ಧರ್ಮ, ಧಾರ್ಮಿಕತೆಯನ್ನು ಒಪ್ಪದ, ನಂಬದ ನಾಸ್ತಿಕರು ಕೂಡ ಸಂತರನ್ನು, ಸಾಧುಗಳನ್ನು, ಮುಲ್ಲಾಗಳನ್ನು, ಪಾದ್ರಿಗಳನ್ನು ಗೌರವಿಸುತ್ತಾರೆ. ಅಂಥದ್ದರಲ್ಲಿ ಕ್ರಿಶ್ಚಿಯನ್ ಸಂತರು ಮತ್ತು ಸನ್ಯಾಸಿನಿಯರನ್ನು ಕ್ರಿಶ್ಚಿಯಾನಿಟಿಯಲ್ಲಿ ನಂಬಿಕೆಯುಳ್ಳವರು, ಮುಲ್ಲಾಗಳನ್ನು ಮುಸ್ಲಿಮರು, ಹಿಂದೂ ಸಾಧು ಸಂತರನ್ನು ಹಿಂದುಗಳು ಗೌರವಿಸುವುದು ದೊಡ್ಡ ವಿಚಾರವಲ್ಲ. ಧರ್ಮವೆಂಬುವುದು ಒಬ್ಬ ವ್ಯಕ್ತಿಯನ್ನು ಅವನು ಅಥವಾ ಅವಳು ಅನುಸರಿಸುವ ನಂಬಿಕೆಯನ್ನು ಮೀರಿ ಒಬ್ಬ ಮನುಷ್ಯನನ್ನಾಗಿ ಮಾಡಬೇಕು. ಆದ್ದರಿಂದ ಧರ್ಮಗುರುಗಳು ಸ್ವತಃ ಕೊಲೆ ಮತ್ತು ದ್ವೇಷವನ್ನು ಬೋಧಿಸಿದರೆ, ಅದು ಭಾರತೀಯ ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವುದಿಲ್ಲ, ಅದನ್ನು ಈ ದೇಶದ ಬಹುತೇಕ ನಾಗರಿಕರು ಒಪ್ಪುವುದೂ ಇಲ್ಲ.
ಆದರೆ ಕ್ರಿಸ್‌ಮಸ್ ವೇಳೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದ ಸಾಧುಗಳು, ದಾರ್ಶನಿಕರು ಮತ್ತು ಸಂತರು ಮುಸ್ಲಿಮರ ವಿರುದ್ಧ ಮಾಡಿದ ದ್ವೇಷ ಭಾಷಣವು ಯಾವುದೇ ಧರ್ಮವು ಕೊಲೆ ಮತ್ತು ದಂಗೆಯನ್ನು ಬೋಧಿಸುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತವೆ.
ಮುಂದುವರಿದ ಪ್ರಧಾನಿಯವರ ಮೌನ
ಈ ಬಗ್ಗೆ ಇಡೀ ದೇಶ ಮಾತನಾಡುತ್ತುದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಾಡಿಕೆಯಂತೆ ಜಾಣ ಮೌನ ವಹಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಪ್ರತಿಭಟನೆ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ನಾನು ಧರ್ಮ ಸಂಸದ್‌ನಲ್ಲಿ ನೋಡಿದ ಮತ್ತು ಕೇಳಿದ ದಾರ್ಶನಿಕರ ಮತ್ತು ಸಂತರ ಅದೇ ವರ್ಗದಲ್ಲಿ ಇರಿಸುತ್ತೇನೆ. ಕೇಸರಿ ವಸ್ತ್ರಧಾರಿ ಸಾಧುಗಳ ಈ ಭಾಷಣಗಳ ವಿರುದ್ಧ ಮಾತನಾಡಿದ ಕೇಸರಿ ಪಕ್ಷದ ಏಕೈಕ ಕೆಚ್ಚೆದೆಯ ನಾಯಕನೆಂದರೆ ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತ್ರ.
