ರಾಜ್ಯದಲ್ಲಿ ಲಭ್ಯ ಇರುವ ಕೋವಿಡ್ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಸೌಲಭ್ಯಗಳ ಬಗ್ಗೆ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸಬೇಕು. ಶ್ವೇತಪತ್ರ ಎಂದರೆ ಸುಳ್ಳು ಹೇಳುವುದಲ್ಲ. ಸತ್ಯಾಂಶವನ್ನು ಜನರ ಮುಂದೆ ಇಡುವಂಥದ್ದು ಎಂದಿದ್ದಾರೆ.
ಆಕ್ಸಿಜನ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನೂ ಸರ್ಕಾರ ಈವರೆಗೆ ಪಾಲಿಸಿಲ್ಲ. ಶ್ವೇತಪತ್ರದ ವಿಚಾರದಲ್ಲಿಯಾದರೂ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳು ಹಾಗೂ ದುಡಿಯುವ ವರ್ಗದವರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದೆ. ಆದರೆ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಕಳೆದ ವರ್ಷ ಇದೇ ರೀತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ, ಬಹುತೇಕ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ಈ ವರ್ಷವೂ ಸಹ ಎಲ್ಲರಿಗೂ ಪರಿಹಾರ ಸಿಗುವ ಬಗ್ಗೆ ಅನುಮಾನವಿದೆ. ಪರಿಹಾರ ಪಡೆಯಲು ಅನುಸರಿಸಬೇಕಾದ ಮಾರ್ಗ ಏನು ಎಂಬುದನ್ನೇ ಸರ್ಕಾರ ಈವರೆಗೆ ತಿಳಿಸಿಲ್ಲ. ಹೀಗಾಗಿ ಪ್ಯಾಕೇಜ್ ಎಂಬುದು ಕೇವಲ ಕಣ್ಣೊರೆಸುವ ತಂತ್ರ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾ ವಿತರಕರೂ ಇಂದು ನನ್ನನ್ನು ಭೇಟಿ ಮಾಡಿ ಪರಿಹಾರ ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ಅವರನ್ನೂ ಸಹ ಸರ್ಕಾರ ಪರಿಗಣಿಸಿ ನೆರವು ಒದಗಿಸಬೇಕು. ಜೊತೆಗೆ ಉಳಿದ ಕಾರ್ಮಿಕರಿಗೂ ಸಹಾಯ ಮಾಡಬೇಕು. ತಮಿಳುನಾಡು, ಕೇರಳ ಸೇರಿದಂತೆ ಹಲವಾರು ರಾಜ್ಯಗಳು ಪರಿಹಾರದ ವಿಚಾರದಲ್ಲಿ ಉದಾರತೆ ತೋರಿವೆ. ಆದರೆ, ನಮ್ಮ ಸರ್ಕಾರಕ್ಕೆ ಏಕೆ ಅದು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಷ್ಟ ಕಾಲದಲ್ಲಿ ನಮ್ಮ ಪಕ್ಷದ ಎಲ್ಲ ಶಾಸಕರೂ ಜನರ ನೆರವಿಗೆ ನಿಂತಿದ್ದಾರೆ. ದಿನಸಿ ಕಿಟ್, ಔಷಧ, ಆಂಬುಲೆನ್ಸ್ ಮತ್ತಿತರ ನೆರವು ಒದಗಿಸುತ್ತಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಲಸಿಕೆ ವಿಚಾರದಲ್ಲಿ ಅಪಪ್ರಚಾರ ಏನಿಲ್ಲ. ಲಸಿಕೆ ಇಲ್ಲ ಎಂಬುದು ವಾಸ್ತವ. 18 ವರ್ಷ ಮೀರಿದವರಿಗೆ ಮೇ 1ರಿಂದ ಲಸಿಕೆ ಎಂದು ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದರು. ಈಗ ಕೊಡುತ್ತಿಲ್ಲ. ಅದು ಸುಳ್ಳೇ.. ? ಇದರಲ್ಲಿ ಅಪಪ್ರಚಾರ ಏನು ..? ಮೇ 1ರಂದು ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು ಸುಳ್ಳೇ. ಈಗ ಲಸಿಕೆ ಇಲ್ಲದಿವರುವುದು ಸುಳ್ಳೇ.. ? ಅಭಿಯಾನಕ್ಕೆ ಚಾಲನೆ ನೀಡಿ ಮೂರು ವಾರಗಳಾದರೂ ರಾಜ್ಯಕ್ಕೆ ಲಸಿಕೆ ಬಂದಿಲ್ಲ. ಸರ್ಕಾರ ಪಾರದರ್ಶಕವಾಗಿರಲಿ. ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡು ಈಗ ಕಾಂಗ್ರೆಸ್ಸಿಗರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದರೆ ಹೇಗೆ.. ? ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿ ಕೊಡಿ. ಲಸಿಕೆ ಖರೀದಿ ಮಾಡಿ ಜನರಿಗೆ ಹಂಚುತ್ತೇವೆ ಎಂದರೆ ಅದಕ್ಕೂ ಒಪ್ಪಿಗೆ ಕೊಡುವುದಿಲ್ಲ. ಸರ್ಕಾರದ ಹಣದಲ್ಲಿ ಲಸಿಕೆ ವಿತರಣೆ ಮಾಡುವುದರಲ್ಲಿ ತಪ್ಪೇನಿದೆ. ಸರ್ಕಾರ ಮಾಡುವುದೂ ಅದೇ ಕೆಲಸ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ.

ಕರೋನಾದಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಅನುಮತಿ ಕೊಟ್ಟಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ. ನಾನು ಪರಿಶೀಲನೆ ಸಭೆ ನಡೆಸಲು ಹೊರಟಿರಲಿಲ್ಲ. ಕೇವಲ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೆ. ವಿಪಕ್ಷ ನಾಯಕರು ಮಾಹಿತಿ ಸಂಗ್ರಹಿಸಬಾರದು ಎಂಬ ಸುತ್ತೋಲೆ 2009ರ ವರೆಗೆ ಇರಲಿಲ್ಲ. ಯಡಿಯೂರಪ್ಪವರು ಬಂದ ಬಳಿಕವಷ್ಟೇ ಅಂತಹ ಸುತ್ತೋಲೆ ಹೊರಬಿತ್ತು. ಮಾಹಿತಿ ಹಕ್ಕು ಕಾಯಿದೆ ಜಾರಿಯಲ್ಲಿರುವಾಗ ಮಾಹಿತಿ ಸಂಗ್ರಹಕ್ಕೂ ಅವಕಾಶ ಕೊಡುವುದಿಲ್ಲ ಎಂದರೆ ಸಂವಿಧಾನ ಮತ್ತು ಕಾನೂನು ಬಾಹಿರ. ಸತ್ಯ ಹೊರಗೆ ಬರುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ನಿಲುವು ತಳೆದಿದೆ. ಇನ್ನು ಮಾಹಿತಿ ಕೋರಿ ಅಧಿಕಾರಿಗಳಿಗೆ ಪತ್ರ ಬರೆದರೂ ಉತ್ತರಿಸುವುದಿಲ್ಲ ಎಂದು ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.