
ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ 74 ವರ್ಷದ ವೃದ್ಧೆ ಮಲಿಕಾಬಿ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಕೆಲಸ ಮಾಡಿ ಕೂಡಿಟ್ಟ ₹ 1 ಲಕ್ಷ ಕೂಲಿ ಹಣವನ್ನು ತಮ್ಮ ಭವಿಷ್ಯಕ್ಕಾಗಿ ಬ್ಯಾಂಕಿನಲ್ಲಿ 399 ದಿನಗಳ ಅವಧಿಗೆ ಠೇವಣಿ ಇಟ್ಟಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯು ಕುಟುಂಬದಲ್ಲಿ ಸದಸ್ಯರಿಲ್ಲದೇ ಒಬ್ಬಂಟಿಯಾಗಿರುವ ಮಲಿಕಾಬಿಯಂತಹ ವೃದ್ಧೆಯರ ಜೀವನ ಸಂಧ್ಯಾಕಾಲದಲ್ಲಿಯೂ ನೆಮ್ಮದಿಯಿಂದ ಇರಿಸಲು ಕಾರಣವಾಗಿದೆ.

ಪತಿ ಹಾಗೂ ಕುಟುಂಬದ ಸದಸ್ಯರು ಮೃತಪಟ್ಟಿದ್ದು, ಮಲಿಕಾಬಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ. 2013-14ನೇ ಸಾಲಿನಿಂದಲೇ ನರೇಗಾ ಜಾಬ್ ಕಾರ್ಡ್ ಮಾಡಿಸಿಕೊಂಡು ಕೂಲಿ ಕೆಲಸ ಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. 2014ರಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲಿಂದ ಬಿದ್ದು ಕಾಲಿನ ಮೂಳೆ ಮುರಿದಿತ್ತು. ಆ ಸಂದರ್ಭದಲ್ಲಿ ನರೇಗಾ ಕ್ಷೇತ್ರ ಸಹಾಯಕರಾಗಿರುವ ಸದಾಶಿವ ಹೈದ್ರಾ ಅವರೇ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯ ಖರ್ಚನ್ನೂ ಭರಿಸಿದ್ದರು. ಇದು ಮಲಿಕಾಬಿ ಅವರ ಮೇಲೆ ಪರಿಣಾಮ ಬೀರಿತು. ಆ ಬಳಿಕ ಮುಂದೆ ಬರುವ ಆರೋಗ್ಯ ಮತ್ತಿತರ ಸಮಸ್ಯೆಗಳ ಖರ್ಚುಗಳನ್ನು ನಿಭಾಯಿಸಲು ಕೂಲಿ ಹಣವನ್ನು ಕೂಡಿಡಬೇಕು ಎಂದು ತೀರ್ಮಾನಿಸಿದರು. ಅದರಂತೆ ಗ್ರಾಮಸ್ಥರ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇತ್ತೀಚೆಗೆ ₹ 1 ಲಕ್ಷ ಠೇವಣಿ ಇಟ್ಟಿದ್ದಾರೆ.