ದ್ವಾರಕೀಶ್ ಕನ್ನಡದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ಪಾತ್ರ ಯಾವುದೇ ಇರಲಿ ಅದಕ್ಕೆ ಸಹಜತೆ, ಜೀವಂತಿಕೆಯನ್ನು ತುಂಬುವ ಅದ್ಭುತ ಕಲಾವಿದ.
ಇವರು1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯ ಹಾದಿ ಹಿಡಿದರು.

ಸಿನಿ ದಾರಿ
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರಾಂಡ್ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ಹಲವು ನಟ ದಿಗ್ಗಜರುಗಳೊಂದಿಗೆ ತೆರೆಯನ್ನು ಹಂಚಿಕೊಂಡಿದ್ದ ದ್ವಾರಕೀಶ್, ಅಷ್ಟೇ ಒಳ್ಳೆಯ ಒಡನಾಟವನ್ನು ಹಿರಿಯ ನಟರುಗಳೊಂದಿಗೆ ಇಟ್ಟುಕೊಂಡಿದ್ದರು. ವಿಷ್ಣುವರ್ಧನ್ ಮತ್ತು ಇವರ ಜೋಡಿ ಕಳ್ಳ-ಕುಳ್ಳ ಎಂದೇ ಖ್ಯಾತಿಯಾಗಿತ್ತು.

1966ರಲ್ಲಿ ದ್ವಾರಕೀಶ್ ಅವರು ಮಮತೆಯ ಬಂಧನ ಸಿನಿಮಾವನ್ನು ಇನ್ನಿಬ್ಬರು ನಿರ್ಮಾಪಕರ ಜೊತೆ ಸೇರಿ ನಿರ್ಮಿಸಿದರು. 1969ರಲ್ಲಿ ಡಾ.ರಾಜ್ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಹೊರಹೊಮ್ಮಿದರು. ಈ ಚಿತ್ರ ಬಾಕ್ಸಾಫೀಸ್ನಲ್ಲಿ ಬಹುದೊಡ್ಡ ಸದ್ದನ್ನು ಮಾಡಿತ್ತು. ಇದರ ಬಳಿಕ ಹಲವು ಸಿನಿಮಾಗಳನ್ನು ನಿರ್ಮಿಸಿ, ಅದರಲ್ಲಿ ಯಶಸ್ಸು ಗಳಿಸಿದರು. ದ್ವಾರಕೀಶ್ ಈವರೆಗೂ 45ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಹಲವು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಸಿದ್ದಾರೆ.

ನಿರ್ದೇಶಕರಾಗಿ ದ್ವಾರಕೀಶ್
1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಡಾ.ರಾಜ್ಕುಮಾರ್, ವಿಷ್ಣುವರ್ಧನ್ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಗಳಿಸಿರುವ ದ್ವಾರಕೀಶ್ ‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಈಗಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.