ಬೆಂಗಳೂರು: ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ 2025’ಕ್ಕೆ(Energy Conservation Award) ಕರ್ನಾಟಕ ಪಾತ್ರವಾಗಿದೆ. ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 14ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕ್ರೆಡಲ್‌ನ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ ಮತ್ತು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಪ್ರಶಸ್ತಿ ಸ್ವೀಕರಿಸಿದರು.

ಇಂಧನ ದಕ್ಷತೆ ಕಾರ್ಯಕ್ಷಮತೆ ಪ್ರಶಸ್ತಿಯ ಎಸ್‌ಡಿಎ ವಿಭಾಗ-1ರ ಅಡಿಯಲ್ಲಿ ಪ್ರಥಮ ಸ್ಥಾನಗಳಿಸಿರುವ ಕರ್ನಾಟಕ 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ. ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕರ್ನಾಟಕಕ್ಕೆ ಪ್ರಶಸ್ತಿ ದೊರೆತಿದೆ.

ಹೆಮ್ಮೆ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್
ರಾಜ್ಯಕ್ಕೆ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ ಸಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ́ಈ ಪ್ರಶಸ್ತಿಯ ಹಿಂದೆ ಕ್ರೆಡಲ್ ಅಧಿಕಾರಗಳ ಶ್ರಮವಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕವು ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಉನ್ನತ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ರಾಜ್ಯ ಇಂಧನ ದಕ್ಷತೆ ಸೂಚ್ಯಂಕದಲ್ಲಿ (SEEI) ಸತತ ಮೂರು ವರ್ಷಗಳ ಕಾಲ ಅಂದರೆ, 2020-2021, 2022, ಮತ್ತು 2023ರಲ್ಲಿ “ಫ್ರಂಟ್ ರನ್ನರ್” ಸ್ಥಾನ ಗಳಿಸಿತ್ತು. 2024 ರಲ್ಲಿ, ರಾಜ್ಯಕ್ಕೆ ಎರಡನೇ ಬಹುಮಾನ ದೊರೆಕಿತ್ತು. ಇಂಧನ ದಕ್ಷತೆ ಸಾಧಿಸುವ ಬದ್ಧತೆಯಿಂದ ಈ ಬಾರಿ ಪ್ರಥಮ ಸ್ಥಾನ ಗಳಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯʼ ಎಂದರು










