
ಬೇಡ್ತಿ ನಾಲಾ ಕಾಮಗಾರಿಯ ಪರಿಶೀಲನೆ. ಆಗಸ್ಟ್‌ನಲ್ಲಿ ಲೋಕಾರ್ಪಣೆ ಸಾಧ್ಯತೆ

ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಕಲಘಟಗಿಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಲ್ಲದೆ ಬೇಡ್ತಿ ನಾಲಾ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ನಗರೋತ್ಥಾನ ಕಾಮಗಾರಿ ಅಪೂರ್ಣಗೊಂಡಿದ್ದು. ಅದನ್ನು ಕೂಡಲೇ ಮುಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಹೇಳಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳು ಮಂಜೂರಾಗಿದ್ದು, ಅಪೂರ್ಣಗೊಂಡಿವೆ. ಅವುಗಳನ್ನು ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಿದರು. ಇದೇ ವೇಳೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಮನೆ ಇಲ್ಲದವರ ಪಟ್ಟಿ ಮಾಡಿ ಅವರಿಗೆ ಸಿದ್ಧ ಮನೆಗಳನ್ನು ನೀಡಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಅದಕ್ಕೆ ಸೂಕ್ತ ಜಾಗದ ಕೊರತೆ ಇದೆ. ಎಪಿಎಂಸಿಯಲ್ಲಿ ಜಾಗವಿದ್ದು, ಮಾರುಕಟ್ಟೆಗೆ ವರದಿ ನೀಡಿದರೆ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಓಣಿಯೊಂದರಲ್ಲಿ ಕಸಾಯಿಖಾನೆಯಿಂದ ತೊಂದರೆಯಾಗುತ್ತಿದ್ದು, ಜನರು ಈ ಬಗ್ಗೆ ದೂರಿದ್ದಾರೆ. ಆದ್ದರಿಂದ ಕಸಾಯಿಖಾನೆಯನ್ನು ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಿದರು.

ಹೀಗೆಯೇ ಪಟ್ಟಣಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ವಿ ಜಿ ಅಂಗಡಿ, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೇಡ್ತಿ ನಾಲಾ ಪ್ರದೇಶಕ್ಕೆ ಸಚಿವರ ಭೇಟಿ
ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗುತ್ತಿರುವ ಕೆರೆ ತುಂಬಿಸುವ ನೀರಾವರಿ ಯೋಜನೆ (ಬೇಡ್ತಿ ನಾಲಾ) ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಸಂತೋಷ್ ಲಾಡ್ ಅವರು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಈಗಾಗಲೇ ಕಾಮಗಾರಿ ಮುಕ್ತಾಯವಾಗಿದ್ದು, ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಈ ವೇಳೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.