ಬೆಂಗಳೂರಿನ ಬಹುತೇಕ ಭಾಗದಲ್ಲಿ ಕನ್ನಡಕ್ಕೆ ಮಾನ್ಯತೆಯೇ ಇಲ್ಲದಂತಾಗಿದೆ ಅನ್ನೋ ಕಾರಣಕ್ಕೆ ಕರವೇ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿದ್ದರು. ಎಲ್ಲರನ್ನು ಬಂಧನ ಮಾಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಆ ಬಳಿಕ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ, ಆಗಿರುವ ಘಟನೆ ಹಾಗು ಘಟನೆಗೆ ಕಾರಣ ಮತ್ತು ಮುಂದೆ ಆಗಬೇಕಿರುವ ವಿಚಾರಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಸಮಗ್ರವಾಗಿ ಚರ್ಚೆ ನಡೆಸಿದರು. ಆ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಕನ್ನಡ ಮತ್ತು ಬೇರೆ ಭಾಷೆಗೆ 50 – 50 ಅವಕಾಶವಲ್ಲ.. ಶೇಕಡ 60 – 40 ರಷ್ಟು ಅವಕಾಶ ಎಂದು ಘೋಷಿಸಿದ್ದಾರೆ. ಅಂದರೆ ಕನ್ನಡ ಶೇಕಡ 60 ರಷ್ಟು ಇರಲೇಬೇಕು ಅನ್ನೋದು ಹೊಸ ಆದೇಶ.

ಶೇಕಡ 60 ರಷ್ಟು ಕನ್ನಡ ಭಾಷೆಯ ನಾಮಫಲಕ ಕಡ್ಡಾಯ
ಗೃಹ ಸಚಿವರು, ನಾನು ಪೊಲೀಸ್ ಇಲಾಖೆ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ನಿನ್ನೆ ನಡೆದ ಘಟನೆ ಸಂಬಂಧ ಸಭೆ ಕರೆಯಲಾಗಿತ್ತು. ಡಿ ಕೆ ಶಿವಕುಮಾರ್ ನಾಗಪುರದ ಸಭೆಗೆ ಹೋಗಿರುವ ಕಾರಣ ಬಂದಿಲ್ಲ. 2023ರ ಮಾರ್ಚ್ 10 ರಂದು ಹಿಂದಿನ ಸರ್ಕಾರ ಕನ್ನಡ ಭಾಷ ಸಮಗ್ರ ಅಭಿವೃದ್ಧಿ ಅಧಿನಿಯಮ – 2022 ಬಿಲ್ ತಂದಿದ್ದಾರೆ. ಎರಡೂ ಸದನಗಳಲ್ಲಿ ಬಿಲ್ ಪಾಸ್ ಆಗಿದೆ. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕಿದ್ದಾರೆ. ಸೆಕ್ಷನ್ 17 ಸಬ್ ಸೆಕ್ಷನ್ 6 ಪ್ರಕಾರ ಸರ್ಕಾರ ಅಥವಾ ಸ್ಥಳೀಯ ಪದಾಧಿಕಾರಿಗಳ ಅನುಮೋದನೆ ಅಥವಾ ಮಂಜೂರಾತಿಗೆ ಒಳಪಟ್ಟ ವ್ಯಾಪಾರ, ವಹಿವಾಟು ಕೇಂದ್ರಗಳ ನಾಮಫಲಕಗಳು ಶೇಕಡ 50 ರಷ್ಟು ಕನ್ನಡದಲ್ಲಿರ ಇರಬೇಕೆಂದು ನಿಯಮ ರೂಪಿಸಲಾಗಿದೆ. 24 ಮಾರ್ಚ್ 2018 ರಂದು ಶೇಕಡ 60 ರಷ್ಟು ಕನ್ನಡ ಇರಬೇಕೆಂದು ನಾವು ಸುತ್ತೋಲೆ ಹೊರಡಿಸಿದ್ದೇವೆ. ಆದರೆ ಹಿಂದಿನ ಸರ್ಕಾರ 50-50 ಮಾಡಿ ಆದೇಶಿಸಿದೆ. ಆದರೆ ಇವತ್ತಿನ ಸಭೆಯಲ್ಲಿ ಈ ಹಿಂದಿನ ಸುತ್ತೋಲೆಯಂತೆ 60 – 40 ಇರಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ. ಇದಕ್ಕಾಗಿ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ಆದೇಶ ಹೊರಡಿಸಿ ಎಂದು ಹೇಳಿದ್ದೇನೆ ಎಂದಿದ್ದಾರೆ.
