ಕಲಬುರಗಿ : ಮುಖ್ಯಮಂತ್ರಿ ಯಾರೆಂದು ಇಂದು ಸಂಜೆ ಒಳಗೆ ಫೈನಲ್ ಆಗುತ್ತದೆ. ನಂತರ ಕಾಂಗ್ರೆಸ್ ಸರ್ಕಾರ (Congress Govt) ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತದೆ.. CM ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದ್ರ ನಡುವೆ ಸಚಿವಸ್ಥಾನಕ್ಕಾಗಿ ಹಲವು ನಾಯಕರು ಪಟ್ಟು ಹಿಡಿದಿದ್ದಾರೆ. ಹೌದು, ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಎಷ್ಟು ಜನ ಸಚಿವ ಸ್ಥಾನ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.
41 ಕ್ಷೇತ್ರಗಳ ಪೈಕಿ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು
ಕಲ್ಯಾಣ ಕರ್ನಾಟಕ ಭಾಗದ ಒಟ್ಟು 41 ಕ್ಷೇತ್ರಗಳ ಪೈಕಿ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಈ ಭಾಗದ ಶಾಸಕರ ಕೊಡುಗೆ ಅಪಾರವಾಗಿದೆ. ಅದನ್ನ ಕಾಂಗ್ರೆಸ್ ಸರ್ಕಾರ ಮರೆಯಬಾರು. ಈ ಭಾಗದಲ್ಲಿ ಶಾಸಕರು, ಸಚಿವರಾಗಿ ಆಡಳಿತ ನಡೆಸಿದ ಅನುಭಾವಿಗಳಿದ್ದು, ಅವರೆಲ್ಲರೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿದ್ದಾರೆ. ಕಲಬುರಗಿ ಜಿಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂ ಜಿಲ್ಲೆ. ಈಗಾಗಿ ಈ ಜಿಲ್ಲೆಗೆ ಮಹತ್ವದ ಆದ್ಯತೆ ನೀಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಶಾಸಕರಿಗೆ ಸಚಿವರಾಗುವ ಆಸೆ ಯಲ್ಲಿದ್ದಾರೆ.
ಬೀದರ್ : ಬೀದರ್ ಜಿಲ್ಲೆಯಲ್ಲಿ ಭಾಲ್ಕಿ ಕ್ಷೇತ್ರದಿಂದ ಈಶ್ವರ ಖಂಡ್ರೆ ಮತ್ತು ಬೀದರ್ ಕ್ಷೇತ್ರದಿಂದ ರಹೀಂ ಖಾನ್ ಶಾಸಕರಾಗಿ ಆಯ್ಕೆಯಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೂ ಸಹ ಸಚಿವರಾಗುವ ಆಕಾಂಕ್ಷಿಯಾಗಿದ್ದಾರೆ. ಬೀದರ್ ಕ್ಷೇತ್ರದ ಶಾಸಕ ರಹೀಂ ಖಾನ್ ಸಹ ಸಚಿವರಾಗುವ ಆಕಾಂಕ್ಷಿಯಾಗಿದ್ದಾರೆ.
ರಾಯಚೂರು: ಐದು ಸಲ ಶಾಸಕರಾಗಿರುವ ರಾಯಚೂರು ಜಿಲ್ಲೆಯ ಸಿಂಧನೂರ ಕ್ಷೇತ್ರದ ಹಂಪನಗೌಡ ಬಾದರ್ಲಿ, ಮಾನ್ವಿಯ ಹಂಪಯ್ಯ ನಾಯಕ ಅವರ ಹೆಸರು ಮುಂಚೂಣಿಯಾಗಿ ಕೇಳಿ ಬರುತ್ತಿದೆ. ಬಸವರಾಜ ದದ್ದಲ್, ಬಸವರಾಜ ತುರವಿಹಾಳ ಇನ್ನಿಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ.
ಕಲಬುರಗಿ : ಈ ಜಿಲ್ಲೆಯಲ್ಲಿ 9 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಸೇಡಂನಲ್ಲಿ ಡಾ.ಶರಣಪ್ರಕಾಶ ಪಾಟೀಲ್, ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ, ಜೇವರ್ಗಿ – ಡಾ.ಅಜಯಸಿಂಗ್, ಅಫಜಲಪುರ – ಎಂ.ವೈ.ಪಾಟೀಲ್, ಆಳಂದ – ಬಿ.ಆರ್.ಪಾಟೀಲ್, ಕಲಬುರಗಿ ಉತ್ತರ – ಕನೀಜಾ ಫಾತೀಮಾ ಪ್ರಬಲ ಸಚಿವರಾಗಲು ಲಾಭಿ ನಡೆಸುತ್ತಿದ್ದಾರೆ.
