ದೇಶದಲ್ಲಿ ಬಲಪಂಥೀಯ ಆಡಳಿತದ ಜನವಿರೋಧಿ ನೀತಿ, ದಬ್ಬಾಳಿಕೆ ಮತ್ತು ಅಟ್ಟಹಾಸಗಳು ಜನ ಸಾಮಾನ್ಯರ ಬದುಕನ್ನು ಹೈರಾಣು ಮಾಡಿರುವ ಹೊತ್ತಿನಲ್ಲಿ, ಗಟ್ಟಿ ಜನಪರ ದನಿಯಾಗಿ ನಿಲ್ಲಬೇಕಿದ್ದ ಹಲವು ಎಡಪಂಥೀಯ ನಾಯಕರುಗಳು ಸದ್ಯದ ಸಂಘರ್ಷಗಳಿಗೆ ಬೆನ್ನು ಹಾಕಿದ್ದಾರೆ ಎಂಬ ಆರೋಪಗಳು ಜೋರಾಗಿವೆ.
ಇಂತಹ ಆರೋಪಗಳಿಗೆ ಪುಷ್ಟಿ ನೀಡುವಂತೆ, ಕೆಲವೇ ವರ್ಷಗಳ ಹಿಂದೆ ನರೇಂದ್ರ ಮೋದಿ ಮತ್ತು ಅವರ ಹಿಂದುತ್ವವಾದಿ ಬಿಜೆಪಿಗೆ ಪರ್ಯಾಯ ದನಿಯಾಗುವ ಭರವಸೆ ಹುಟ್ಟಿಸಿದ್ದ ಜವಾಹರಲಾಲ್ ನೆಹರು ವಿವಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸಿಪಿಐ ಮುಖಂಡ ಕನ್ಹಯ್ಯಕುಮಾರ್, ಅದೇ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ಕಡೆ ವಾಲಿರುವ ಸುದ್ದಿ ಬಂದಿದೆ.
ಹೌದು, ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಕನ್ಹಯ್ಯ ಕುಮಾರ್ ಅವರು ಬಿಹಾರದ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಸಚಿವರೊಬ್ಬರನ್ನು ಖಾಸಗಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎನ್ ಡಿಎ ಮೈತ್ರಿಯ ಭಾಗವಾಗಿ ಬಿಹಾರದ ಅಧಿಕಾರ ಹಿಡಿದಿರುವ ನಿತೀಶ್ ಕುಮಾರ್ ಅವರ ಪರಮಾಪ್ತರೂ ಸರ್ಕಾರ ಮತ್ತು ಜೆಡಿಯುನಲ್ಲಿ ನಿರ್ಣಾಯಕ ಅಧಿಕಾರ ಹೊಂದಿರುವ ಆ ಸಚಿವ ಅಶೋಕ್ ಚೌಧುರಿ ಅವರೊಂದಿಗಿನ ಕನ್ಹಯ್ಯ ಅವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಸಿಪಿಐ ಪಕ್ಷ ಮತ್ತು ಕನ್ಹಯ್ಯ ನಡುವಿನ ಸಂಬಂಧ ಹಳಸಿದೆ. ಅಲ್ಲದೆ, ಪಕ್ಷದ ಪದಾಧಿಕಾರಿಯೊಂದಿಗೆ ಸಿಪಿಐ ಪಟನಾ ಕಚೇರಿಯಲ್ಲಿ ನಡೆದ ಘರ್ಷಣೆ ಘಟನೆಯ ಹಿನ್ನೆಲೆಯಲ್ಲಿ, ಇತ್ತೀಚೆಗೆ ಹೈದಬಾಬಾದಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಕನ್ಹಯ್ಯ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿತ್ತು. ಆ ಮೂಲಕ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವ ಸೂಚನೆ ರವಾನೆಯಾಗಿತ್ತು. ಅಲ್ಲದೆ, ಕಳೆದ ಲೋಕಸಭಾ ಚುನಾವಣೆ ವೇಳೆ, ಮಿತ್ರಪಕ್ಷ ಆರ್ಜೆಡಿಯೊಂದಿಗೆ ಮಾತುಕತೆ ನಡೆಸಿ, ತಮ್ಮ ವಿರುದ್ಧ ಆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವಂತೆ ಪ್ರಯತ್ನಿಸಲಿಲ್ಲ ಎಂಬ ಕಾರಣಕ್ಕೆ ಕನ್ಹಯ್ಯ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಜೊತೆಗೆ ಚುನಾವಣಾ ವೆಚ್ಚಕ್ಕಾಗಿ ಕನ್ಹಯ್ಯ ಮತ್ತು ಅವರ ಬೆಂಬಲಿಗರು ದೇಶಾದ್ಯಂತ ಸಂಗ್ರಹಿಸಿದ ದೇಣಿಗೆಯ ಹಣದ ಪಾಲಿನ ವಿಷಯದಲ್ಲಿ ಕೂಡ ಸಿಪಿಐ ಮತ್ತು ಕನ್ಹಯ್ಯ ನಡುವೆ ವೈಮಸ್ಯ ಉಂಟಾಗಿತ್ತು ಎನ್ನಲಾಗಿದೆ.
