
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ(ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭ ಇದೇ ಜೂನ್ 30 (June 30) ರಂದು ನಡೆಯಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಾಳಾದ ಸಿದ್ದರಾಮಯ್ಯ (CM Siddaramaiah) ಅವರು ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಲು ನಿರ್ಮಾಪಕರ ಸಂಘದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ‘ಬಹಳ ಜನರ ಶ್ರಮದಿಂದ ನಿರ್ಮಾಪಕರ ಸಂಘದ ನೂತನ ಕಟ್ಟಡ ನಿರ್ಮಾಣವಾಗಿ, ಉದ್ಘಾಟನೆ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೂತನ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ, ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಫಿಲಂ ಫೆಡರೇಷನ್ ಆಫ್ ಇಂಡಿಯಾ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಹೊಂಬಾಳೆ ಫಿಲಂಸ್ (Hombale Films), ಆರ್.ಎಸ್. ಗೌಡ (R.S Gowda), ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ. ದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗೆ ಅಂತಲೇ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಸಮಿತಿಯ ಅಧ್ಯಕ್ಷರಾದ ಸಾರಾ ಗೋವಿಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಎಂ.ಜಿ. ರಾಮಮೂರ್ತಿ, ರಮೇಶ್ ಯಾದವ್, ಆರ್.ಎಸ್. ಗೌಡ ಮುಂತಾದವರು ಭಾಗವಹಿಸಿದ್ದರು.