ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರವು ರೈತರ ಹೋರಾಟಕ್ಕೆ ಮಣಿದಿದೆ. ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಅನುದಾನಗಳ ಕುರಿತಾಗಿ ವಿವರ ನೀಡಿದರು. ನೀರಾವರಿ, ಬೆಂಬಲ ಬೆಲೆ, ಕೃಷಿ ಉತ್ಪನ್ನ ಖರೀದಿ ಕೇಂದ್ರಗಳ ಸ್ಥಾಪನೆಯ ಕುರಿತಾಗಿ ಮಾತನಾಡದರು. ಆ ಬಳಿಕ ಸರ್ಕಾರವು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಕುರಿತು ಮಾಹಿತಿ ನೀಡಿದರು.
“ಶ್ರೀ ಗುರು ನಾನಕ್ ದೇವ್ ಅವರ ಪ್ರಕಾಶ್ ಪೂರಬ್ ದಿನದಂದು, ಎಲ್ಲ ಪ್ರತಿಭಟನಾ ನಿರತ ರೈತರು ತಮ್ಮ ಮನೆಗಳಿಗೆ ತೆರಳಬೇಕಾಗಿ ವಿನಂತಿಸುತ್ತೇನೆ,” ಎಂದು ಅವರ ಹೇಳಿದರು.
ಹೋರಾಟಕ್ಕೆ ಭಾಗಶಃ ಯಶಸ್ಸು- ಪ್ರಕಾಶ್ ಕಮ್ಮರಡಿ
ಕರ್ನಾಟಕದಲ್ಲಿ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ಈಗಾಗಲೇ ಅನುಷ್ಠಾನಗೊಂಡಿದೆ. ಶೇಕಡಾ 70 ರಿಂದ 80ರಷ್ಟು ಬೆಳೆಗಳಿಗೆ ಎಪಿಎಂಸಿಯಲ್ಲಿ ಸ್ಥಾನ ಇಲ್ಲದಂತಾಗಿದೆ, ಎಂದು ಕರ್ನಾಟಕದ ರೈತ ಹೋರಾಟದ ಮುಂಚೂಣಿ ನಾಯಕರಾಗಿರುವ ಪ್ರಕಾಶ್ ಕಮ್ಮರಡಿಯವರು ಪ್ರತಿಧ್ವನಿಯೊಂದಿಗೆ ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.
“ಹಾಗೆಯೇ ಭೂಮಿ ವ್ವಹಾರ ಶೇ. 60 ಏರಿಕೆ ಕಂಡಿದೆ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಅಂತ ಭಾವಿಸಬಹುದು. ಸದ್ಯಕ್ಕೆ ದೊರೆತಿರುವುದು ಭಾಗಶಃ ಯಶಸ್ಸು ಮಾತ್ರ,” ಎಂದು ಹೇಳಿದ್ದಾರೆ.
ರಾತ್ರೋರಾತ್ರಿ ಬಿಜೆಪಿಯು ತಾನು ರೈತಪರ ಅಂತ ತನ್ನ ಮುಖವಾಡ ಬದಲಾಯಿಸಿ ಚುನಾವಣಾ ರಾಜಕೀಯದ ಲಾಭ ಪಡೆಯಲು ಎಲ್ಲ ಪ್ರಯತ್ನಿಸಲಿದೆ. ಇದರಲ್ಲಿ ಅನುಮಾನವೇ ಇಲ್ಲ. ಹಾಗೆ ಶೀಘ್ರ ತೋರುಗಾಣಿಕೆಗೆ ಬೆಂಬಲ ಬೆಲೆ ನೀಡುವ ಕಾನೂನನ್ನು ತರಬಹುದು. ಜೊತೆಗೆ ಪ್ರಭಾವಿ ಕೆಲ ಮುಖಂಡರುಗಳನ್ನು, ಸೆಳೆದುಕೊಳ್ಳುವುದುಬಹುದು. ಇವೆಲ್ಲದರ ಕುರಿತು ರೈತ ಸಂಘಟನೆಗಳು ಎಚ್ಚರವಹಿಸಬೇಕು, ಎಂದು ಪ್ರಕಾಶ್ ಕಮ್ಮರಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿಯೂ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಹೋರಾಟ ಮುಂದುವರೆಸಲೇ ಬೇಕು, ಎಂದೂ ಅವರು ಹೇಳಿದ್ದಾರೆ.
ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ:
ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಕುರಿತು ಮಾಧ್ಯಮಗಳು ವರದಿ ಮಾಡುತ್ತಿವೆಯಾದರೂ, ದೆಹಲಿ ಗಡಿಗಳ ರೈತ ಹೋರಾಟ ಮುನ್ನೆಡಿಸುತ್ತಿರುವ ಅಖಿಲ ಭಾರತ ಮುಖಂಡತ್ವದ ಜೊತೆ ಚರ್ಚಿಸಿ ಈ ಬೆಳವಣಿಗೆಗಳು ಏನು ಎಂಬುದನ್ನು ತಿಳಿಯಬೇಕಾಗಿದೆ, ಎಂದು ರೈತ ಸಂಘದ ಬಡಗಲಪುರ ನಾಗೇಂದ್ರ ಹಾಗೂ ಜಿ ಸಿ ಬಯ್ಯಾರೆಡ್ಡಿ ಜಂಟಿ ಹೇಳಿಕೆ ನೀಡಿದ್ದಾರೆ.
“ರಾಜ್ಯದ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ನಮ್ಮ ಹೋರಾಟವನ್ನು ಮುಂದುವರೆಸಬೇಕಾಗಿದೆ. ಈ ಬಗ್ಗೆ ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನ ತೆಗೆದುಕೊಂಡು ತಿಳಿಸುವವರೆಗೆ ನವೆಂಬರ್ 26ರ ಹೋರಾಟದ ತಯಾರಿ ಮುಂದುವರೆಸುತ್ತೇವೆ,” ಎಂದು ಹೇಳಿದ್ದಾರೆ.