ಉಸಿರುಗಟ್ಟಿದಂತಾಗಿದ್ದ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಗೆ ಭಾರತದ ನ್ಯಾಯಾಂಗ ಇತ್ತೀಚಿನ ದಿನಗಳಲ್ಲಿ ಆಮ್ಲಜನಕ ಪೂರೈಸುವ ಮೂಲಕ ಈ ದೇಶದಲ್ಲಿ ಸಾಂವಿಧಾನಿಕ ಪ್ರಜಾತಂತ್ರದ ಜೀವಂತಿಕೆಯನ್ನು ನಿರೂಪಿಸುತ್ತಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿಲ್ಲ ಎಂದು ಒಕ್ಕೂಟ ಸರ್ಕಾರದ ವಕ್ತಾರರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ. ಆಂತರಿಕವಾಗಿಯೂ ಸಹ ಇಲ್ಲಿನ ಒಂದು ವರ್ಗ ಈ ಪ್ರತಿಪಾದನೆಯನ್ನು ಪುಷ್ಟೀಕರಿಸುತ್ತಾ “ ನೀವು ಸರ್ಕಾರದ ವಿರುದ್ಧ ಟೀಕೆ ಮಾಡಲು ಅವಕಾಶ ಇದೆಯಲ್ಲವೇ, ಯಾರು ಅಡ್ಡಿ ಮಾಡುತ್ತಿದ್ದಾರೆ ” ಎಂದು ಕೇಳುತ್ತದೆ. ವಿದ್ಯುನ್ಮಾನ ಮಾಧ್ಯಮದ ಸುದ್ದಿಮನೆಗಳೂ ಸಹ ಇದೇ ಭಟ್ಟಂಗಿತನವನ್ನು ತೋರುತ್ತಾ ಬಂದಿದೆ. ಈ ಮಾತುಗಳ ನಡುವೆಯೇ ನಾವು ಸದ್ದಿಲ್ಲದೆ 1975ಕ್ಕೆ ಜಾರಿಬಿಡುತ್ತೇವೆ. ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡ ತುರ್ತುಪರಿಸ್ಥಿತಿಗೆ ಇಂದಿನ ಸನ್ನಿವೇಶವನ್ನು ಹೋಲಿಸುತ್ತಾ, ದಮನಿತ ದನಿಗಳನ್ನು ತೆರೆಮರೆಗೆ ಸರಿಸುವ ಪ್ರಯತ್ನಗಳೂ ನಡೆಯುತ್ತಿವೆ.

ನಿಜ, 1975 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಪರ್ವ. ಆದರೆ ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬಂದಾಗ ನಾವು ಮುಖಾಮುಖಿಯಾಗಬೇಕಿರುವುದು ಈ ಕರಾಳ ಪರ್ವಕ್ಕೆ ಅಲ್ಲ. 1975ರ ಮುಂಚಿನ ಭಾರತಕ್ಕೆ. ಅಥವಾ 1975-2010ರ ಅವಧಿಯ ಭಾರತಕ್ಕೆ. 2010ರ ನಂತರ ನಾವು ನೋಡುತ್ತಿರುವ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ವ್ಯಕ್ತಿ ಸ್ವಾತಂತ್ರ್ಯ ತನ್ನ ಸಾಂವಿಧಾನಿಕ ರಕ್ಷಣೆಯನ್ನು ಕಳೆದುಕೊಂಡು ಆಧಿಪತ್ಯ ರಾಜಕಾರಣದ ಹಿಡಿತಕ್ಕೆ ಸಿಲುಕಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಮೂಲಭೂತ ಹಕ್ಕುಗಳು ಗ್ರಾಂಥಿಕವಾಗಿ ಸುರಕ್ಷಿತವಾಗಿದ್ದರೂ, ಆಡಳಿತ ವ್ಯವಸ್ಥೆಯ ವಿರುದ್ಧ ಮಾತನಾಡುವ ಆತ್ಮಸ್ಥೈರ್ಯವನ್ನು ಸಮಾಜ ಕಳೆದುಕೊಳ್ಳುವಂತಾಗಿದೆ. 2014ರ ನಂತರದಲ್ಲಿ ದಾಖಲಾಗಿರುವ ರಾಜದ್ರೋಹದ ಪ್ರಕರಣಗಳು ಮತ್ತು ಎಫ್‍ಐಆರ್ ಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಒಕ್ಕೂಟ ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವ ಪ್ರತಿರೋಧದ ದನಿಗಳನ್ನು “ ಭಯೋತ್ಪಾದನೆ ”ಯ ವ್ಯಾಪ್ತಿಯಲ್ಲಿ ನಿಷ್ಕರ್ಷೆ ಮಾಡುವ ಒಂದು ವಿಕೃತ ನ್ಯಾಯ ವ್ಯವಸ್ಥೆಯನ್ನು ಕಳೆದ ಐದಾರು ವರ್ಷಗಳಲ್ಲಿ ಕಾಣುತ್ತಿದ್ದೇವೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿರುವ ಒಂದು ತೀರ್ಪು ಆಳುವವರ ಮತ್ತು ಸಮೂಹ ಸನ್ನಿಗೊಳಗಾದ ಮಧ್ಯಮ ವರ್ಗಗಳ ಕಣ್ತೆರೆಸಬೇಕಿದೆ. ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ಮತ್ತು ಜೆಎನ್‍ಯು ವಿದ್ಯಾರ್ಥಿಗಳಾದ ದೇವಾಂಗನಾ ಕಾಲಿಕಾ ಹಾಗೂ ನತಾಶಾ ನರ್ವಾಲ್ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ “ ಭಿನ್ನಮತವನ್ನು ದಮನಿಸುವ ಕಾತರದಲ್ಲಿ ಪ್ರಭುತ್ವವು ಪ್ರತಿಭಟನೆ ಮತ್ತು ಭಯೋತ್ಪಾದನಾ ಚಟುವಟಿಕೆಯ ನಡುವಣ ಗೆರೆಯನ್ನು ಮಸುಕಾಗಿಸಿದೆ ” ಎಂದು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಈ ಮೂವರು ವಿದ್ಯಾರ್ಥಿಗಳ ವಿರುದ್ಧ ಕರಾಳ ಯುಎಪಿಎ ಕಾಯ್ದೆಯಡಿ ಆರೋಪ ಹೊರಿಸಿ ಬಂಧಿಸಿದ್ದನ್ನು ದೆಹಲಿಯ ವಿಚಾರಣಾ ನ್ಯಾಯಾಲಯವೂ ಖಂಡಿಸಿದ್ದು, ಜಾಮೀನು ನೀಡಿತ್ತು. ಈ ಜಾಮೀನು ತೀರ್ಪನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿರುವುದೇ ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ಭಯೋತ್ಪಾದಕ ಚಟುವಟಿಕೆ ಎನಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟೀಕರಿಸಿದೆ. ಯುಎಪಿಎ ಕಾಯ್ದೆಯ ಸೆಕ್ಷನ್ 43-ಡಿ(5) ಎಲ್ಲ ರೀತಿಯ ಪ್ರತಿರೋಧ ಮತ್ತು ಪ್ರತಿಭಟನೆಯನ್ನೂ ಭಯೋತ್ಪಾದಕ ಚಟುವಟಿಕೆ ಎಂದು ವರ್ಗೀಕರಿಸಲು ನೆರವಾಗುತ್ತಿದೆ. ಆರೋಪಿಯ ವಿರುದ್ಧ ಮಾಡಲಾಗಿರುವ ಆಪಾದನೆಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದರೂ ಇಂತಹ ಆರೋಪಿಗಳಿಗೆ ಜಾಮೀನು ನಿರಾಕರಿಸುವ ಹಕ್ಕನ್ನು ಈ ಕಾಯ್ದೆ ಪೊಲೀಸರಿಗೆ ನೀಡುತ್ತದೆ. ಬಹುಶಃ ಯುಎಪಿಎ ಕಾಯ್ದೆಯ ಈ ನಿಯಮಗಳನ್ನು ಪರಿಷ್ಕರಿಸಲು ಇದು ಸಕಾಲ.
ಏಕೆಂದರೆ ಇದೇ ಕಾಯ್ದೆಯಡಿ ಬಂಧನಕ್ಕೊಳಗಾದ ಅನೇಕ ಅಮಾಯಕರು ದೀರ್ಘ ಕಾಲದ ಸೆರೆವಾಸ ಅನುಭವಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ 14 ವರ್ಷ, 23 ವರ್ಷದ ಜೈಲು ಶಿಕ್ಷೆ ಅನುಭವಿಸಿ ನಿರಪರಾಧಿಗಳಾಗಿ ಹೊರಬಂದಿರುವ ಪ್ರಕರಣಗಳೂ ನಡೆದಿವೆ. ಒಕ್ಕೂಟ ಸರ್ಕಾರ ಈ ಕಾಯ್ದೆಯನ್ನೇ ಆಧರಿಸಿ ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವ ಪ್ರತಿಭಟನಕಾರರನ್ನು ದಮನಿಸಲು ಮುಂದಾಗಿದೆ. ಇದರೊಂದಿಗೆ ಅತಿ ಹೆಚ್ಚು ದುರ್ಬಳಕೆಯಾಗಿರುವ ಕಾಯ್ದೆ ಎಂದರೆ ಸೆಕ್ಷನ್ 124ಎ, ರಾಜದ್ರೋಹದ ಕಾನೂನು. 1870ರಲ್ಲಿ ಬ್ರಿಟೀಷ್ ಸರ್ಕಾರ ರೂಪಿಸಿದ ಈ ಕಾನೂನು ಮೂಲತಃ ಸ್ವಾತಂತ್ರ್ಯ ಸಂಗ್ರಾಮಿಗಳನ್ನು ದಮನಿಸುವ ಒಂದು ಕರಾಳ ಶಾಸನವಾಗಿತ್ತು. ದುರಂತ ಎಂದರೆ #ಆತ್ಮನಿರ್ಭರ ಭಾರತದಲ್ಲೂ ಸಹ ಇದೇ ಕಾನೂನು ಬಳಸಿ ಪ್ರತಿರೋಧದ ದನಿಗಳನ್ನು ದಮನಿಸಲಾಗುತ್ತಿದೆ.
