ನಿವೃತ್ತ ಐಎಎಸ್ ಅಧಿಕಾರಿ, ಬಾನಲ್ಲೆ ಮಧು ಚಂದ್ರಕೆ ಖ್ಯಾತಿಯ ನಟ ಕೆ.ಶಿವರಾಮ್ ಇಹಲೋಕ ತ್ಯಜಿಸಿದ್ದಾರೆ. ಕಳೆದ 12 ದಿನದ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ರು. ಅಂದಿನಿಂದ HCG ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಶಿವರಾಮ್ ಉಸಿರು ಚೆಲ್ಲಿದ್ದಾರೆ.
1993 ರಲ್ಲಿ ಬಾ ನಲ್ಲೇ ಮಧುಚಂದ್ರಕ್ಕೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಶಿವರಾಮ್ ಭಾರೀ ಪ್ರಖ್ಯಾತಿ ಗಳಿಸಿದ್ರು. ಬಾ ನಲ್ಲೆ ಮಧು ಚಂದ್ರಕೆ, ವಸಂತ ಕಾವ್ಯ, ಸಾಂಗ್ಲಿಯಾನ-3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ, ಟೈಗರ್ ಚಿತ್ರಗಳಲ್ಲಿ ನಟಸಿದ್ರು. ನಟನೆ ಜೊತೆಗೆ, ನಿರ್ಮಾಣ ಹಾಗೂ ವಿತರಣೆ ಮೂಲಕ ಚಿತ್ರರಂಗದಲ್ಲಿ ಬ್ಯುಸಿಯಿದ್ದರು ಶಿವರಾಮ್.
ಸಿನಿಮಾ ರಂಗ ಅಷ್ಟೇ ಅಲ್ಲದೆ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾದ ಮೊದಲಿಗ ಎನ್ನುವುದು ಕೆ.ಶಿವರಾಮ್ ಅವರ ಮತ್ತೊಂದು ಗರಿಮೆ. ಕೊಪ್ಪಳದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿವರಾಮ್, ಆ ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ಮೊದಲಿಗೆ ಕಾಂಗ್ರೆಸ್‌ನಲ್ಲಿದ್ದ ಶಿವರಾಮ್, ಆ ಬಳಿಕ ಕೆಲ ಕಾಲ ಬಿಜೆಪಿಯಲ್ಲೂ ಗುರ್ತಿಸಿಕೊಂಡಿದ್ದರು.
ರಾಮನಗರ ಜಿಲ್ಲೆ ಬಿಡದಿಯ ಉರಗಳ್ಳಿಯಲ್ಲಿ 1953 ರಲ್ಲಿ ಜನಿಸಿದ್ದ ಶಿವರಾಮ್, ಛಲವಾದಿ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದ ಕೆ. ಶಿವರಾಮ್, ಕರ್ನಾಟಕದಿಂದ ಯುಪಿಎಸ್‌ಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಾದರಿ ಆಗಿದ್ದಾರೆ ಎನ್ನಬಹುದು. ಬಸವೇಶ್ವರ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ.
#Karnataka #bengaluru #kshivaram #actor