ಜೊತೆಗೆ ದೆಹಲಿ ಸೇರಿದಂತೆ ದೇಶಾದ್ಯಂತ ಬಿಜೆಪಿ ಸರ್ಕಾರದ ರೈತ ವಿರೋಧಿ ಕಾನೂನುಗಳು ಮತ್ತು ದಬ್ಬಾಳಿಕೆಯ ನೀತಿ ವಿರುದ್ಧ ನಡೆಯುತ್ತಿರುವ ನಿರಂತರ ಹೋರಾಟಗಳ ವಿಷಯದಲ್ಲಿ ಕೂಡ ಕನ್ಹಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಬಿಜೆಪಿ ವಿರುದ್ಧದ ಭರವಸೆಯ ದನಿಯಾಗಿ ದೇಶದ ಎಡಪಂಥೀಯರು ಮತ್ತು ಪ್ರಗತಿಪರರ ಡಾರ್ಲಿಂಗ್ ಆಗಿದ್ದ ಕನ್ಹಯ್ಯ, ಇದೀಗ ರೈತರು ತಿಂಗಳುಗಟ್ಟಲೆ ಆಹೋರಾತ್ರಿ ಹೋರಾಟ ನಡೆಸುತ್ತಿರುವಾಗ, ಅಮಾಯಕ ರೈತರ ವಿರುದ್ಧ ಸರ್ಕಾರ ಅಮಾನುಷ ಕಾನೂನು ಮತ್ತು ಪೊಲೀಸ್ ಬಲ ಪ್ರಯೋಗಿಸಿ ಹೋರಾಟ ಹತ್ತಿಕ್ಕುತ್ತಿರುವಾಗ ಏಕೆ ಜನ ಹೋರಾಟಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ದೂರವೇ ಉಳಿದಿದ್ದಾರೆ ಎಂಬ ಪ್ರಶ್ನೆಗಳೂ ಎದ್ದಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ಈ ಎಲ್ಲ ಪ್ರಶ್ನೆ, ಅನುಮಾನಗಳ ನಡುವೆ ಕಟ್ಟಾ ಎಡಪಂಥೀಯ ಐಕಾನ್ ಕನ್ಹಯ್ಯ ಮತ್ತು ಬಿಜೆಪಿ ಮಿತ್ರ ಪಕ್ಷ ಜೆಡಿಯು ನಾಯಕರ ನಡುವೆ ಮಾತುಕತೆ ನಡೆದಿದೆ. ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಪ್ರಮುಖ ಖಾತೆ ಹೊಂದಿರುವ ಮತ್ತು ಒಬ್ಬರು ಬಿಎಸ್ ಪಿ ಮತ್ತು ಪಕ್ಷೇತರ ಶಾಸಕರನ್ನು ಜೆಡಿಯುಗೆ ಕರೆ ತಂದು, ಅವರಿಗೆ ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನಮಾನ ಸಿಗುವಂತೆ ನೋಡಿಕೊಂಡ ಪ್ರಭಾವಿ ಸಚಿವರೊಂದಿಗೆ ನಡೆದಿರುವ ಈ ಮಾತುಕತೆ ಸಹಜವಾಗೇ ಕನ್ಹಯ್ಯ ಕುಮಾರ್ ಜೆಡಿಯು ಸೇರಲಿದ್ದಾರೆ ಎಂಬ ವಿಶ್ಲೇಷಣೆಗಳಿಗೆ ಇಂಬು ನೀಡಿದೆ. ಅದಕ್ಕೆ ತಕ್ಕಂತೆ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಕನ್ಹಯ್ಯ ನಡುವೆ ಬಹಳ ಸೌಹಾರ್ದ ಸಂಬಂಧವಿದೆ. ಜೆಎನ್ ಯು ವಿವಿ ಹೋರಾಟದ ದಿನಗಳಿಂದಲೂ ನಿತೀಶ್ ಅವರು ಕನ್ಹಯ್ಯ ಪರ ನಿಲುವು ಹೊಂದಿದ್ದರೆ, ಕಳೆದ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳ ಹೊತ್ತಲ್ಲಿ ಕೂಡ ಕನ್ಹಯ್ಯ ಅಪ್ಪಿತಪ್ಪಿಯೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಟೀಕೆಗಳನ್ನು ಮಾಡಿರಲಿಲ್ಲ!

