ಲೋಕಸಭಾ ಅಧಿವೇಶನದಲ್ಲಿ ತಮಿಳುನಾಡಿನ ಸಂಸದೆ ಕನ್ನಿಮೊಳಿ ಹಿಂದಿ ಹೇರಿಕೆಯ ಕುರಿತು ಸೂಕ್ಷ್ಮವಾಗಿ ಚಾಟಿ ಬೀಸಿರುವ ವೀಡಿಯೋ ಈಗ ವೈರಲ್ ಆಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಇಂಗ್ಲೀಷ್ ಅಥವಾ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಬಳಸಿ ನಾಮಕರಣ ಮಾಡಬೇಕೆಂಬ ಆಗ್ರಹವನ್ನು ಅತ್ಯಂತ ಸೂಚ್ಯವಾಗಿ ಕನ್ನಿಮೊಳಿ ಲೋಕಸಭೆಯಲ್ಲಿ ಹೇಳಿದ್ದಾರೆ.
ಹಿಂದಿ ಹೇರಿಕೆಯ ಕುರಿತು ಕಳೆದ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ದ್ರಾವಿಡ ನೆಲವಾದ ತಮಿಳುನಾಡು, ಈ ಹೇರಿಕೆಯನ್ನು ದಿಟ್ಟವಾಗಿ ಎದುರಿಸುತ್ತಲೇ ಬಂದಿದೆ. ಸರ್ಕಾರದ ಮಟ್ಟದಿಂದ ಹಿಡಿದು ಜನಸಾಮಾನ್ಯರವರೆಗೂ ಹಿಂದಿ ಹೇರಿಕೆಯ ವಿರುದ್ಧ ದ್ರಾವಿಡ ಅಸ್ಮಿತೆಯ ಏಕತೆಯನ್ನು ಪಕ್ಷಭೇದ ಪ್ರದರ್ಶಿಸುತ್ತಲೇ ಬಂದಿದ್ದಾರೆ. ಇದರ ಮುಂದುವರೆದ ಭಾಗವಾಗಿ ಕನ್ನಿಮೊಳಿ ಅವರ ಮಾತುಗಳನ್ನು ಸ್ವೀಕರಿಸಬೇಕಾದ ಅಗತ್ಯತೆಯಿದೆ.
ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೊಳಿಸಿರುವ ‘ಆತ್ಮನಿರ್ಭರ್ ಭಾರತ್’ ಯೋಜನೆಯನ್ನು ಉಲ್ಲೇಖಿಸಿ ಕೇಂದ್ರದ ವಿರುದ್ದ ಕನ್ನಿಮೊಳಿ ಚಾಟಿ ಬಿಸಿದ್ದಾರೆ. ಯೋಜನೆಯ ಹೆಸರನ್ನು ಉಚ್ಚರಿಸಲು ಜನರಿಗೆ ಸಾಧ್ಯವಾಗದಿದ್ದರೆ, ಅವರ ಪ್ರಯೋಜನಗಳು ಅವರಿಗೆ ಲಭಿಸುವುದಾದರೂ ಹೇಗೆ? ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
“ಹಿಂದಿ ಹೆಸರಿರುವ ಯೋಜನೆಗಳು ಅರ್ಥೈಸಿಕೊಳ್ಳುವುದು ಕಷ್ಟ. ಇದಕ್ಕಾಗಿ ಯೋಜನೆಗಳ ಹೆಸರನ್ನು ಇಂಗ್ಲೀಷ್ ಭಾಷೆಯಲ್ಲಿ ಅಥವಾ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ನಾಮಕರಣ ಮಾಡಬೇಕು. ವಿವಿಧ ಭಾಷೆಗಳನ್ನು ಮಾತನಾಡುವ ದೇಶದಲ್ಲಿ ಎಲ್ಲರಿಗೂ ಹಿಂದಿ ಅರ್ಥವಾಗಬೇಕು ಎಂದರೆ ಅದು ಅಸಾಧ್ಯ,” ಎಂದು ಕನ್ನಿಮೊಳಿ ಹೇಳಿದ್ದಾರೆ.
ಈ ವೇಳೆ ಮತ್ತೊಬ್ಬ ಸದಸ್ಯ ಮಧ್ಯಪ್ರವೇಶಿಸಿ, ನಿಮಗೆ ಅರ್ಥ ಆಗಿಲ್ಲವಾದರೆ ನಾವೇನು ಮಾಡಲು ಸಾಧ್ಯ ಎಂಬ ಉಡಾಫೆ ಉತ್ತರ ನೀಡಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕನ್ನಿಮೊಳಿ, “ಸರಿ ಹಾಗಿದ್ದರೆ, ನಾನು ಇನ್ನು ಮುಂದೆ ತಮಿಳು ಭಾಷೆಯಲ್ಲಿ ಮಾತನಾಡುತ್ತೇನೆ. ಅರ್ಥವಾಗುತ್ತಾ ಹೇಳಿ,” ಎಂದು ತಮಿಳಿನಲ್ಲಿಯೇ ಉತ್ತರಿಸಿದ್ದಾರೆ.