ನಾಯ್ಡು ಅವರು ಮಾತನಾಡಿರುವುದಕ್ಕೂ ಕಾರಣವಿದೆ. ಅವರು ವಾಜಪೇಯಿ ಅಚ್ಚಿನ ಶಾಲೆಯ ಹಳೆಯ ರಾಜಕಾರಣಿ. ಅಲ್ಲದೆ ವೆಂಕಯ್ಯ ನಾಯ್ಡು ಅವರು ದಕ್ಷಿಣ ಭಾರತದವರು, ಪ್ರಾಮಾಣಿಕ ಧ್ವನಿಗಳು ಅಲ್ಲಿಂದ ಹೆಚ್ಚಾಗಿ ಕೇಳಿಬರುತ್ತವೆ. ಆದರೆ ಉಳಿದವರಿಂದ ಪ್ರದರ್ಶಿತವಾಗುತ್ತಿರುವ ಮೌನವು ಹೆಚ್ಚು ಅಪಾಯಕಾರಿ.
ಅದರಲ್ಲೂ ಈ ದೇಶದ ವಾತಾವರಣವು ಅಲ್ಪಸಂಖ್ಯಾತರಿಗೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಮೋದಿಯವರು 2014 ರಲ್ಲಿ ಸಂಸತ್ತಿಗೆ ಮೊದಲು ಪ್ರವೇಶಿಸಿದಾಗ ಸಂವಿಧಾನಕ್ಕೆ ನಮನ ಸಲ್ಲಿಸಿದ್ದು ಈಗ ಜನರನ್ನು ಆಕರ್ಷಿಸಲು ಮಾಡಿದ ನಾಟಕದಂತೆ ತೋರುತ್ತದೆ. ನಾವು ಅವರ ಮಾತಿನಲ್ಲಿರುವ ಅಪ್ರಮಾಣಿಕತೆಗೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ಅವರು ಸತ್ಯವನ್ನು ಮಾತನಾಡುವಾಗಲೂ ಅವರ ಮಾತಿನಲ್ಲಿ ದ್ವಂದ್ವಾರ್ಥವಿದೆಯೇ ಎಂದು ಹುಡುಕುತ್ತೇವೆ.
ಹೊಸ ಭಾರತದಲ್ಲಿ ಅಲ್ಪಸಂಖ್ಯಾತರನ್ನು ನಿರಂತರವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಇದು ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಓಟು ಗಿಟ್ಟಿಸುವ ತಂತ್ರದ ಭಾಗವಾಗಿರಲೂಬಹುದು. ಹೊಸ ಪ್ರಭುತ್ವದ ಕನಸು ಕಾಣುತ್ತಿರುವ ಭಾರತದ ಕಲ್ಪನೆಯು ನಮ್ಮ ಸಂವಿಧಾನದ ಸ್ಥಾಪಕ ಪಿತಾಮಹರು ಕಲ್ಪಿಸಿದ ಅಖಂಡ ರಾಷ್ಟ್ರದ ಪರಿಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಬಹುಸಂಖ್ಯಾತ ಧರ್ಮಕ್ಕಿಂತ ಭಿನ್ನವಾದ ಧರ್ಮವನ್ನು ಅನುಸರಿಸಿದವರಿಗೆ ಸಮಾನ ಹಕ್ಕುಗಳು ಮತ್ತು ಸಮಾನ ಪೌರತ್ವ ಸ್ಥಾನಮಾನವಿರುವ ಜಾತ್ಯತೀತ ದೇಶದ ಪರಿಕಲ್ಪನೆ ಈಗ ಹಿಂದುತ್ವದ ಮಾತುಗಳಲ್ಲಿ ಕರಗುತ್ತಿದೆ.
