ಬೆಳಗಾವಿ: ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ(Winter Session 2025) ರಾಜ್ಯದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ಹೈನುಗಾರಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ರೈತರಿಗೆ ನೀಡುತ್ತಿರುವ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನವನ್ನು ಈ ವರ್ಷದ ಅವಧಿಯಲ್ಲಿ 7 ರೂಪಾಯಿಗೆ ಹೆಚ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸದನಲ್ಲಿ ಮಾತನಾಡಿದ ಅವರು, ನಂಜುಂಡಪ್ಪ ವರದಿ ಜಾರಿಯಾದ ನಂತರದಲ್ಲಿ ಡೈರಿ ಚಟುವಟಿಕೆಗಳು ಹೆಚ್ಚಾಗಿದ್ದು, ಕೆಎಂಎಫ್‌ನಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್, ಗುಲ್ಬರ್ಗ ಕಲಬುರ್ಗಿ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಪ್ರತಿದಿನಕ್ಕೆ 67 ಸಾವಿರ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಳೆ ಮೈಸೂರಿನಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಉತ್ತರ ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ.

ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಒಮ್ಮೆ ಮೂರು ರೂಪಾಯಿ ಮತ್ತೊಮ್ಮೆ 400 ಗಳ ಸಹಾಯಧನವನ್ನು ಹೆಚ್ಚಳ ಮಾಡಿದೆ. ಈ ಮೊತ್ತ ಸಂಪೂರ್ಣವಾಗಿ ರೈತರಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 600 ಕೋಟಿ ಗಳನ್ನು ನಮ್ಮ ಸರ್ಕಾರ ತೀರಿಸಿದೆ. ಮೇವಿನ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 7 ರೂಪಾಗಳ ಪ್ರೋತ್ಸಾಹ ಧನವನ್ನು ಈ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ತಿಳಿಸಿದ್ದಾರೆ.