ಮುಂದುವರೆದು, ನಾನು ತಮಿಳಿನಲ್ಲಿ ಮಾತನಾಡಬೇಕು ಎಂದರೆ ಪೂರ್ವಾನುಮತಿ ಪಡೆಯಬೇಕು ಎಂದು ಹೇಳುತ್ತೀರಾ. ಅದೇ ಸಮಸ್ಯೆ ಆಗಿರುವುದು, ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಈ ವೀಡಿಯೋ ತಮಿಳುನಾಡಿನಾದ್ಯಂತ ಸಾಕಷ್ಟು ವೈರಲ್ ಆಗಿದ್ದು ಕನ್ನಿಮೊಳಿ ಮಾತುಗಳಿಗೆ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕದ ‘ಎಕ್ಕೀ ಮಿನಿಟ್’ ರಾಜಕಾರಣಿಗಳು
ಕರ್ನಾಟಕದಲ್ಲಿ ಹುಟ್ಟಿ ಇಲ್ಲೇ ಬೆಳೆದು ಇಲ್ಲಿನ ಜನರ ಮತಗಳನ್ನು ಪಡೆದು ಲೋಕಸಭೆಗೆ ಆಯ್ಕೆಯಾದ ಸಂಸದರು ಮಾತ್ರ ತಮ್ಮ ಹೈಕಮಾಂಡ್ ಓಲೈಕೆಗೆ ಹರುಕು ಮುರುಕು ಹಿಂದಿ ಮಾತನಾಡಿ ನಗೆ ಪಾಟಲಿಗೆ ಈಡಾಗಿದ್ದನ್ನು ನಾವು ಈ ಹಿಂದೆಯೇ ಕಂಡಿದ್ದೇವೆ. ಬಹಿರಂಗವಾಗಿ ಕನ್ನಡದ ಪರ ನಿಲ್ಲಲು ಕೂಡಾ ಅಸಡ್ಡೆ ತೋರುವಂತಹ ಇಲ್ಲಿನ ರಾಜಕಾರಣಿಗಳಿಗೆ ಕನ್ನಮೊಳಿ ನಿಜಕ್ಕೂ ಮಾದರಿಯಾಗಿ ನಿಲ್ಲುತ್ತಾರೆ.
ಈ ಹಿಂದೆ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ನಡೆದಾಗ ಕನ್ನಡ ಸಂಪೂರ್ಣವಾಗಿ ಮಾಯವಾಗಿದ್ದನ್ನು ನಾವು ಕಂಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರು ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಕರ್ನಾಟಕದ ರಾಜಕಾರಣಿಗಳು ಕನ್ನಡವನ್ನೇ ಮರೆತು ಅವರ ಓಲೈಕೆಗೆ ಹೊರಟಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಇದೇ ವರ್ಷದ ಜನರಿಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಶಿವಮೊಗ್ಗದ ಭದ್ರಾವತಿಗೆ ಆಗಮಿಸಿದ್ದರು. ಅಲ್ಲಿ ರ್ಯಾ ಪಿಡ್ ಆ್ಯಕ್ಷನ್ ಫೋರ್ಸ್ ಘಟಕದ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ವೇಳೆ, ಅಡಿಗಲ್ಲಿನ ಫಲಕಗಳು ಹಾಗೂ ವೇದಿಕೆಯ ಮೇಲಿದ್ದ ಬ್ಯಾನರ್ ಮೇಲೆ ಕೇವಲ ಹಿಂದಿ ಮತ್ತು ಇಂಗ್ಲೀಷ್’ಗೆ ಸ್ಥಾನ ನೀಡಲಾಗಿತ್ತು. ಅಂದಿನ ಸಿಎಂ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅಂದಿನ ರಾಜ್ಯ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಅಂದಿನ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಹಲವು ಘಟಾನುಘಟಿ ನಾಯಕರು ವೇದಿಕೆಯಲ್ಲಿದ್ದರೂ, ಕನ್ನಡಕ್ಕಾದ ಅವಹೇಳನದ ಕುರಿತು ಒಬ್ಬರೂ ಚಕಾರವೆತ್ತಿಲ್ಲ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ ಹಾಗಾಗಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ ಎಂದು ಸಬೂಬು ನೀಡಿದ್ದರು.