ಈ ಬಾರಿ ಜಿಲ್ಲೆಯಿಂದ ಕಾಂಗ್ರೆಸ್ನ 7 ಶಾಸಕರಲ್ಲಿ ಅಲ್ಲಮಪ್ರಭು ಪಾಟೀಲ್ ಮಾತ್ರ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದು, ಉಳಿದಂತೆ ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್ ತಲಾ ನಾಲ್ಕು ಬಾರಿ ಗೆದ್ದು ಹಿರಿಯ ಶಾಸಕರೆನಿಸಿಕೊಂಡಿದ್ದಾರೆ. ಇದೇ ರೀತಿ ಡಾ. ಅಜಯಸಿಂಗ್ ಮತ್ತು ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೆ, ಕನೀಜಾ ಫಾತಿಮಾ ಎರಡನೇ ಬಾರಿಗೆ ಶಾಸಕರಿಯಾಗಿದ್ದಾರೆ.
ಬಳ್ಳಾರಿ: ಬಳ್ಳಾರಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ಬಿಜೆಪಿಯನ್ನು ಧೂಳಿಪಟ ಮಾಡಿದ ಕಾಂಗ್ರೆಸ್ ಶಾಸಕರಿಗೆ ಈ ಬಾರಿ ಹೆಚ್ಚಿನ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ನಾಲ್ಕು ಬಾರಿ ಗೆದ್ದಿರುವ ಬಿ.ನಾಗೇಂದ್ರ ಹಾಗೂ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿರುವ ಇ.ತುಕಾರಾಮ ಅವರ ಹೆಸರು ಪ್ರಮುಖವಾಗಿ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ.
ಕೊಪ್ಪಳ: ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ ಸಚಿವಾರುಗುವುದರಲ್ಲಿ ಮೊದಲ ಹೆಸರಾದರೆ, ಇವರ ಜತೆಗೆ ಶಿವರಾಜ ತಂಗಡಗಿ ಹೆಸರು ಮುಂಚೂಣಿಯಲ್ಲಿದೆ. ಇಬ್ಬರಿಗೂ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.
ವಿಜಯನಗರ: ನೂತನ ಜಿಲ್ಲೆಯಾಗಿರುವ ವಿಜಯನಗರ ಕ್ಷೇತ್ರದಲ್ಲಿ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಹಿಂದಿನ ಶಾಸಕ ಆನಂದ ಸಿಂಗ್ ಅವರನ್ನು ಸೋಲಿಸಿರುವ ಎಚ್.ಆರ್.ಗವಿಯಪ್ಪ ಅವರು ಸಹ ಸಚಿವ ಆಕಾಂಕ್ಷಿಯಾಗಿದ್ದಾರೆ.
ಯಾದಗಿರಿ: ಈ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಶಹಾಪುರದಲ್ಲಿ ಕಾಂಗ್ರೆಸ್ ನಿಂದ ಶರಣಬಸಪ್ಪಗೌಡ ದರ್ಶನಾಪುರ 5 ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಈ ಬಾರಿ ಇವರಿಗೂ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ.
ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆಗೆ ಮೂರು, ಒಂದು ಸ್ವೀಕರ್ ಸ್ಥಾನ ಸಿಗಬಹುದು, ಯಾದಗಿರಿ ಜಿಲ್ಲೆಗೆ ಒಂದು, ಬೀದರ್ ಜಿಲ್ಲೆಗೆ ಒಂದು, ರಾಯಚೂರು ಜಿಲ್ಲೆಗೆ ಒಂದು ಸಚಿವ ಸ್ಥಾನ, ಬಳ್ಳಾರಿ ಜಿಲ್ಲೆಗೆ ಎರಡು ಸಚಿವ ಸ್ಥಾನ, ಸೇರಿ ಒಟ್ಟು ಏಳರಿಂದ ಎಂಟು ಸಚಿವ ಸ್ಥಾನಗಳು ಸಿಗಬಹುದು ಎಂಬ ಚರ್ಚೆಗಳು ನಡೆಯುತ್ತಿದೆ. ಮುಂದೆ ಏನಾಗುತ್ತೆ ಎಂದು ಕಾದು ನೋಡಬೇಕಿದೆ.