
ಕನ್ನಡದ ಬಗ್ಗೆ ತಮಿಳು ನಟ ಕಮಲ್ ಹಾಸನ್ ಅವಹೇಳನ ಮಾಡಿದ ಬಳಿಕ ಚಿತ್ರಬಿಡುಗಡೆಗೆ ಭದ್ರತೆ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಂದು ಹೈಕೋರ್ಟ್ ಅರ್ಜಿ ವಿಚಾರಣೆ ವೇಳೆ ಕಮಲ್ ಹಾಸನ್ಗೆ ಕೋರ್ಟ್ ಛೀಮಾರಿ ಹಾಕಿದೆ.. ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ… ಮೊದಲು ಕಮಲ್ ಹಾಸನ್ ಕ್ಷಮೆ ಕೇಳಲಿ.. ಆ ನಂತರ ಥಗ್ ಲೈಫ್ ಸಿನಿಮಾ ಬಿಡುಗಡೆ ಬಗ್ಗೆ ಅರ್ಜಿ ಪರಿಗಣನೆ ಮಾಡಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಕಮಲ್ ಹಾಸನ್ ಇರಲಿ.. ಯಾರೇ ಇರಲಿ.. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಕಟ್ಟು ನಿಟ್ಟಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಭಾಷೆ ಮುಖ್ಯವಾದದ್ದು, ಯಾವುದೇ ಭಾಷೆಯಿಂದ ಕನ್ನಡ ಹುಟ್ಟಿದೆ ಅಂದ್ರೆ ಹೇಗೆ..? ಇವತ್ತಿನ ಈ ಪರಿಸ್ಥಿತಿಗೆ ಕಮಲ್ ಹಾಸನ್ ನೇರ ಕಾರಣ.. ನಿಮ್ಮ ಹೇಳಿಕೆಯಿಂದ ಶಿವರಾಜ್ಕುಮಾರ್ಗೆ ಸಮಸ್ಯೆಯಾಗಿದೆ. ನೀವು ಕ್ಷಮೆ ಕೇಳದಿದ್ರೆ ಬೇಕಾಗಿಲ್ಲ.. ಕರ್ನಾಟಕ ಬಿಟ್ಟು ಬೇರೆ ಕಡೆ ಸಿನಿಮಾ ರಿಲೀಸ್ ಮಾಡಿಕೊಳ್ಳಿ ಎಂದಿರುವ ನ್ಯಾಯಮೂರ್ತಿಗಳು, ನೀವು ಮಾಡಿದ ತಪ್ಪಿಗೆ ಪೊಲೀಸರ ಭದ್ರತೆ ಯಾಕೆ ನೀಡಬೇಕು.? ಎಂದು ತರಾಟೆ ತೆಗೆದುಕೊಂಡಿತ್ತು. ಆ ಬಳಿಕ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿ ಕ್ಷಮಾಪಣೆ ಕೇಳುವುದಕ್ಕೆ ಕಾಲಾವಕಾಶ ಮಾಡಿಕೊಟ್ಟಿತ್ತು. ಆದರೆ ಕಮಲ್ ಹಾಸನ್ ಕ್ಷಮೆ ಕೇಳಲಿಲ್ಲ..

ನಟ ಕಮಲ್ ಹಾಸನ್ಗೆ ಹೈಕೋರ್ಟ್ ಚೀಮಾರಿ ಹಾಕಿದ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕಮಲ್ ಹಾಸನ್ ಕ್ಷಮೆಯಾಚನೆಗೆ ಹೈಕೋರ್ಟ್ ಹೇಳಿದೆ. ಅವರು ಕ್ಷಮೆ ಕೇಳ್ತಾರೆ ಅನ್ನೋ ವಿಶ್ವಾಸವಿದೆ. ಕನ್ನಡಪರ ಸಂಘಟನೆಗಳಿಗೆ ನಾನು ಮನವಿ ಮಾಡ್ತೀನಿ. ಪ್ರತಿಭಟನೆ ವಿಕೋಪಕ್ಕೆ ಹೋಗಬಾರದು ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಕರವೇ ನಾರಾಯಣಗೌಡ ಪ್ರತಿಕ್ರಿಯಿಸಿ ಕಮಲ್ ಹಾಸನ್ ಮಹಾನ್ ಮೂರ್ಖ, ಅವಿವೇಕಿ ಎಂದು ಕಿಡಿಕಾರಿದ್ದಾರೆ. ಕನ್ನಡ ಭಾಷೆ ಬಗ್ಗೆ ಜ್ಞಾನ ಇಲ್ಲದೆ ಇದ್ದರೂ ನಮ್ಮ ಭಾಷೆ ಬಗ್ಗೆ ಮಾತನಾಡಿದ್ದಾನೆ, ಇನ್ಮುಂದೆ ಯಾವುದೇ ಕಾರಣಕ್ಕೂ ಕರ್ನಾಟಕ್ಕೆ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಬಿಡಲ್ಲ ಎಂದಿದ್ದಾರೆ

ಕ್ಷಮೆ ಕೇಳದೇ ಮತ್ತೆ ಮೊಂಡುತನ ಪ್ರದರ್ಶಿಸಿರುವ ನಟ ಕಮಲ್ ಹಾಸನ್. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹನ್ಗೆ ಪತ್ರ ಬರೆದಿದ್ದಾರೆ. ಕಮಲ್ ಹಾಸನ್ ಪತ್ರದ ಮೂಲಕವೂ ಕ್ಷಮೆ ಕೇಳದೇ ಉದ್ಧಟತನ ಮೆರೆದಿದ್ದು, ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ಹೆಚ್ಚು ನೋವುಂಟು ಮಾಡಿದೆ.. ಕನ್ನಡವನ್ನ ಕುಗ್ಗಿಸಲು ನಾನು ಈ ರೀತಿ ಹೇಳಿಲ್ಲ. ಕನ್ನಡ ಭಾಷೆಯ ಪರಂಪರೆಯ ಬಗ್ಗೆ ಚರ್ಚೆ ಇಲ್ಲ. ತಮಿಳಿನಂತೆ, ಕನ್ನಡವೂ ಸಾಂಸ್ಕೃತಿಕ ಸಂಪ್ರಾದಾಯ ಹೊಂದಿದೆ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು, ಆದ್ರೆ ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನ ವಿರೋಧಿಸುತ್ತೇನೆ. ಸಿನಿಮಾ ಜನರ ನಡುವಿನ ಸೇತುವೆಯಾಗಬೇಕು.. ವಿಭಜಿಸುವ ಗೋಡೆ ಆಗಬಾರದು ಎಂದು ಹೇಳಿದ್ದಾರೆ.