ಈ ನಡುವೆ, ಜೆಡಿಯು ವಕ್ತಾರ ಅಜಯ್ ಅಲೋಕ್, ಈ ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಕನ್ಹಯ್ಯ ಕಮ್ಯುನಿಷ್ಟರ ವಿಕೃತ ಸಿದ್ಧಾಂತವನ್ನು ತ್ಯಜಿಸಿ, ಜೆಡಿಯುನ ಶಿಸ್ತಿನ ಸಿಪಾಯಿ ಆಗುವುದಾದರೆ, ಅವರಿಗೆ ಪಕ್ಷಕ್ಕೆ ಮುಕ್ತ ಸ್ವಾಗತ ಸದಾ ಕಾದಿದೆ’ ಎಂದಿದ್ದಾರೆ. ಆದರೆ, ಮೈತ್ರಿ ಸರ್ಕಾರದ ಪ್ರಮುಖ ಪಕ್ಷ ಬಿಜೆಪಿ ಮಾತ್ರ ಈ ಭೇಟಿಯ ಬಗ್ಗೆ ಕಟು ಮಾತುಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದು, ‘ಬುದ್ದಿಭ್ರಮಣೆಯಾಗಿರುವ ಕನ್ಹಯ್ಯನೊಂದಿಗೆ ಸರ್ಕಾರದ ಉನ್ನತ ಸ್ಥಾನದಲ್ಲಿರುವ ಪ್ರಮುಖ ಸಚಿವರು ಖಾಸಗಿಯಾಗಿ ಸಭೆ ನಡೆಸಿದ್ದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದೆ. ಆದರೆ, ಕನ್ಹಯ್ಯ ಮಾತ್ರ ಈವರೆಗೆ ಈ ವರದಿಗಳ ಬಗ್ಗೆಯಾಗಲೀ, ತಮ್ಮ ಮತ್ತು ಜೆಡಿಯು ನಾಯಕರ ನಡುವಿನ ಭೇಟಿಯ ಬಗ್ಗೆಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.
ಒಂದು ವೇಳೆ ಈ ವರದಿಗಳು ನಿಜವಾಗಿ, ಕನ್ಹಯ್ಯ ಸಿಪಿಐ ತೊರೆದು ಜೆಡಿಯು ಸೇರಲು ನಿರ್ಧರಿಸಿಯೇ ಈ ಮಾತುಕತೆ ನಡೆಸಿದ್ದರೆ; ಅದು ತೀರಾ ಅಗತ್ಯದ ಹೊತ್ತಲ್ಲಿ ದೇಶದ ಪ್ರಮುಖ ಯುವ ದನಿಯೊಂದು ಜನಸಾಮಾನ್ಯರ ಪಾಳೆಯದಿಂದ ಅಧಿಕಾರಸ್ಥರ ಕಡೆ ವಾಲಿದಂತೆಯೇ ಸರಿ. ಹಾಗಾದಲ್ಲಿ ಅಂತಹದ್ದೊಂದು ಬೆಳವಣಿಗೆಗೆ ಎಡಪಕ್ಷಗಳ ಬದಲಾಗದ ಜಿಗುಟುತನ, ಯುವ ನಾಯಕರನ್ನು ಬೆಳೆಸಲಾರದ ಸಾಂಪ್ರದಾಯಿಕ ಮನಸ್ಥಿತಿಗಳೇ ಕಾರಣವೇ? ಅಥವಾ ಸಂಯಮ ಮತ್ತು ಭರವಸೆಯನ್ನು ಬಹುಬೇಗ ಕಳೆದುಕೊಳ್ಳುವ ಹೊಸ ತಲೆಮಾರಿನ ನಾಯಕರ ದೌರ್ಬಲ್ಯ ಕಾರಣವೇ ಎಂಬುದು ಜಿಜ್ಞಾಸೆಯ ವಿಷಯ.