ಅತ್ಯಂತ ಅನಿಷ್ಟ ಪದ್ದತಿಗಳಲ್ಲಿ ಒಂದಾಗಿರುವ ಬಾಲ್ಯವಿವಾಹವು ವರ್ಷಗಳೆದಂತೆ ಅಳಿಯುವುದರ ಬದಲು, ಮತ್ತಷ್ಟು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ ಕಳೆದ ಎರಡು ವರ್ಷಕ್ಕಿಂತಲೂ ಎರಡು ಪಟ್ಟು ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ಅತೀ ಹೆಚ್ಚು ಬಾಲ್ಯವಿವಾಹಗಳಿಗೆ ಹಾಸನ ಸಾಕ್ಷಿಯಾಗಿದೆ.
ವಿಧಾನಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಲ್ಲಿಸಿರುವ ದಾಖಲೆಗಳ ಪ್ರಕಾರ 2020-21ರಲ್ಲಿ ಒಟ್ಟು 296 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. 2018-19ರಲ್ಲಿ ಈ ಸಂಖ್ಯೆ 119 ಇತ್ತು. ಇದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಮಾತ್ರ. ಇನ್ನು ವರದಿಯಾಗದೆ ಗೌಪ್ಯವಾಗಿ ಉಳಿದಿರುವ ಪ್ರಕರಣಗಳು ಎಷ್ಟಿವೆ ಎಂಬುದರ ಕುರಿತ ಮಾಹಿತಿ ಸರ್ಕಾರಕ್ಕಿಲ್ಲ.
ಅಚ್ಚರಿಯ ವಿಶಯವೇನೆಂದರೆ, 2019-20ರಲ್ಲಿ ಹಾಸ ಜಿಲ್ಲೆಯಲ್ಲಿ ಒಂದೇ ಒಂದು ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರಲಿಲ್ಲ. 2018-19ರಲ್ಲಿ ಕೇವಲ ಮೂರು ಪ್ರಕರಣಗಳು ದಾಖಲಾಗಿದ್ದವು. ಆದರೆ, 2020-21ರಲ್ಲಿ ಈ ಸಂಖ್ಯೆ 39 ತಲುಪಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ವರದಿಯಾದ ಜಿಲ್ಲೆ ಇದಾಗಿದೆ. ಹಾಸ ನಂತರದ ಸ್ಥಾನದಲ್ಲಿ ಮಂಡ್ಯ (34), ಮೈಸೂರು (31) ಮತ್ತು ರಾಮನಗರ (20) ಜಿಲ್ಲೆಗಳಿವೆ.
ಬಾಲ್ಯವಿವಾಹ ಪ್ರಕರಣಗಳ ಕುರಿತಾಗಿ ಕಾಂಗ್ರೆಸ್ ಸದಸ್ಯ ಕೆ ಗೋವಿಂದರಾಜ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್, ರಾಜ್ಯದೆಲ್ಲೆಡೆ ಬಾಲ್ಯವಿವಾಹ ಪ್ರಕರಣಗಳ ತಡೆಗೆ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ‘ವೀಡಿಯೋ ಆನ್ ವೀಲ್ಸ್’ ಎಂಬ ಯೋಜನೆಯನ್ನು ಇಲಾಖೆಯು ಹೊಸದಾಗಿ ಆರಂಭಿಸಿದೆ. ವಾರ್ತಾ ಇಲಾಖೆಯೊಂದಿಗೆ ಮೊಬೈಲ್ ವ್ಯಾನ್ ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ, ಎಂದು ಹೇಳಿದ್ದಾರೆ.
ಈ ಕುರಿತಾಗಿ ಟೈಮ್ಸ್ ಆಫ್ ಇಂಡಿಯಾಗೆ ಹೇಳಿ ನೀಡಿರುವ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ ರಾವ್, ವರದಿಯಾಗದ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿಯೇ ಮದುವೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿತ್ತು. ಇದರಿಂದಾಗಿ ಬಾಲ್ಯವಿವಾಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿರುವ ಅಪಾಯವಿದೆ, ಎಂದು ಹೇಳಿದ್ದಾರೆ.
“ಇಂತಹ ಮದುವೆಗಳನ್ನು ಅಸಿಂಧು ಎಂದು ಪರಿಗಣಿಸಬೇಕು. ಸಂತ್ರಸ್ತರನ್ನು ಪತ್ತೆಹಚ್ಚಿ ಅವರ ಅನುಭವಗಳನ್ನು ದಾಖಲಿಸಬೇಕು. ಸಂತ್ರಸ್ತರು, ಲೈಂಗಿಕ ದೌರ್ಜನ್ಯ ವರದಕ್ಷಿಣೆ ಕಿರುಕುಳಕ್ಕೆ ತುತ್ತಾಗಿರುವ ಸಾಧ್ಯತೆಗಳಿವೆ. ಪೋಷಕರು ಮತ್ತು ಮಕ್ಕಳನ್ನು ಕೌನ್ಸೆಲಿಂಗ್ ಗೆ ಒಳಪಡಿಸಿ, ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದೆಡೆಗೆ ಕರೆತರುವ ಪ್ರಯತ್ನಗಳು ನಡೆಯಬೇಕು,” ಎಂದು ಅವರು ಹೇಳಿದ್ದಾರೆ.