ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರ್ತಿದ್ದಾರೆ. ರಾಜ್ಯದ ಜನರ ಪರವಾಗಿ ಸರ್ಕಾರದಲ್ಲಿ ಮಂತ್ರಿ ಆಗಿರುವ ಕೃಷ್ಣಬೈರೇಗೌಡ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವುದು ಕರ್ನಾಟಕ. ಆದರೆ ದೇಶದಲ್ಲೇ ಅತಿ ಕಡಿಮೆ ವಾಪಸ್ ನಮ್ಮ ರಾಜ್ಯಕ್ಕೆ ಬರ್ತಿದೆ. ಕಳೆದ ಬಾರಿ 26 ಸೀಟುಗಳನ್ನ ಬಿಜೆಪಿ ಪಡೆದಿತ್ತು. ನಮ್ಮ ತೆರಿಗೆ ಹಣವನ್ನೂ ತೆಗೆದುಕೊಳ್ತಾರೆ, ನಮ್ಮ ಸಂಸದ ಸೀಟು ಪಡೆದುಕೊಳ್ತಾರೆ. ಆದರೆ ನಮಗೆ ಕೊಡಬೇಕಾದ ನ್ಯಾಯ ಕೊಡ್ತಿಲ್ಲ. ಮನೆಯಲ್ಲಿ ಎಲ್ಲ ಪಡೆದು ಖಾಲಿ ಕೈ ತೋರಿಸ್ತಾರೆ ಎಂದು ಕೃಷ್ಣಬೈರೇಗೌಡ ದೂರಿದ್ದಾ
ಉಂಡುಹೋದ ಕೊಂಡು ಹೋದ ಎಂಬ ಮಾತಿದೆ. ನಮ್ಮ ಮನೆಯಲ್ಲೇ ಉಂಡು ಇಲ್ಲಿಂದಲೇ ಪಡೆದಿದ್ದಾರೆ. ಆದರೆ ತೆರಿಗೆ ಪಾಲು ಪಾತ್ರ ನಮಗೆ ಕೊಡ್ತಿಲ್ಲ. ರಾಜ್ಯ ಪ್ರತಿಭಾರಿ ನೀರಿನ ಸಮಸ್ಯೆ ಎದುರಿಸ್ತಿದೆ. ಅತಿ ಹೆಚ್ಚು ಖುಷ್ಕಿ ಪ್ರದೇಶ ಇರುವುದು ನಮ್ಮ ರಾಜ್ಯದಲ್ಲಿ. ಮಳೆ ಮೇಲೆ ಅವಲಂಬಿತ ಆಗಿರುವ ರಾಜ್ಯ ನಮ್ಮ ಕರ್ನಾಟಕ. ಬರಗಾಲಕ್ಕೆ ತುತ್ತಾಗುವುದು ಕರ್ನಾಟಕ, ನಮ್ಮ ಜೀವನ ನೀರಿನ ಮೇಲೆ ಅವಲಂಬಿತವಾಗಿದೆ. ನದಿಯ ನೀರು ಉಪಯೋಗಕ್ಕೂ ಬರ್ತಿಲ್ಲ. ಕೇಂದ್ರ ನಿರಂತರವಾಗಿ ಅನ್ಯಾಯ ಮಾಡ್ತಿದೆ. ನೀರು ಬಳಸಿಕೊಳ್ಳಲು ಅವಕಾಶ ಮಾಡಿಕೊಡ್ತಿಲ್ಲ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಬುಕ್ ಪ್ರದರ್ಶಿಸಿದ ಕೃಷ್ಣಬೈರೇಗೌಡ, ಕಳೆದ ಬಾರಿ ಬಜೆಟ್‌ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ನೀಡುವ ಘೋಷಣೆ ಮಾಡಲಾಗಿತ್ತು. ಬಜೆಟ್ ಪಾಸ್ ಆದ್ರೆ ಕಾನೂನಿಗೆ ಸಮಾನ. ಅದನ್ನು ಯಥಾವತ್ ಅನುಷ್ಠಾನ ಮಾಡಬೇಕು. 5300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿ, 1 ವರ್ಷ ಮೂರು ತಿಂಗಳು ಮುಗಿದಿದೆ. ಆದರೆ ನಯಾಪೈಸೆ ಹಣವನ್ನ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಪ್ರಧಾನಿ ಭಾಷಣದಲ್ಲಿ ಉತ್ತರಿಸಬೇಕು. 16 ಆಗಸ್ಟ್ 2023 ರಂದು ಸರ್ಕಾರದಿಂದ ಪತ್ರ ಬರೆದು, ಅಪ್ಪರ್ ಭದ್ರಾ ಯೋಜನೆಯ ಹಣ ಕೊಡುವಂತೆ ಕೇಳಿಕೊಂಡಿದ್ದೆವು. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಟಿ.ಬಿ ಜಯಚಂದ್ರ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಪತ್ರ ಬರೆದಿದ್ರು. ಖುದ್ದು ಡಿ.ಕೆ ಶಿವಕುಮಾರ್ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ರು. ಆದರೂ ಹಣ ಬಿಡುಗಡೆ ಮಾಡಲಿಲ್ಲ.