2024 ಫೆಬ್ರವರಿ 28 ಕ್ಕೆ ನಾಮಫಲಕ ತೆರವಿಗೆ ಸಿಎಂ ಗಡುವು
2024 ಫೆಬ್ರವರಿ 28 ರೊಳಗೆ ಕನ್ನಡ ಬೋರ್ಡ್ ಆದೇಶ ಜಾರಿಗೆ ಬರಲಿದೆ ಎಂದಿರುವ ಸಿದ್ದರಾಮಯ್ಯ, ಈ ಆಕ್ಟ್ ಇನ್ನೂ ನೋಟಿಫೈ ಆಗಿಲ್ಲ. ತಕ್ಷಣ ನೋಟೀಫೈ ಮಾಡಿ ರೂಲ್ಸ್ ಫ್ರೇಮ್ ಮಾಡಲು ಹೇಳಿದ್ದೇನೆ. ವಿಳಂಭ ಆಗಿರೋದು ನಿಜ, ಆದರೆ ಇನ್ನು ವಿಳಂಭ ಆಗಬಾರದು ಅಂತ ಹೇಳಿದ್ದೇನೆ. ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ರೂಲ್ಸ್ ಫ್ರೇಮ್ ಮಾಡ್ತೀವಿ. ಶಾಂತಿಯುತ ಪ್ರತಿಭಟನೆಗೆ ನಮ್ಮ ಸರ್ಕಾರ ಅಡ್ಡಿಪಡಿಸಲ್ಲ. ಆದರೆ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಸರ್ಕಾರ ಸಹಿಸಲ್ಲ ಎನ್ನುವ ಮೂಲಕ ಕನ್ನಡಪರ ಸಂಘಟನೆಗಳಿಗೆ ಸಿಎಂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಯಾವುದೇ ಪ್ರತಿಭಟನೆಗೆ ಹೈಕೋರ್ಟ್ ತಡೆ ನೀಡಿದೆ..!
ಇತ್ತೀಚೆಗೆ 2022 ಮಾರ್ಚ್ 03ರಂದು ಹೈಕೋರ್ಟ್ ದ್ವಿಸದಸ್ಯ ಪೀಠ ಫ್ರೀಡಂಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ತೀರ್ಪು ನೀಡಿದೆ. ಆದರೂ ನ್ಯಾಯಕ್ಕಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ, ರಾಜ್ಯಕ್ಕಾಗಿ ಶಾಂತಿಯುತ ಪ್ರತಿಭಟನೆ ಮಾಡ್ತೀವಿ ಅಂದ್ರೆ ನಾವು ವಿರೋಧ ಮಾಡಲ್ಲ. ಕಾನೂನು ಮುರಿಯೋದು, ಕಾನೂನು ಕೈ ತೆಗೆದುಕೊಂಡರೆ ಕಾನೂನು ರೀತಿ ಕ್ರಮ ಆಗಲಿದೆ. ಯಾರೇ ಆಗಲಿ ಕಾನೂನು ರೀತಿ ನಡೆದುಕೊಳ್ಳಬೇಕು. ಸಂವಿಧಾನದಲ್ಲಿ ವಾಕ್ ಸ್ವಾಂತತ್ರ್ಯಕ್ಕೆ ಅವಕಾಶ ನೀಡಿದ್ದೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡ ಭಾಷೆಗೆ ಮೊದಲ ಆದ್ಯತೆ. ಇದರಲ್ಲಿ ಯಾವುದೇ ರಾಜೀ ಇಲ್ಲ ಎನ್ನುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ನಾನು ಇವತ್ತಿಗೂ ಫೈಲ್ ಮೇಲೆ ಬರೆಯೋದೆಲ್ಲಾ ಕನ್ನಡದಲ್ಲೇ, ಕನ್ನಡ ಸಾರ್ವಭೌಮ ಭಾಷೆ, ಕನ್ನಡದಲ್ಲಿ ಆಡಳಿತ ನಡೆಸಬೇಕು ಎಂದಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ..
ನಾವು ಈಗಾಗಲೇ ಬಿಬಿಎಂಪಿಗೆ ಅಧಿಕಾರಿಗಳಿಗೆ ಈ ಬಗ್ಗೆ ಹೇಳಿದ್ದು, ಫೆಬ್ರವರಿ 28 ರೊಳಗೆ ಶೇಕಡ 60ರಷ್ಟು ಕನ್ನಡ ಪದ ಬಳಕೆಯ ನಾಮಫಲಕ ಹಾಕದಿದ್ರೆ ಕ್ರಮ ಅಂತ ತಿಳಿಸಿದ್ದೇನೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಕನ್ನಡ ಉಳಿವಿಗೆ ನಾವು ನಡೆದುಕೊಳ್ತೀವಿ ಅಂತಾನೂ ತಿಳಿಸಿದ್ದಾರೆ. ನಗರ ಪೊಲೀಸರ ಆಯುಕ್ತರು ದಯಾನಂದ ಮಾತನಾಡಿ, ಕರವೇ ಕಾರ್ಯಕರ್ತರು ಪ್ರತಿಭಟನೆ ಹಿನ್ನೆಲೆಯಲ್ಲಿ 10 FIR ದಾಖಲಾಗಿದೆ. 53 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಾರಾಯಣ ಗೌಡ ಸೇರಿದಂತೆ 53 ಕರವೇ ಕಾರ್ಯಕರ್ತರ ಬಂಧನವಾಗಿದೆ. ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ. ಆದರೆ ಕಾನೂನು ಸುವ್ಯವಸ್ಥೆ ಕದಡುವಂತಹ ಕೆಲಸ ಮಾಡಬಾರದು ಎಂದಿದ್ದಾರೆ. ಆದರೂ ಕರವೇ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಫೆಬ್ರವರಿ 28 ರೊಳಗೆ ಶೇಕಡ 60ರಷ್ಟು ಕನ್ನಡ ಪದ ಬಳಕೆಯ ನಾಮಫಲಕ ಇರಲೇಬೇಕು. ಇಲ್ಲದಿದ್ರೆ ಬಿಬಿಎಂಪಿ ಅಧಿಕೃತವಾಗಿ ದಂಡ ಹಾಕುವುದು ಶತಸಿದ್ಧ.