ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ಟಿನಲ್ಲಿ ಯಾವ ತೆರಿಗೆಯನ್ನೂ ಹೇರಿಲ್ಲ. ಜನರಿಗೆ ಫೀಲ್ ಗುಡ್ ಫ್ಯಾಕ್ಟರ್ ಇರುವಂತೆ ನೋಡಿಕೊಂಡಿದ್ದಾರೆ. ಮುಂದಿನ ವರ್ಷದಲ್ಲಿ ಬರುವ ವಿಧಾನಸಭಾ ಚುನಾವಣೆಗಾಗಿ ಏನಾದರೂ ವಿಶೇಷ ಯೋಜನೆ ಪ್ರಕಟಿಸಬಹುದೆಂಬ ನಿರೀಕ್ಷೆಗಳು ಸಾಕಷ್ಟಿದ್ದವು. ಆದರೆ, ಅವರು ಚುನಾವಣೆಗಾಗಿ ವಿಶೇಷ ಯೋಜನೆಗಳನ್ನೇನೂ ಘೋಷಿಸಿಲ್ಲ. ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೇರದೇ ಉಪಕರಿಸಿದ್ದಾರೆ.
ಚುನಾವಣಾ ಪೂರ್ವ ಬಜೆಟ್ಟುಗಳು ಸಾಮಾನ್ಯವಾಗಿ ತೆರಿಗೆ ರಹಿತವಾಗಿರುತ್ತವೆ. ಅದೊಂದು ಸಂಪ್ರದಾಯವೇ ಆಗಿ ಬಿಟ್ಟಿದೆ. ತೆರಿಗೆ ಹೇರಿಲ್ಲ ಎಂದು ನಾವು ಸಮಾಧಾನ ಪಡುವಂತಿಲ್ಲ. ತೆರಿಗೆ ಮೂಲಕ ಸಂಪನ್ಮೂಲ ಕ್ರೋಢೀಕರಿಸಬೇಕಿದ್ದ ಮುಖ್ಯಮಂತ್ರಿಗಳು ಚುನಾವಣ ಕಾರಣಕ್ಕಾಗಿ ಆ ಕೆಲಸ ಮಾಡಿಲ್ಲ. ಆದರೆ, ಹೇಗಾದರೂ ಬಜೆಟ್ ನಿಭಾಯಿಸಲೇ ಬೇಕಲ್ಲ? ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ತರಲು ಮುಂದಾಗಿದ್ದಾರೆ. ಸಾಲದ ಮೂಲಕವೇ ಬಹುತೇಕ ರಾಜ್ಯದ ಖರ್ಚುವೆಚ್ಚಗಳನ್ನು ನಿಭಾಯಿಸುವ ಲೆಕ್ಕಾಚಾರ ಹಾಕಿದ್ದಾರೆ. ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಸಾಲ ತರುವ ಬಗ್ಗೆಯೂ ಪ್ರಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಮುುಚ್ಚುಮರೆ ಮಾಡಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಬಜೆಟ್ ಅಂಕಿಅಂಶಗಳನ್ನು ಗಮನಿಸಿದರೆ, ಪ್ರಸ್ತಾಪಿತ 2022-23ನೇ ವರ್ಷದ ಬಜೆಟ್ ಒಟ್ಟು ಮೊತ್ತ 2,65,720 ಕೋಟಿ ರೂಪಾಯಿಗಳಷ್ಟಿದೆ. ಇದುಹಾಲಿ ಚಾಲ್ತಿಯಲ್ಲಿರುವ 2021-22 ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ. 7.7 ರಷ್ಟು ಹೆಚ್ಚು.
