ಮಲ್ಟಿಪ್ಲೆಕ್ಸ್ ಮತ್ತು ಸಿನೆಮಾ ಮಂದಿರಗಳಿಗೆ ಶೇ.100ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಈ ಹಿಂದೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದ ಕಾರಣ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು. ಇದರಿಂದಾಗಿ ಚಿತ್ರಮಂದಿರಕ್ಕೂ ಈ ನಿರ್ಬಂಧ ಹೇರಲಾಗಿತ್ತು. ಇದೀಗ ಚಿತ್ರಮಂದಿರಗಳ ಮೇಲಿನ 50/50 ನಿರ್ಬಂಧವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ.
ಕನ್ನಡ ಚಿತ್ರರಂಗ ಹಾಗೂ ವಾಣಿಜ್ಯ ಮಂಡಳಿಯು ನಿರಂತರವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ ಕಾರಣ ಇಂದಿನಿಂದ ಶೇ.100ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ಇಂದು ಸಭೆ ಸೇರಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರು ಎನ್-95 ಮಾಸ್ಕ್ಅನ್ನು ಧರಿಸಿರಬೇಕು ಮತ್ತು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಚಿತ್ರಮಂದಿರದ ಹೊರಗೆ ಮತ್ತು ಒಳಗೆ ಆಹಾರ ಪದರ್ಥಾಗಳ ಮಾರಾಟವನ್ನು ನಿಷೇಧಿಸಲಾಗಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಒಂದು ವೇಳೆ ಪಾಲನೆಯಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.