ನವದೆಹಲಿ:ಮಾ.29: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ಮೇ. 10ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಒಂದೇ ಹಂತದಲ್ಲಿ ಕರ್ನಾಟಕದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ಮೇ. 10ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.13ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಪ್ರಕ್ರಿಯೆ ಇಂತಿದೆ:
ಏಪ್ರಿಲ್ 13-ಅಧಿಸೂಚನೆ ಪ್ರಕಟಣೆ.
ಏಪ್ರಿಲ್ 20-ನಾಮಪತ್ರ ಸಲ್ಲಿಕೆ.
ಏಪ್ರಿಲ್ 21-ನಾಮಪತ್ರ ಪರಿಶೀಲನೆ.
ಏಪ್ರಿಲ್ 24-ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಮೇ 10- ಮತದಾನ.
ಮೇ 13-ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ.
ಕರ್ನಾಟಕದಲ್ಲಿ 5.22 ಕೋಟಿ ಮತದಾರಿದ್ದು, ಈ ಪೈಕಿ 2.62 ಕೋಟಿ ಪುರುಷ ಮತದಾರರು ಮತ್ತು 2.59 ಕೋಟಿ ಮಹಿಳಾ ಮತದಾರರಿದ್ದಾರೆ. ಇದ್ದಾರೆ. 12,15,763 ಮತದಾರರು 80 ವರ್ಷ ಮೇಲ್ಪಟ್ಟವರಿದ್ದು, ಇವರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 9.17 ಲಕ್ಷ ಮತದಾರರು, ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ರಾಜ್ಯಾದ್ಯಂತ 58,282 ಮತಗಟ್ಟೆಗಳು ಸಿದ್ಧವಾಗಿದ್ದು, ತೃತೀಯ ಲಿಂಗಿಗಳಿಗೆ ಮತ್ತು ವಿಶೇಷ ಚೇತನರಿಗೆ ವಿಶೇಷ ಬೂತ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಇನ್ನು ಈ ಮತಗಟ್ಟೆಗಳ ಪೈಕಿ, 100 ಮತಗಟ್ಟೆಗಳನ್ನು ವಿಶೇಷ ಚೇತನ ಸಿಬ್ಬಂದಿ ನಿರ್ವಹಣೆ ಮಾಡಲಿದ್ದು, ಗ್ರೀನ್ ಮತ್ತು ಪಿಂಕ್(ಮಹಿಳೆಯರಿಗಾಗಿ) ಮತಗಟ್ಟೆಗಳು ಕೂಡ ಇರಲಿವೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಣದ ಬಳಕೆ ಮೇಲೆ ನಿಗಾ ಇಡಲು, ರಾಜ್ಯಾದ್ಯಂತ 2,400 ವಿಚಕ್ಷಣಾ ತಂಡಗಳನ್ನು ರಚಿಸಲಾಗಿದೆ. 19 ಜಿಲ್ಲೆಗಳಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳನ್ನು ಕೂಡ ರಚಿಸಲಾಗಿದೆ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರು ಕೂಡ ಈ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ. ಒಟ್ಟು 1,320 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಲಿದ್ದು, ಇದನ್ನು ಪಿಂಕ್ ಬೂತ್‌ಗಳೆಂದು ಪರಿಗಣಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದನ್ವಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು, ಕ್ರಿಮಿನಲ್ ದಾಖಲೆ ಹೊಂದಿರುವ ಅಭ್ಯರ್ಥಿಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ, ವಿದ್ಯುನ್ಮಾನ ಮಾಧ್ಯಮಗಳು ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಸ್ಪಷ್ಟವಾಗಿ ಪಾಲಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳು ಕೂಡ ಚುನಾವಣೆ ಬಗ್ಗೆ ಕರಾರುವಕ್ಕಾದ ಮಾಹಿತಿ ನೀಡಬೇಕು ಮತ್ತು ಈ ಕುರಿತ ಕಾನೂನುಗಳನ್ನು ಪಾಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇನ್ನು ಎರಡು ತಿಂಗಳ ಒಳಗಾಗಿ ರಾಜ್ಯವು ಹೊಸ ಸರ್ಕಾರವನ್ನು ಕಾಣಲಿದೆ ಎಂಬುದು ಸ್ಪಷ್ಟವಾಗಿದೆ.