ ಅಧ್ಯಯನದ ಮೇಲೆ ಕೇಂದ್ರೀಕರಿಸಿದ್ದಾರೆಯೇ ಎಂದು ನೋಡುವುದು ನಮ್ಮ ಉದ್ದೇಶವಾಗಿತ್ತು.” ಎಂದು ಬಿಸಿ ನಾಗೇಶ್ ತಿಳಿಸಿದ್ದಾರೆ.
ರಾಜ್ಯದ 14 ಶಾಲೆಗಳಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ಪಾಲಿಸದ 162 ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಗಿದೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳಿವೆ. ಬೀದರ್ ಜಿಲ್ಲೆ ಒಂದರಲ್ಲೇ 114 ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಗಿದೆ. ಅದೇ ರೀತಿ ಶಿವಮೊಗ್ಗದ ಮೂರು ಶಾಲೆಗಳಿಂದ ಒಟ್ಟು 20 ವಿದ್ಯಾರ್ಥಿನಿಯರು, ಚಿತ್ರದುರ್ಗದ ಎರಡು ಶಾಲೆಗಳಲ್ಲಿ 18 ವಿದ್ಯಾರ್ಥಿನಿಯರು ಮತ್ತು ಚಿಕ್ಕಮಗಳೂರಿನ ಶಾಲೆಯಲ್ಲಿ ಎಂಟು, ಚಿಕ್ಕಬಳ್ಳಾಪುರದ ಇಬ್ಬರು ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದೆ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ.
ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಮುಸ್ಲಿಂ ವಿದ್ಯಾರ್ಥಿನಿಯರ ಅಂಕಿ ಅಂಶಗಳನ್ನು ಸಂಗ್ರಹಿಸುವ ತಮ್ಮ ಕ್ರಮಕ್ಕೆ ಅದೇನೆ ಸಮಜಾಯಿಷಿ ನೀಡಿದರೂ, ವಿವಿಧ ಬಿಜೆಪಿ ಸರ್ಕಾರಗಳ ಧಾರ್ಮಿಕ ತಾರತಮ್ಯದ ನೀತಿಗಳಿಂದ ಈಗಾಗಲೇ ಬಿಜೆಪಿಯೊಂದಿಗೆ ನಂಬಿಕೆ ಕಳೆದುಕೊಂಡಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಇದು ಇನ್ನೊಂದು ಹುನ್ನಾರದಂತೆ ಕಂಡರೆ ಅತಿಶಯೋಕ್ತಿ ಏನಿಲ್ಲ.