ಬೆಂಗಳೂರು:- ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕೇರಳದ ಶಿವಗಿರಿ ಮಠದ ಅಂಗ ಸಂಘಟನೆಯಾಗಿರುವ “ಗುರುಧರ್ಮ ಪ್ರಚಾರ ಸಭಾ”ಕರ್ನಾಟಕ ರಾಜ್ಯದ ಯುವಜನ ಘಟಕದ ಅಧ್ಯಕ್ಷರಾಗಿ ಶ್ರೀ ಗೋಪಿ ಕೃಷ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ.

ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಗಳು ಹೊರಡಿಸಿರುವ ಆದೇಶದ ಪ್ರತಿಯನ್ನು ಕೇರಳದ ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿದ್ದ ವೇದಿಕೆ ಮೇಲೆ ಆದೇಶ ಪ್ರತಿಯನ್ನು ನೂತನವಾಗಿ ನೇಮಕವಾದ ಕೆ. ಗೋಪಿ ಅವರಿಗೆ ನೀಡಿರುವುದು ವಿಶೇಷವಾಗಿದೆ.

ಶ್ರೀ ನಾರಾಯಣ ಗುರುಗಳ ಚಿಂತನೆ ಹಾಗೂ ಆದರ್ಶಗಳನ್ನ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಧರ್ಮಗುರು ಪ್ರಚಾರ ಸಭಾ ಸಮಾಜದಲ್ಲಿ ಕ್ರೀಯಾಶೀಲವಾಗಿ ಚಟುವಟಿಕೆ ನಡೆಸುತ್ತಿದೆ. ಶಿವಗಿರಿಯ ಶಾಖಾ ಮಠದ ಸ್ಥಾಪನೆಗಾಗಿ ಮಂಗಳೂರಿನಲ್ಲಿ ಐದು ಎಕರೆ ಭೂಮಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಘೋಷಿಸಿದ್ದಾರೆ. ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಗುರು-ಗಾಂಧಿ ಶತಮಾನೋತ್ಸವ ಕಾರ್ಯಕ್ರಮದ ಆಯೋಜನೆಯ ಸಂಚಾಲಕರಾಗಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಕೆ.ಗೋಪಿ ಅವರ ಸಂಘಟನಾ ಶೈಲಿಯನ್ನು ಗುರುತಿಸಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಬಿ.ಕೆ ಹರಿಪ್ರಸಾದ್ ಅವರ ಆಪ್ತರಾಗಿರುವ ಕೆ.ಗೋಪಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆ ಮೇಲೆಯೇ ನೇಮಕದ ಆದೇಶ ಪತ್ರವನ್ನು ನೀಡುವ ಮೂಲಕ ಹೊಸ ಸಂದೇಶ ರವಾನಿಸಿದ್ದಾರೆ.












