ನ್ಯಾಯದ ಬಾಹು ಬಲಿಷ್ಠವಾಗಿದೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ

ಈ ಮೊದಲು ಆಮ್ಲಜನಕದ ತೀವ್ರ ಹಾಹಾಕಾರದ ವೇಳೆ ಕೂಡ ಇದೇ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು, ದೇಶದ ಆಮ್ಲಜನಕ ಬಿಕ್ಕಟ್ಟು ನಿರ್ವಹಣೆಗಾಗಿ ದ್ವಿಸದಸ್ಯ ಟಾಸ್ಕ್ ಫೋರ್ಸ್ ರಚಿಸಿತ್ತು. ಇದೀಗ ಮುಂದುವರಿದ ವಿಚಾರಣೆಯ ಭಾಗವಾಗಿ ಲಸಿಕಾ ಬೆಲೆ ಮತ್ತು ಸರಬರಾಜು ವಿಷಯದಲ್ಲಿ ಕೇಂದ್ರ ಸರ್ಕಾರದ ಹೊಣೆಗೇಡಿ ವರಸೆಯನ್ನು ತರಾಟೆಗೆ ತೆಗೆದುಕೊಂಡಿದೆ.

“ಕೇಂದ್ರ ಸರ್ಕಾರ ಎಂಬ ಕಾರಣಕ್ಕೆ ನೀವು ಹೇಳಿದ್ದೆಲ್ಲಾ ಸರಿ ಎಂದೇನಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ಮತ್ತು ನಿಮ್ಮ ವಾದಗಳನ್ನು ತಲೆಕೆಳಗು ಮಾಡಲು ನ್ಯಾಯಾಂಗದ ಬಾಹುಗಳು ಬಲಿಷ್ಠವಾಗಿವೆ” ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.

ಲಸಿಕೆ ದರ ಮತ್ತು ಖರೀದಿ ವಿಷಯದಲ್ಲಿ ತನ್ನ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ದಾಟಿಸಿ ಕೈತೊಳೆದುಕೊಂಡಿರುವ ಕೇಂದ್ರ ಸರ್ಕಾರದ ಧೋರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಕಟು ಪ್ರತಿಕ್ರಿಯೆ ನೀಡಿದೆ.

ಕೋವಿಡ್ ಲಸಿಕೆಗೆ ಕೇಂದ್ರ ಸರ್ಕಾರದ ಖರೀದಿಗೆ ಒಂದು ದರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಒಂದು ದರ ವಿಧಿಸಿರುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ನಡೆಸುತ್ತಿರುವ ಸು-ಮೋಟೋ ಪ್ರಕರಣದ ವಿಚಾರಣೆ ವೇಳೆ, ನ್ಯಾ. ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರರಾವ್ ಹಾಗೂ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಕಿಡಿಕಾರಿದೆ. ನ್ಯಾ. ಚಂದ್ರಚೂಡ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದ ಈ ಪ್ರಕರಣದ ವಿಚಾರಣೆ ಸೋಮವಾರದಿಂದ ಮತ್ತೆ ಆರಂಭಗೊಂಡಿದೆ.

ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ಯಾಕೆ ಸಾಧ್ಯವಿಲ್ಲ? ಯಾವ ಕಾರಣದ ಮೇಲೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೇಂದ್ರ ಸರ್ಕಾರ ಉಚಿತ ಲಸಿಕೆ ಸರಬರಾಜು ಮಾಡುವುದು, ಉಳಿದವರಿಗೆ ಆಯಾ ರಾಜ್ಯ ಸರ್ಕಾರಗಳೇ ಲಸಿಕೆ ಖರೀದಿಸಿ ನೀಡಬೇಕು ಎಂಬ ನೀತಿ ಅನುಸರಿಸಲಾಗುತ್ತಿದೆ? ಅದಕ್ಕೆ ಯಾವ ವೈಜ್ಞಾನಿಕ ತಳಹದಿ ಇದೆ? ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್, ನೀವು ಒದಗಿಸುವ ಪ್ರಮಾಣಪತ್ರಗಳನ್ನು ನಂಬಿ ಎಲ್ಲವನ್ನೂ ತೀರ್ಮಾನಿಸಲಾಗದು. ಲಸಿಕೆ ವಿಷಯದಲ್ಲಿ ನಿಮ್ಮ ನೀತಿ ಏನೆಂಬ ಬಗ್ಗೆ ಅಧಿಕೃತ ದಾಖಲೆ ಸಲ್ಲಿಸಿ ಎಂದು ಕೇಂದ್ರಕ್ಕೆ ತಾಕೀತು ಮಾಡಿತು.

ಒಂದೇ ಬಗೆಯ ಲಸಿಕೆಗಳಿಗೆ ರಾಜ್ಯಗಳಿಗೆ ಒಂದು ದರ, ಕೇಂದ್ರಕ್ಕೆ ಒಂದು ದರ ನಿಗದಿ ಮಾಡಲಾಗದು. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆಯಡಿ ಏಕರೀತಿಯ ಲಸಿಕೆ ದರ ನಿಗದಿ ಮಾಡುವ ಎಲ್ಲಾ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಹಾಗಿರುವಾಗ ಲಸಿಕೆ ತಯಾರಿಕಾ ಕಂಪನಿಗಳಿಗೆ ದರ ನಿಗದಿಯ ಸಂಪೂರ್ಣ ಅಧಿಕಾರ ನೀಡುವುದು ಯಾಕೆ ಎಂದು ಪ್ರಶ್ನಿಸಿದ ಕೋರ್ಟ್, ಲಸಿಕೆಗಾಗಿ ಗ್ರಾಮೀಣ ಜನರು ಕೂಡ ಆನ್ ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂಬ ನೀತಿಯ ವಿರುದ್ಧವೂ ಕಿಡಿಕಾರಿತು. ದೇಶದಲ್ಲಿ ಡಿಜಿಟಲ್ ಸಾಕ್ಷರತೆ ಎಂಬುದು ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಿರುವ ವಿಷಯ. ಗ್ರಾಮೀಣ ಭಾರತದ ಬಹಳಷ್ಟು ಮಂದಿ ಲಸಿಕೆಯಿಂದ ದೂರ ಉಳಿಯಲಿದ್ದಾರೆ. ಇಂತಹ ಕಟು ವಾಸ್ತವಗಳನ್ನು ಕೇಂದ್ರ ಸರ್ಕಾರ ಯಾವ ಕಾರಣಕ್ಕಾಗಿ ಉಪೇಕ್ಷಿಸುತ್ತಿದೆ ಎಂದೂ ಪ್ರಶ್ನಿಸಿದೆ.

