ಬೆಂಗಳೂರು : ಯಾವುದೇ ಷರತ್ತುಗಳಿಲ್ಲದೇ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಯ ಸೌಕರ್ಯ ನೀಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಈಗ ಒಂದೊಂದಾಗಿಯೇ ಎಲ್ಲಾ ಯೋಜನೆಗಳಿಗೆ ಷರತ್ತು ವಿಧಿಸಿದೆ. ಗೃಹಲಕ್ಷ್ಮೀ ಯೋಜನೆಗೂ ಇದೀಗ ಮಾನದಂಡ ವಿಧಿಸಲಾಗಿದ್ದು ಈ ಕೆಳಗಿನ ಷರತ್ತುಗಳನ್ನು ಪಾರು ಮಾಡಿದವರಿಗೆ ಮಾತ್ರ ಈ ಮಾಸಿಕ 2000 ಸಾವಿರ ರೂಪಾಯಿ ಸಿಗಲಿದೆ.

ಗೃಹಲಕ್ಷ್ಮೀ ಯೋಜನೆಯ ಷರತ್ತುಗಳು :
1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
3. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಗಳನ್ನು ಜೋಡಣೆ ಮಾಡಬೇಕು.
4. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
5. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಮನೆಯ ಯಜಮಾನಿಗೆ ಆಗಸ್ಟ್ 15ರಿಂದ ಮಾಸಿಕ 2000 ರೂಪಾಯಿ ಸಿಗಲಿದೆ.