‘ಜುರಾಸಿಕ್ ಪಾರ್ಕ್’ ಮತ್ತು ‘ದಿ ಪಿಯಾನೋ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಖ್ಯಾತ ನಟ ಸ್ಯಾಮ್ ನೀಲ್ ಅವರು ನಿಧನರಾಗಿದ್ದಾರೆ. 78 ವರ್ಷ ವಯಸ್ಸಿನ ಸ್ಯಾಮ್ ನೀಲ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ಸುದ್ದಿ ಕುರಿತು ಅವರ ಕುಟುಂಬಸ್ಥರು ಸ್ಯಾಮ್ ನೀಲ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ತೀವ್ರ ದುಃಖದೊಂದಿಗೆ ನಾವು ಸ್ಯಾಮ್ ನೀಲ್ ಅವರ ಅಗಲಿಕೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಜುಲೈ 13ರಂದು ಸಿಡ್ನಿಯಲ್ಲಿ ಅವರು ಕೊನೆಯುಸಿರೆಳೆದರು. ತಮ್ಮ ಇಡೀ ಜೀವನದುದ್ದಕ್ಕೂ ಅವರು ಕಾಪಾಡಿಕೊಂಡು ಬಂದಿದ್ದ ಘನತೆಯೊಂದಿಗೆ, ಕುಟುಂಬದವರ ಸಮ್ಮುಖದಲ್ಲಿ ಅವರು ಶಾಂತಿಯುತವಾಗಿ ಕಣ್ಣು ಮುಚ್ಚಿದರು’ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಈ ಸಾವು ಅತ್ಯಂತ ಹಠಾತ್ ಹಾಗೂ ಅನಿರೀಕ್ಷಿತ. ಆದರೆ ಅವರು ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತರಾಗಿದ್ದರು ಎಂಬುದು ನಮಗೆ ಸಮಾಧಾನದ ಸಂಗತಿಯಾಗಿದೆ. ಅವರಿಗೆ ಅದ್ಭುತವಾದ ಆರೈಕೆ ನೀಡಿದ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ಸಿಬ್ಬಂದಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಈ ಅಪಾರ ನಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ’ ಎಂದು ಹೇಳಿಕೆಯಲ್ಲಿ ಕೋರಲಾಗಿದೆ.

ಸ್ಯಾಮ್ ನೀಲ್ ಅವರು ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ತೀವ್ರ ಸ್ವರೂಪದ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ ಅವರಿಗೆ ಕಿಮೋಥೆರಪಿ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಆದರೆ, ಇಮ್ಯೂನ್ ಸಿಸ್ಟಮ್ ಮಾರ್ಪಡಿಸುವ ವಿಶೇಷವಾದ ಜೆನೆಟಿಕ್ ಚಿಕಿತ್ಸೆ ಮೂಲಕ ತಾವು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಈ ವರ್ಷದ ಏಪ್ರಿಲ್‌ನಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ಯಾಮ್ ಬಹಿರಂಗಪಡಿಸಿದ್ದರು. ಆದರೆ ಈಗ ಅನಿರೀಕ್ಷಿತವಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.

‘ಸೆಲೆಬ್ರಿಟಿ ನೆಟ್ ವರ್ತ್’ ವರದಿಗಳ ಪ್ರಕಾರ, ಸ್ಯಾಮ್ ನೀಲ್ ಅವರು ಸುಮಾರು 18 ಮಿಲಿಯನ್ ಡಾಲರ್ (ಅಂದಾಜು 150 ಕೋಟಿ ರೂ.ಗೂ ಹೆಚ್ಚು) ಮೌಲ್ಯದ ಆಸ್ತಿ ಹೊಂದಿದ್ದರು. ‘ಜುರಾಸಿಕ್ ಪಾರ್ಕ್’ ಸಿನಿಮಾದಲ್ಲಿ ಡಾ. ಅಲಾನ್ ಗ್ರಾಂಟ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಅವರು, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ದಿ ಪಿಯಾನೋ’ ಹಾಗೂ ‘ಪೊಸೆಷನ್’ ಸೇರಿದಂತೆ ಹಲವು ಪ್ರಸಿದ್ಧ ಸಿನಿಮಾಗಳಲ್ಲಿ ನಟಿಸಿದ್ದರು.