ಮಹದಾಯಿ ಯೋಜನೆಗೆ ಒಂದೇ ಒಂದು ಅನುಮತಿ ಕೊಟ್ಟಿಲ್ಲ. ಇದರ ಬಗ್ಗೆ ಪ್ರಧಾನಿಗಳು ಉತ್ತರಿಸಬೇಕು. ನಾವು ಅನುಮತಿ ಕೊಡ್ತೇವೆ ಅಂತ ಘೋಷಿಸಲಿ. ಸೆಂಟ್ರಲ್ ಮಿನಿಸ್ಟರ್ ಆಗಿದ್ದಾರೆ ಪ್ರಹ್ಲಾದ್ ಜೋಶಿ, ಅಷ್ಟಾದ್ರೂ ಯೋಜನೆಗೆ ಅನುಮತಿ ಕೊಡಿಸಿಲ್ಲ. ಮಹದಾಯಿ ಯೋಜನೆಯನ್ನ ತಪ್ಪಿಸಿದ್ದಾರೆ. ಮಹದಾಯಿ ಯೋಜನೆಗೆ ಯಾಕೆ ಅಡ್ಡಗಾಲು ಹಾಕಿದ್ರು..? ನಮಗೆ ಹಂಚಿಕೆಯಾದ ನೀರನ್ನ ಯಾಕೆ ಕೊಡಲಿಲ್ಲ..? ನಮ್ಮ ರಾಜ್ಯಕ್ಕೆ ಯಾಕೆ ಅನ್ಯಾಯ ಮಾಡ್ತಿದ್ದೀರಾ..? ಎಂದು ಕೃಷ್ಣಬೈರೇಗೌಡ ನೇರವಾಗಿ ಕೇಳಿದ್ದಾರೆ.
ಮೇಕೆದಾಟು ಬೇಡ ಅಂತ ತಮಿಳುನಾಡು ಸರ್ಕಾರ ಅರ್ಜಿ ಹಾಕಿಕೊಂಡಿದೆ. 2023ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದೆ. ಆದರೆ ನ್ಯಾ. ಗವಾಯಿಯವರ ಪೀಠ ಸ್ಪಷ್ಟ ತೀರ್ಪು ಕೊಟ್ಟಿದ್ದು, ಹಂಚಿಕೆ ನೀರನ್ನ ತಮಿಳುನಾಡಿಗೆ ಬಿಡಬೇಕು, ಉಳಿದ ನೀರನ್ನ ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಇದನ್ನ ತಮಿಳುನಾಡು ತಡೆಯೋಕೆ ಬರಲ್ಲ ಎಂದಿದೆ. ಇಷ್ಟಾದ್ರೂ ಕೇಂದ್ರ ಸರ್ಕಾರ ಅನುಮತಿ ಕೊಡ್ತಿಲ್ಲ. ಮೇಕೆದಾಟು ಯೋಜನೆಗೆ ಅವಕಾಶ ಕೊಟ್ಟಿಲ್ಲ. ಅವಶ್ಯತೆಕತೆಗಿಂತ ಹೆಚ್ಚು ನೀರು ಬಿಟ್ಟಿದ್ದೇವೆ. ಮೇಕೆದಾಟು ಆದರೆ ಬೆಂಗಳೂರು, ರಾಮನಗರ, ಮಂಡ್ಯಕ್ಕೆ ನೀರು ಸಿಗಲಿದೆ. ತಮಿಳುನಾಡಿಗೂ ನೀರು ಸಿಗಲಿದೆ. ಆದರೂ ಯಾಕೆ ಪರ್ಮಿಷನ್ ಕೊಡ್ತಿಲ್ಲ ಪ್ರಧಾನಿ ಉತ್ತರಿಸಬೇಕು ಎಂದಿದ್ದಾರೆ.
ಕೃಷ್ಣಮಣಿ