ಅಕ್ಟೋಬರ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಸಚಿವ ಆನಂದ್ ಸಿಂಗ್ ವೇದಿಕೆಯ ಮೇಲಿಂದಲೇ ಇಲಾಖೆಯ ಅಧಿಕಾರಿಗಳಿಗೆ ಚಾಟಿ ಬೀಸಿದ್ದರು. ವೇದಿಕೆಯಲ್ಲಿ ಕನ್ನಡಕ್ಕೆ ಸ್ಥಾನ ಕೊಡದೇ ಇರುವುದನ್ನು ಮಾಧ್ಯಮ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದ ಬಳಿಕ, ಕನ್ನಡದಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸಿ ತೇಪೆ ಹಚ್ಚುವ ಕಾರ್ಯ ಮಾಡಲಾಗಿತ್ತು.
ಇನ್ನು ಆಗಸ್ಟ್ ತಿಂಗಳಲ್ಲಿ ಎರಡನೇ ಹಂತದ ಮೆಟ್ರೋ ಯೋಜನೆ ಉದ್ಘಾಟನೆಯ ವೇಳೆ ಮುಖ್ಯವೇದಿಕೆಯಿಂದ ಕನ್ನಡವನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿತ್ತು. ‘ನಮ್ಮ ಮೆಟ್ರೊ’ ಕನ್ನಡಿಗರದ್ದಲ್ಲ ಎಂಬ ಸಂದೇಶವನ್ನು ಸಾರಿದಂತಿತ್ತು. ಇದಕ್ಕಾಗಿ ಮೆಟ್ರೋ ಅಧಿಕಾರಿಗಳು ಕ್ಷಮೆಯನ್ನೂ ಕೇಳಿದ್ದರು.
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ರಲ್ಲಿ ಕನ್ನಡ ಸಂಪೂರ್ಣವಾಗಿ ಮಾಯವಾಗಿತ್ತು. ಅಂದಿನ ಸಿಎಂ ಬಿ ಎಸ್ ವೈ ಎದುರಲ್ಲೇ ಕನ್ನಡಕ್ಕೆ ಅಪಚಾರವೆಸಗಿದ್ದರೂ, ಅವರು ಮುಗಮ್ಮಾಗಿ ಕುಳಿತಿದ್ದರು. ಮೊತ್ತಮೊದಲ ಬಾರಿಗೆ ಏರೋ ಇಂಡಿಯಾ ಕಾರ್ಯಕ್ರಮದಿಂದ ಕನ್ನಡವನ್ನು ಹೊರಗಿಡಲಾಗಿತ್ತು.
ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಕೇಂದ್ರ ಮಂತ್ರಿ ಭಾಗವಹಿಸಿದ ಕಾರಣಕ್ಕೆ ಕನ್ನಡ ಮಾಯವಾಗಿತ್ತು. ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ವೇದಿಕೆಯಲ್ಲಿಯೇ ಇದ್ದರೂ, ಸಂಪೂರ್ಣ ವೇದಿಕೆಯಲ್ಲಿ ಕನ್ನಡದ ಒಂದಕ್ಷರವೂ ಇರಲಿಲ್ಲ.
ಇದು ಕರ್ನಾಟಕದ ರಾಜಕಾರಣಿಗಳ ಕನ್ನಡ ಪ್ರೀತಿ. ರಾಜ್ಯದ ಸಂಸದೆಯೊಬ್ಬರು ಲೋಕಸಭೆಯಲ್ಲಿ ಎಕ್ಕಿ ಮಿನಿಟ್ ಎಕ್ಕಿ ಮಿನಿಟ್ ಎಂದು ಅರಚಾಡಿದ್ದು ಈಗ ಇತಿಹಾಸ.
ಈ ಎಕ್ಕಿ ಮಿನುಟ್ ಎಂಬ ಒಲೈಕೆಯ ರಾಜಕಾರಣದಲ್ಲಿ ಕನ್ನಡ ಬಡವಾಗಿದ್ದು ಮಾತ್ರ ಯಾರ ಕಣ್ಣಿಗೂ ಗೋಚರಿಸಲಿಲ್ಲ. ನಮ್ಮದೇ ನೆಲದಲ್ಲಿ ಸಿರಿಗನ್ನಡವನ್ನು ಗಲ್ಲಿಗೇರಿಸಿದ ರಾಜಕಾರಣಿಗಳು ತಮಿಳರ ಭಾಷಾ ಅಸ್ಮಿತೆಯಿಂದ ಕಲಿಯುವುದು ಸಾಕಷ್ಟಿದೆ. ಕನ್ನಿಮೊಳಿ ಅವರ ವೈರಲ್ ವೀಡಿಯೋ ನೋಡಿದ ಕರ್ನಾಟಕದ ರಾಜಕಾರಣಿಗಳು ಇನ್ನಾದರೂ ತಿದ್ದಿಕೊಳ್ಳಲಿ ಎಂಬುದು ನಮ್ಮ ಆಶಯ.