ಏಳು ದಶಕಗಳ ಹಿಂದೆ ಬಾಂಬೆಯ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ನಾನು ಹಿಂದು, ಮುಸ್ಲಿಂ ಮತ್ತು ಪಾರ್ಸಿ ಸಹಪಾಠಿಗಳೊಂದಿಗೆ ಬೆಂಚ್ ಹಂಚಿಕೊಂಡಿದ್ದೆ. ಯಾವುದೇ ಹಂತದಲ್ಲೂ ನಾನು ಅಥವಾ ಅವರು ತರಗತಿಯಲ್ಲಿ ಕ್ಯಾಥೋಲಿಕ್ ಶಿಕ್ಷಕರು ನಮ್ಮನ್ನು ನಡೆಸಿಕೊಳ್ಳುವ ರೀತಿಯಲ್ಲಿ ಯಾವುದೇ ವ್ಯತ್ಯಾಸವನ್ನು ಅನುಭವಿಸಲಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳಿಂದಾಗಿ ನಾನು ಅಥವಾ ಅವರು ಯಾವುದೇ ಹಂತದಲ್ಲೂ ನಾವು ಭಿನ್ನರು ಎಂದು ಭಾವಿಸಿರಲಿಲ್ಲ. ಆಗೆಲ್ಲಾ ಧರ್ಮವು ನಮ್ಮ ಆಲೋಚನೆಗಳು ಮತ್ತು ನಮ್ಮ ದೈನಂದಿನ ಚಟುವಟಿಕೆಗಳನ್ನು ಎಂದಿಗೂ ಪ್ರವೇಶಿಸಿರಲಿಲ್ಲ.
ಹಾಗೆಯೇ ಕಾಲೇಜಿನಲ್ಲಿ ಮತ್ತು ಕೆಲಸದ ಸ್ಥಳಗಳಲ್ಲೂ ನಾನು ತಾರತಮ್ಯ ಅನುಭವಿಸಿಲ್ಲ. ನಾನು ನ್ಯಾಷನಲ್ ಸ್ಟ್ಯಾಂಡರ್ಡ್‌ನಲ್ಲಿ ಎರಡು ವರ್ಷಗಳ ಕಾಲ ಉಪಸಂಪಾದಕನಾಗಿ ಕೆಲಸ ಮಾಡಿದ್ದೆ. ಈಗ ಆ ಪತ್ರಿಕೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ. ಆಗ ಸುದ್ದಿ ಸಂಪಾದಕರಾಗಿದ್ದ ಆಮೇಲೆ ಪ್ರಧಾನಿಯವರ ಪತ್ರಿಕಾ ಸಲಹೆಗಾರರಾದ ಶಾರದಾ ಪ್ರಸಾದ್ ಅವರ ನನ್ನಂತಹ ಉದಯೋನ್ಮುಖ ಪತ್ರಕರ್ತರಿಗೆ ಧರ್ಮ ಮೀರಿ ಬೆಂಬಲ ನೀಡುತ್ತಿದ್ದರು.
ನನ್ನ 36 ವರ್ಷಗಳ ಭಾರತೀಯ ಪೊಲೀಸ್ ಸೇವೆಯಲ್ಲೂ ನಾನು ಅಲ್ಪಸಂಖ್ಯಾತ ಸಮುದಾಯದ ಸದಸ್ಯ ಎಂಬ ಕಾರಣಕ್ಕೆ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ನಾನು ಒಂದು ಕ್ಷಣವೂ ಭಾವಿಸಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚಾಗಿ ಹಿಂದೂಗಳಾಗಿದ್ದ ನನ್ನ ಮೇಲಧಿಕಾರಿಗಳು, ಹಿರಿತನದ ಕ್ರಮದಲ್ಲಿ ನನ್ನ ಸರದಿಗಿಂತ ಬಹಳ ಮುಂಚೆಯೇ ಕಷ್ಟಕರವಾದ ಪ್ರೊಜೆಕ್ಟ್‌ಗಳಿಗೆ ನನ್ನನ್ನು ಆಯ್ಕೆ ಮಾಡುತ್ತಿದ್ದರು.
ಆದರೆ ಬಹುಮತದ ಪ್ರಾಬಲ್ಯದ ಪ್ರಸ್ತುತ ವಾತಾವರಣದಲ್ಲಿ ಎಲ್ಲಾ ಸೆಕ್ಯುಲರ್ ಸಮೀಕರಣಗಳು ಬದಲಾಗುತ್ತಿದೆ. ಈ ದುಷ್ಟತನವನ್ನು ಶೈಶವಾವಸ್ಥೆಯಲ್ಲಿ ಹತ್ತಿಕ್ಕದಿದ್ದರೆ ಕ್ಯಾನ್ಸರ್‌ನಂತೆ ಹರಡಿ ನಮ್ಮ ಕನಸಿನ ಭಾರತವನ್ನೇ ನಾಶಪಡಿಸುತ್ತದೆ. ಸಶಸ್ತ್ರ ಪಡೆಗಳಿಗೂ ದ್ವೇಷ ಹಬ್ಬಲು ಅವಕಾಶ ನೀಡಿದರೆ, ಒಂದು ದೇಶವಾಗಿ ನಾವು ತುಂಬಾ ಬೇಗ ನಾಶವಾಗುತ್ತೇವೆ.
