ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಸೆ.26 ರಂದು ಬೆಂಗಳೂರು ಬಂದ್ಗೆ(Bangalore Bandh) ಕರೆ ನೀಡಲಾಗಿದೆ. ಆದರೆ ಎಲ್ಲರೂ ಒಟ್ಟು ಸೇರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಎಲ್ಲಾ ಸಂಘಟನೆಗಳು ಸೇರಿಕೊಂಡು ಕರ್ನಾಟಕ ಬಂದ್ (Karnataka Bandh) ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ. ಹೀಗಾಗಿ ಬೆಂಗಳೂರು ಬಂದ್ ಹಿಂಪಡೆಯಲು ಮನವಿ ಮಾಡಿದೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟು, ಸೆ.26ರ ಬೆಂಗಳೂರು ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಪ್ರತ್ಯೇಕವಾಗಿ ಬೇಡ ಅಂತ ಮನವಿ ಮಾಡಲಾಗಿದೆ. ಎರಡು ಬಾರಿ ಬಂದ್ ಮಾಡುವ ಬದಲು ಒಂದೇ ಬಾರಿ ರಾಜ್ಯ ಬಂದ್ ಮಾಡೋಣ. ಈ ಬಗ್ಗೆ ವಾಟಾಳ್ ನಾಗರಾಜ್ ಸೇರಿ ಎಲ್ಲ ಸಂಘಟನೆಗಳ ಜತೆ ಚರ್ಚಿಸುತ್ತೇವೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಸೆ.26 ರಂದು ಬೆಂಗಳೂರು ಬಂದ್ ನಿಶ್ಚಿತವಾಗಿದೆ. ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇನ್ನೊಂದೆಡೆ, ಅಖಂಡ ಕರ್ನಾಟಕ ಬಂದ್ ನಡೆಸಲು ಒಂದಷ್ಟು ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ವಾಟಾಳ್ ನಾಗರಾಜ್, ಸೋಮವಾರದಂದು ಬಂದ್ ದಿನಾಂಕ ಘೋಷಣೆ ಮಾಡಲಿದ್ದಾರೆ. ಸೆ. 28 ಅಥವಾ 29 ಅಥವಾ 30 ರಂದು ಅಖಂಡ ಕರ್ನಾಟಕ ಬಂದ್ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ವಾಟಾಳ್, 26 ರಂದು ಬಂದ್ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧ ವಿಲ್ಲ. ಅವರ ಜೊತೆಗೆ ಮಾತಾಡುತ್ತೇವೆ, ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡೋಣ ಅಂತ ಮನವಿ ಮಾಡುವುದಾಗಿ ಹೇಳಿದ್ದರು.
ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡ ಒಕ್ಕೂಟದಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ನಾಳೆ ಮಹತ್ವದ ಸಭೆ
ಕರ್ನಾಟಕ ಬಂದ್ಗೆ ಕರೆ ನೀಡುವ ಸಂಬಂಧ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಜೊತೆ ಚರ್ಚಿಸಿ ಕರ್ನಾಟಕ ಬಂದ್ ದಿನಾಂಕ ನಿಗದಿ ಮಾಡಲಾಗುತ್ತಿದೆ.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾನಿರತ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಪೊಲೀಸ್ ವಶಕ್ಕೆ ಪಡೆದರು.