
ಕನ್ನಡ ಭಾಷೆಗೆ ಅಪಮಾನ ಮಾಡಿದ್ದ ತಮಿಳು ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಸಿನಿಮಾ ಬ್ಯಾನ್ ರಾಜ್ಯದಲ್ಲಿ ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಇಂದು ಫಿಲಂ ಚೇಂಬರ್ನಲ್ಲಿ ಸಭೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಕಮಲ್ ಹಾಸನ್ ವಿರುದ್ಧ ಕನ್ನಡಪರ ಸಂಘಟನೆಗಳು ಈಗಾಗಲೇ ಕಿಡಿ ಕಾರಿದೆ. ರಾಜ್ಯದೆಲ್ಲೆಡೆ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತವಾಗ್ತಿದ್ದು, ಇದೀಗ ಥಗ್ ಲೈಫ್ ಸಿನಿಮಾದ ಮುಂಗಡ ಬುಕಿಂಗ್ಗೆ ಅವಕಾಶ ಕೊಡದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಮೌಖಿಕ ಸೂಚನೆ ನೀಡಿದೆ ಎನ್ನಲಾಗಿದೆ. ಕ್ಷಮೆ ಕೇಳುವವರೆಗೂ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡದಿರಲು ನಿರ್ಧಾರ ಮಾಡಲಾಗಿದೆ.
ಈ ಮಧ್ಯೆ, ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಭಾರೀ ವಿರೋಧ ಹಿನ್ನಲೆ, ನಟ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರ ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಿಸಬೇಕೆಂದು ಅರ್ಜಿ ಹಾಕಿದ್ದಾರೆ. ಇದೇ ವೇಳೆ, ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ರಾಜ್ ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದಾರೆ.

ಕಮಲ್ ಹಾಸನ್ ಕೋರ್ಟಿಗೆ ಹೋದ್ರು ನಾವು ಜಗ್ಗಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮ್ಮ ಎಲ್ಲಾ ವಿತರಕರು, ಪ್ರದರ್ಶಕರು ನಮ್ಮ ಜೊತೆ ಇದ್ದಾರೆ. ಅವರು ಕೋರ್ಟ್ಗೆ ಹೋಗಲಿ ನಾವು ಕೇವಿಟ್ ಹಾಕ್ತಿವಿ.. ನಾವು ಕಾನೂನ ಬಾಹಿರವಾಗಿ ಏನು ಮಾಡ್ತಿಲ್ಲ. ಕ್ಷಮೆ ಕೇಳದಿದ್ರೆ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಲ್ಲ ಎಂದಿದ್ದಾರೆ.

ಕಮಲ್ ಹಾಸನ್ ಕೋರ್ಟ್ ಗೆ ಹೋಗಿರುವ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ನಾನು ಸರ್ಕಾರದ ಪ್ರತಿನಿಧಿಯಾಗಿ ಪತ್ರ ಬರೆದಿದ್ದೆ. ವಾಣಿಜ್ಯ ಮಂಡಳಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಕೋರ್ಟ್ ಏನು ಮಾಡುತ್ತೆ ನೋಡೋಣ. ನಮ್ಮ ನಿಲುವನ್ನ ನಾವು ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಏನು ಆಗುತ್ತೆ ನೋಡೋಣ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಕೂಡ ಪ್ರತಿಕ್ರಿಯಿಸಿ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಈ ವಿಚಾರದ ಬಗ್ಗೆ ಮಾತಾಡಲ್ಲ.. ಯಾಕೆಂದ್ರೆ ನನಗೆ ಇತಿಹಾಸ ಗೊತ್ತಿಲ್ಲ. ನಾನು ವಾಸ್ತವಾಂಶ ಏನಿದೆ ಅಂತ ತಿಳಿದುಕೊಂಡು ಪ್ರತಿಕ್ರಿಯಿಸ್ತೇನೆ. ಆದ್ರೆ ನಾವು ಮತ್ತು ತಮಿಳರು ನೆರೆಹೊರೆಯವರು.. ನಾವು ಸೌಹಾರ್ದತೆಯಿಂದ ಬಾಳಬೇಕು.. ನಾವು ಅವರಿಗೆ ಕಾವೇರಿ ನೀರು ಕೊಡ್ತೇವೆ. ತಮಿಳುನಾಡಿನಿಂದ ತುಂಬಾ ಜನ ಇಲ್ಲಿ ಬಂದು ಕೆಲಸ ಮಾಡ್ತಿದ್ದಾರೆ. ನಾವೆಲ್ಲರೂ ಶಾಂತಿ ಕಾಪಾಡಿಕೊಳ್ಳೋದು ಮುಖ್ಯ.. ಯಾವುದು ಶಾಶ್ವತ ಅಲ್ಲ ಎಂದಿದ್ದಾರೆ.