ಈಗ ತುರ್ತಾಗಿ ಹರಿದ್ವಾರದಲ್ಲಿ ದ್ವೇಷ ಭಾಷಣ ಮಾಡಿದ ಸಂತರನ್ನು ಯಾವುದೇ ಮುಲಾಜಿಲ್ಲದೆ, ರಾಜಕೀಯ ಲೆಕ್ಕಾಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಂಬಿಯ ಹಿಂದಕ್ಕೆ ತಳ್ಳಬೇಕಾಗಿದೆ. ಬಹು-ಧಾರ್ಮಿಕ, ಬಹು-ಭಾಷಿಕ, ಬಹು-ಸಾಂಸ್ಕೃತಿಕ ಆಯಾಮಗಳಿರುವ ಭಾರತವು 15% ಮುಸ್ಲಿಮರು ಮತ್ತು 2% ಕ್ರಿಶ್ಚಿಯನ್ನರನ್ನು ಮುಖ್ಯವಾಹಿನಿಯಿಂದ ದೂರವಿಡಲು ಸಾಧ್ಯವಿಲ್ಲ. ಇದು ಮೋದಿಗೂ ಗೊತ್ತು. ಆದರೆ ಈ ವಿಷಯದ ಬಗ್ಗೆ ಅವರ ಜಾಣ ಮೌನವು ದೇಶದ ಏಕತೆಯನ್ನು ಅಪಾಯಕ್ಕೀಡುಮಾಡುತ್ತಿದೆ.
ಸದ್ಯಕ್ಕೆ ಈ ದೇಶದ ಉಪ ರಾಷ್ಟ್ರಪತಿಗಳ ಬೆಂಬಲಕ್ಕೆ ಭಾರತೀಯ ನೌಕಾಪಡೆಯ ನಾಲ್ವರು ಮಾಜಿ ಮುಖ್ಯಸ್ಥರು, ವಾಯುಪಡೆಯ ಮಾಜಿ ಮುಖ್ಯಸ್ಥರು, ಹಲವಾರು ನಿವೃತ್ತ ಅಧಿಕಾರಿಗಳು, ಬರಹಗಾರರು, ಬುದ್ಧಿಜೀವಿಗಳು ಮತ್ತು ಪ್ರಮುಖ ಮ್ಯಾನೇಜ್‌ಮೆಂಟ್ ಶಾಲೆಗಳ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರು ನಿಂತಿರುವುದು ಸಂತೋಷದ ವಿಚಾರ. ಗೃಹ ಸಚಿವಾಲಯವು ಈಗ ಒತ್ತಡಕ್ಕೆ ಮಣಿದು ವಿದೇಶಿ ಕೊಡುಗೆಗಳನ್ನು ಪಡೆಯಲು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ನವೀಕರಿಸಿದೆ. ಮುಂದಕ್ಕೆ ಈ ಸಚಿವಾಲಯವು ನಮ್ಮ ಧ್ವನಿಯನ್ನು ಕೇಳಲಿ ಮತ್ತು ದ್ವೇಷ ಮತ್ತು ವಿಭಜನೆಯ ವಿರುದ್ಧ ನಿಲ್ಲುವಂತಾಗಲಿ ಎಂದು ನಾನು ಆಶಿಸುತ್ತೇನೆ.
ಮೂಲ: ಜೂಲಿಯೊ ರಿಬೇರೊ, ಸ್ಕ್ರೋಲ್.ಇನ್
(ಜೂಲಿಯೊ ರಿಬೈರೊ ಅವರು ಪೊಲೀಸ್ ಅಧಿಕಾರಿಯಾಗಿ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ರೊಮೇನಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು.)