ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಬುಧವಾರ (ಆಗಸ್ಟ್ 2) ಸಂಜೆ ದೂರು ನೀಡಿದೆ.
ಇದಕ್ಕೂ ಮುನ್ನ ಆರಗ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಈಗ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅರಗ ಜ್ಞಾನೇಂದ್ರ ಅವರು ಮಾತನಾಡಿದ್ದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಅವಹೇಳನ ಮಾಡಿದ್ದರು.
ಆರಗ ಜ್ಞಾನೇಂದ್ರ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿತ್ತು. ಬಿಜೆಪಿಗೆ ದಲಿತರ ಬಗ್ಗೆ ಅಸಹನೆ ಇದೆ ಎಂದು ಹೇಳಿತ್ತು.
ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು. ಜ್ಞಾನೇಂದ್ರ ಅವರು ಖರ್ಗೆ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಮಂಗಳವಾರ ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಇಲ್ಲಿ ಮಾತನಾಡಿದ್ದ ಆರಗ ಜ್ಞಾನೇಂದ್ರ, “ಅರಣ್ಯ ಸಚಿವರಿಗೆ ಪಶ್ಚಿಮಘಟ್ಟದ ಜನರ ಜೀವನಕ್ರಮ, ಗಿಡ- ಮರಗಳ ಕುರಿತು ತಿಳಿವಳಿಕೆ ಇಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಿರುವ ವಿಜ್ಞಾನಿ ಕಸ್ತೂರಿರಂಗನ್ ಪರಿಸರ ತಜ್ಞ ಅಲ್ಲ” ಎಂದು ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ಪ್ರೀತಿಯಿಂದ ಮಾತ್ರ ದೇಶದಲ್ಲಿ ಈ ದ್ವೇಷದ ಬೆಂಕಿಯನ್ನು ನಂದಿಸಲು ಸಾಧ್ಯ; ರಾಹುಲ್ ಗಾಂಧಿ
“ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿರುವುದು ನಮ್ಮ ದುರದೃಷ್ಟ. ಬೀದರ್ ಮೂಲದ ಅವರಿಗೆ ಮರ- ಗಿಡ ಅಂದರೆ ಏನು, ಅದರ ನೆರಳು ಅಂದರೆ ಏನು ಎಂಬುದೇ ಗೊತ್ತಿಲ್ಲ. ಅವರಿಗೆ ಮಲೆನಾಡಿನವರ ಬದುಕು, ಪಶ್ಚಿಮ ಘಟ್ಟದವರ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ. ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೇ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಪಾಪ ಅವರ ತಲೆಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳಕೊಂಡಿದ್ದಾರೆ. ಅದೇ ಅವರ ನೆರಳು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳ ಬೇಕು” ಎಂದು ಹೇಳಿದ್ದರು.
“ಮೂಲ ನಿವಾಸಿಗಳಿಲ್ಲದಿದ್ದರೆ ಸಹ್ಯಾದ್ರಿಯ ಅರಣ್ಯ ಶ್ರೇಣಿ ಉಳಿಯುತ್ತಿರಲಿಲ್ಲ. ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳನ್ನು ಅವಲೋಕಿಸಿ ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಹಲವು ಕಾಯ್ದೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸಮಸ್ಯೆ ಬಿಗಡಾಯಿಸಲಿದೆ” ಎಂದು ಆರಗ ಜ್ಞಾನೇಂದ್ರ ಹೇಳಿದ್ದರು.