ಒಟ್ಟು 2,65,720 ಕೋಟಿ ರೂಪಾಯಿಗಳಲ್ಲಿ 72,000 ಕೋಟಿ ರುಪಾಯಿಗಳನ್ನು ಸಾಲದ ಮೂಲಕ ತರುತ್ತಿದ್ದಾರೆ. ಇಡೀ ಬಜೆಟ್ಟಿನ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ ಸಾಲದ ಮೂಲಕ ತರುತ್ತಿರುವ ಮೊತ್ತವು ಶೇ.27ರಷ್ಟಾಗುತ್ತದೆ. ರಾಜ್ಯದ ಸಾಲದ ಹೊರೆ ಕಳೆದ ಮೂರು ವಿತ್ತೀಯ ವರ್ಷಗಳಲ್ಲಿ ತೀವ್ರವಾಗಿ ಏರಿದ್ದು, 1,81,833 ಕೋಟಿ ರೂಪಾಯಿಗಳಷ್ಟಾಗಿದೆ. 1919-20ರಲ್ಲಿ 48,601, 1920-21ರಲ್ಲಿ 61,900, 1921-22ರಲ್ಲಿ 71,332 ಕೋಟಿ ರೂಪಾಯಿ ಸಾಲ ಮಾಡಲಾಗಿದೆ. ಈಗ ಹೊಸದಾಗಿ 72,000 ಕೋಟಿ ಸಾಲ ಮಾಡಲಾಗುತ್ತಿದೆ. ಹೊಸ ಸಾಲದ ಹೊರತಾಗಿಯೂ ರಾಜ್ಯದ ಒಟ್ಟಾರೆ ಸಾಲ 4,57,899 ಕೋಟಿ ರೂಪಾಯಿಗಳು. ಈ ಪೈಕಿ ಕಳೆದ ಮೂರು ವರ್ಷಗಳಲ್ಲೇ ಒಟ್ಟು ಸಾಲದ ಮೊತ್ತದ ಶೇ.39.71ರಷ್ಟು ಸಾಲ ಮಾಡಲಾಗಿದೆ. ರಾಜ್ಯದ ಆರ್ಥಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಇದಲ್ಲ. ಕೋವಿಡ್, ಲಾಕ್ಡೌನ್, ತೆರಿಗೆ ಮೂಲದ ಆದಾಯ ಸಂಗ್ರಹದಲ್ಲಾದ ಕೊರತೆ ಇತ್ಯಾದಿ ಕಾರಣಗಳೇನೆ ಇದ್ದರೂ ಸಾಲದ ಹೊರೆ ಈಗ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಮಿತಿಯನ್ನು ಮೀರಿದೆ.

ಕಾಯ್ದೆ ಪ್ರಕಾರ, ರಾಜ್ಯ ಸರ್ಕಾರವು ತನ್ನ ಒಟ್ಟು ರಾಜ್ಯದ ಉತ್ಪನ್ನದ ಶೇ.20ಕ್ಕಿಂತಲೂ ಹೆಚ್ಚಿನ ಸಾಲ ಮಾಡಬಾರದು. 2021-22ನೇ ವಿತ್ತೀಯ ವರ್ಷದಲ್ಲಿ ರಾಜ್ಯದ ಒಟ್ಟು ಉತ್ಪನ್ನದ ಮೊತ್ತವು 17,02,227 ಕೋಟಿ ರುಪಾಯಿಗಳಷ್ಟಿದೆ. ರಾಜ್ಯ ಸರ್ಕಾರ ತನ್ನ ಎಸ್ಜಿಡಿಪಿಯ ಶೇ.20ರಷ್ಟು ಎಂದರೆ, 3,40,445 ಕೋಟಿ ರೂಪಾಯಿ ಸಾಲ ಪಡೆಯಬಹುದಾಗಿದೆ. ಕಾಯ್ದೆಯ ಮಿತಿಯನ್ನು ದಾಟಿ 1,17,454 ಕೋಟಿ ರೂಪಾಯಿ ಸಾಲ ಮಾಡಲಾಗಿದೆ. ಈಗ ಹೊಸ ಸಾಲವೂ ಸೇರಿದರೆ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗುತ್ತದೆ.
