ಇಸಿ-ಇಇ ನೀತಿಯ ವಾರ್ಷಿಕ ಸಮಗ್ರ ಕ್ರಿಯಾ ಯೋಜನೆಗಳ ಕುರಿತು ಸಮಾಲೋಚನೆ
ಬೆಂಗಳೂರು, ಜೂನ್ 14, 2024: ಕರ್ನಾಟಕ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿ 2022-27ರ ಸಮಗ್ರ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆ ಹಾಗೂ ಇಂಧನ ವಲಯದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲು ನಾಗರಬಾವಿಯ ಕ್ರೆಡಲ್ ಕಚೇರಿಯಲ್ಲಿ ಶುಕ್ರವಾರ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಇಸಿ-ಇಇ ನೀತಿ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿರುವ ಕ್ರೆಡಲ್, ನೀತಿಯ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿತು. ಜತಗೆ, ಆಯಾ ವಲಯ ಉಸ್ತುವಾರಿ ಸಂಸ್ಥೆಗಳ (SROs) ಪಾತ್ರ ಮತ್ತು ಜವಾಬ್ದಾರಿಗಳನ್ನು ಕಾರ್ಯಾಗಾರದಲ್ಲಿ ವ್ಯಾಖ್ಯಾನಿಸಲಾಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ” ಸುಸ್ಥಿರ ಇಂಧನ ಅಭ್ಯಾಸಗಳು ಮತ್ತು ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡುವ ಇಇ- ಇಸಿ ನೀತಿಯ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆ ರೂಪಿಸಲು ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಎಂಎನ್‌ಆರ್‌ಇ ಹಾಗೂ ಬಿಇಇ ಜತೆಗೂ ಕ್ರೆಡಲ್ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲ್ಯುಆರ್‌ಐ) ಯನ್ನು ಸಂಪರ್ಕಿಸಿದ್ದೇವೆ. ಇಂಧನ ಉಳಿತಾಯದ ಗುರಿ ಸಾಧಿಸುವ ಜತೆಗೆ ಇಂಗಾಲ ಹೊರಸೂಸಿಕೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಂಬಂಧಪಟ್ಟ ಎಲ್ಲರನ್ನು ತೊಡಗಿಸಿಕೊಳ್ಳುವುದು ನಮ್ಮ ಉದ್ದೇಶ,”ಎಂದರು.
“ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ, ಶುದ್ಧ ಇಂಧನ ಉತ್ಪಾದನೆ ಹಾಗೂ ನವೀನ ಇಂಧನ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸಾಂಪ್ರದಾಯಿಕ ಇಂಧನ ಮೂಲಗಳಿಗಿಂತ ನವೀಕರಿಸಬಹುದಾದ ಇಂಧನ ಕಡಿಮೆ ಖರ್ಚಿನ ಪರ್ಯಾಯ ಇಂಧನ ಮೂಲವಾಗಿದೆ” ಎಂದು ಅವರು ಹೇಳಿದರು.
2024ರ ಏಪ್ರಿಲ್ 31ರವರೆಗೆ ರಾಜ್ಯದ ನವೀಕರಿಸಬಹುದಾದದ ಇಂಧನದ ಸ್ಥಾಪಿತ ಸಾಮರ್ಥ್ಯ 23.05 ಆಗಿದ್ದು, ಹಸಿರು ಇಂಧನ ವಲಯದಲ್ಲಿ ರಾಜ್ಯ ದೊಡ್ಡ ಪ್ರಮಾಣದ ಹೂಡಿಕೆ ಆಕರ್ಷಿಸುತ್ತಿದೆ. ಇಸಿ-ಇಇ ನೀತಿಯೊಂದಿಗೆ ಕೈಗಾರಿಕೆ, ಸಾರಿಗೆ, ಪುರಸಭೆಯ ಸೇವೆಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಕ್ರಮಗಳನ್ನು ಜಾರಿಗೊಳಿಸಬಹುದು.
ಕೆಎಸ್‌ಪಿಡಿಸಿಎಲ್ ಸಿಇಒ ಅಮರನಾಥ್, ವಿಶ್ವ ಸಂಪನ್ಮೂಲ ಸಂಸ್ಥೆಯ ಉಪ ನಿರ್ದೇಶಕ ದೀಪಕ್ ಕೃಷ್ಣನ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ್, ಬಿಡಬ್ಲ್ಯುಎಸ್‌ಎಸ್‌ಬಿಯ ಮುಖ್ಯ ಇಂಜಿನಿಯರ್ ಪುರುಷೋತ್ತಮ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ.ಎಂ. ಜಗದೀಶ್ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಇಲಾಖೆಗಳು: ಕೃಷಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಿದ್ಯುತ್ ಪ್ರಸರಣ ಲಿಮಿಟೆಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ – ಬೆಂಗಳೂರು, ಶಿವಮೊಗ್ಗ, ಧಾರವಾಡ, ಕಲಬುರಗಿ, ಬಿಡಬ್ಲ್ಯುಎಸ್‌ಎಸ್, ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸಿಇಎಸ್‌ಸಿ, ಪೌರಾಡಳಿತ ನಿರ್ದೇಶನಾಲಯ, ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ರಾಜೀವ್ ಗಾಂಧಿ ವಸತಿ ನಿಗಮ, ಕರ್ನಾಟಕ ಗೃಹ ಮಂಡಳಿ, ಕೆಯುಐಡಿಎಫ್‌ಸಿ, ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರೇಟ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂಎಸ್ಎಂಇ, ಕೆಎಸ್‌ಡಿಬಿ.