ಈ ನಡುವೆ, ಕೇಂದ್ರ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲರು, 2021ರ ಅಂತ್ಯದ ಒಳಗೆ ದೇಶದ ಎಲ್ಲಾ ಅರ್ಹ ನಾಗರಿಕರಿಗೆ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ತಿಂಗಳಿಗೆ ಕೇವಲ 15 ಕೋಟಿ ಮಂದಿಗೆ ಮಾತ್ರ ಲಸಿಕೆ ನೀಡುವುದು ಸಾಧ್ಯ  ಎಂದಾದರೆ, ದೇಶದ ಒಟ್ಟೂ ಜನಸಂಖ್ಯೆಗೆ ವರ್ಷಾಂತ್ಯದ ಒಳಗೆ ಲಸಿಕೆ ನೀಡುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿತು.

ಇದೇ ವೇಳೆ, ಕೋವಿಡ್ ಎರಡನೇ ಅಲೆಯಲ್ಲಿ 45 ವರ್ಷದೊಳಗಿನವರೇ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ. ಸರ್ಕಾರದ ಅಧಿಕೃತ ಅಂಕಿಅಂಶಗಳೇ ಅದನ್ನು ಹೇಳುತ್ತಿವೆ. ಪರಿಸ್ಥಿತಿ ಹಾಗಿರುವಾಗ 45 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನಾವು ನೀಡುತ್ತೇವೆ. ಅದರೊಳಗಿನ ವಯೋಮಾನದವರಿಗೆ ರಾಜ್ಯಗಳು ಲಸಿಕಾ ಕಂಪನಿಗಳು ನಿಗದಿಪಡಿಸಿದ ಬೆಲೆ ತೆತ್ತು ಖರೀದಿಸಿ ಲಸಿಕೆ ನೀಡಬೇಕು ಎಂಬುದಕ್ಕೆ ಅರ್ಥವೇನು ಎಂದೂ ಪೀಠ ಪ್ರಶ್ನಿಸಿತು.

ಇದೇ ವೇಳೆ ಲಸಿಕೆಗಳಿಗೆ ದೇಶಾದ್ಯಂತ ಏಕ ರೀತಿಯ ದರ ನಿಗದಿಯಾಗಬೇಕು ಮತ್ತು ಕೇಂದ್ರ ಸರ್ಕಾರವೇ ಲಸಿಕೆ ಸರಬರಾಜು ಹೊಣೆ ವಹಿಸಿಕೊಳ್ಳಬೇಕು ಎಂಬುದು ತನ್ನ ಅಭಿಪ್ರಾಯ. ಸರ್ಕಾರದ ನೀತಿ ನಿರೂಪಣೆ ವಲಯಕ್ಕೆ ತಾನು ಮೂಗು ತೂರಿಸುವುದಿಲ್ಲ. ಆದರೆ, ಕರೋನಾದಂತಹ ಪರಿಸ್ಥಿತಿಯ ವಿಷಯದಲ್ಲಿ ಜನರ ಜೀವ ಕಾಯುವುದು ಮತ್ತು ಎಲ್ಲರಿಗೂ ಸಮಾನ ಅವಕಾಶ ಮತ್ತು ಬದುಕುವ ಹಕ್ಕು ಇದೆ ಎಂಬುದನ್ನು ಖಾತರಿಪಡಿಸುವುದು ತಮ್ಮ ಕರ್ತವ್ಯ ಎಂಬುದನ್ನು ಪೀಠ ಕೇಂದ್ರ ಸರ್ಕಾರಕ್ಕೆ ಮೌಖಿಕವಾಗಿ ತಿಳಿಸಿತು.

ಈ ಮೊದಲು ಆಮ್ಲಜನಕದ ತೀವ್ರ ಹಾಹಾಕಾರದ ವೇಳೆ ಕೂಡ ಇದೇ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು, ದೇಶದ ಆಮ್ಲಜನಕ ಬಿಕ್ಕಟ್ಟು ನಿರ್ವಹಣೆಗಾಗಿ ದ್ವಿಸದಸ್ಯ ಟಾಸ್ಕ್ ಫೋರ್ಸ್ ರಚಿಸಿತ್ತು. ಇದೀಗ ಮುಂದುವರಿದ ವಿಚಾರಣೆಯ ಭಾಗವಾಗಿ ಲಸಿಕಾ ಬೆಲೆ ಮತ್ತು ಸರಬರಾಜು ವಿಷಯದಲ್ಲಿ ಕೇಂದ್ರ ಸರ್ಕಾರದ ಹೊಣೆಗೇಡಿ ವರಸೆಯನ್ನು ತರಾಟೆಗೆ ತೆಗೆದುಕೊಂಡಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...