ಸಾಲದ ಸಮಸ್ಯೆ ವಿಷವರ್ತುಲ ಇದ್ದಂತೆ. ಅದರೊಳಗೆ ಸಿಕ್ಕಿಬಿದ್ದರೆ ಮುಗಿಯಿತು. ಮಾಡಿರುವ ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲು ಒಟ್ಟು ಬಜೆಟ್ಟಿನ ಮೊತ್ತದಲ್ಲಿ ಶೇ.17ರಷ್ಟು ಅಂದರೆ 45,169 ಕೋಟಿ ರೂಪಾಯಿಗಳು ವಿನಿಯೋಗವಾಗುತ್ತವೆ. ಸಾಲದ ಮೊತ್ತ ಮತ್ತಷ್ಟು ಹೆಚ್ಚಿದರೆ, ಪಾವತಿಸಬೇಕಾದ ಅಸಲು ಮತ್ತು ಬಡ್ಡಿಯ ಪ್ರಮಾಣವೂ ಹೆಚ್ಚುತ್ತದೆ. ಮುಖ್ಯಮಂತ್ರಿಗಳು ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯ ಮಿತಿಯಲ್ಲೇ ವಿತ್ತೀಯ ಕೊರತೆ ಮತ್ತು ಸಾಲದ ಪ್ರಮಾಣವನ್ನು ಕಾಯ್ದುಕೊಂಡಿರುವುದಾಗಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ತೆರಿಗೆ ಇಲ್ಲದ ಬಜೆಟ್ ಮಂಡಿಸಿದಾಗ ಜನರಲ್ಲಿ ಸಂತಸದ ಭಾವ ಮೂಡುತ್ತದೆ. ಫೀಲ್ ಗುಡ್ ಫ್ಯಾಕ್ಟರ್ ಯಾವಾಗಲೂ ಮತ ಸೆಳೆಯುವ ತಂತ್ರವಾಗಿರುತ್ತದೆ. ಸದ್ಯಕ್ಕೆ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಬೇಕಿಲ್ಲವಲ್ಲ ಎಂಬ ಕಾರಣಕ್ಕೆ ಸಂತಸದ ಭಾವ ಮೂಡಿದ್ದರೆ, ತೆರಿಗೆ ಹೊರೆಯಿಂದ ಸಾಕಷ್ಟು ನೊಂದಿದ್ದಾರೆ ಎಂದೇ ಅರ್ಥ. ಜನರಲ್ಲಿ ಸಂತಸದ ಭಾವ ಮೂಡಿಸುವ ಬಜೆಟ್ ಮಂಡಿಸುವುದರ ಮುಖ್ಯಮಂತ್ರಿಗಳ ಉದ್ದೇಶ ಮುಂದಿನ ವರ್ಷ ಚುನಾವಣೆ ಗೆಲ್ಲುವುದು., ಹೊಸ ತೆರಿಗೆ ಹೇರಿ ಜನರನ್ನು ಎದುರಿಸುವುದು ಕಷ್ಟ ಸಾಧ್ಯ. ಜತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡುವ ಜತೆಗೆ ಮತ್ತಷ್ಟು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ನೀರಾವರಿ ಮತ್ತು ಗೃಹ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವದಿಂದಾಗಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಿದ್ದಾರೆ. ಘೋಷಿತ ಯೋಜನೆಗಳೆಲ್ಲವೂ ಅನುಷ್ಠಾನವಾದರೆ, ಯೋಜನಾ ಆಯೋಗದ ಸುಸ್ಧಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಬಿದ್ದಿರುವ ಕರ್ನಾಟಕವು ಮುಂಬರುವ ವರ್ಷಗಳಲ್ಲಿ ಸುಧಾರಿಸಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ, ಘೋಷಿತ ಯೋಜನೆಗಳೆಲ್ಲವೂ ಕಟ್ಟುನಿಟ್ಟಾಗಿ ಜಾರಿಯಾಗಬೇಕಷ್ಟೇ!