ಕರಾಳ ಶಾಸನದ ಒಂದು ಪರ್ವ

2001ರಲ್ಲಿ ವ್ಯಂಗ್ಯಚಿತ್ರಕಾರ ಅಸೀಂ ತ್ರಿವೇದಿ ವಿರುದ್ಧ, ಸಂವಿಧಾನ ಮತ್ತು ರಾಷ್ಟ್ರ ಲಾಂಛನವನ್ನು ಅಪಮಾನಗೊಳಿಸಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. 2014ರಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ 60 ಕಾಶ್ಮೀರದ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದ ಕಾರಣಕ್ಕಾಗಿ ಬಂಧನಕ್ಕೊಳಗಾಗಿದ್ದರು. ಕೇರಳದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕಾಗಿ ರಾಜದ್ರೋಹದ ಆರೋಪ ಎದುರಿಸಬೇಕಾಗಿತ್ತು. 2015ರಲ್ಲಿ ಜಾನಪದ ಗಾಯಕ ಕೋವನ್, ತಮಿಳುನಾಡು ಸರ್ಕಾರ ಸಾರಾಯಿ ಮಾರಾಟದ ಮೂಲಕ ಬಡಜನತೆಯ ಸುಲಿಗೆ ಮಾಡಿ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಂಧನಕ್ಕೊಳಗಾಗಿದ್ದರು. 2016ರಲ್ಲಿ ಕನ್ನಯ್ಯ ಕುಮಾರ್ ದೇಶವಿರೋಧಿ ಘೋಷಣೆ ಕೂಗಿದ್ದ ಕಾರಣಕ್ಕಾಗಿ ರಾಜದ್ರೋಹದ ಆರೋಪ ಎದುರಿಸಬೇಕಾಯಿತು. 2012 ಮತ್ತು 13ರಲ್ಲಿ ತಮಿಳುನಾಡಿನ ಅಣುವಿದ್ಯುತ್ ಘಟಕದ ವಿರುದ್ಧ ಪ್ರತಿಭಟಿಸುತ್ತಿದ್ದ 9000 ಜನರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗಿತ್ತು. ಇಂದಿಗೂ ದೇಶದ ನ್ಯಾಯಾಲಯಗಳಲ್ಲಿ ರಾಜದ್ರೋಹದ ಆರೋಪದ ಅಡಿಯಲ್ಲೇ 140 ಪ್ರಕರಣಗಳು ಸಕ್ರಿಯವಾಗಿವೆ.
2016ರ ನಂತರ ರಾಜದ್ರೋಹದ ಕಾಯ್ದೆಯನ್ನು ಪತ್ರಕರ್ತರ ವಿರುದ್ಧವೂ ಅವ್ಯಾಹತವಾಗಿ ಬಳಸಲಾಗುತ್ತಿದೆ. 2016ರಲ್ಲೇ 18 ಪ್ರಕರಣಗಳು ದಾಖಲಾಗಿದ್ದವು. ಭಾರತದ ಪತ್ರಿಕೋದ್ಯಮ ವಲಯವನ್ನು ಸರ್ಕಾರದ ಪರ ಮತ್ತು ವಿರೋಧ ಎಂದು ಎರಡು ಬಣಗಳಾಗಿ ವಿಂಗಡಿಸಲಾಗಿದೆ. ಒಕ್ಕೂಟ ಸರ್ಕಾರದ ಕಾಶ್ಮೀರ ನೀತಿ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿ, ಕೃಷಿ ಮಸೂದೆಗಳು, ನೂತನ ಶಿಕ್ಷಣ ನೀತಿ ಇವುಗಳನ್ನು ವಿರೋಧಿಸುವ ಪತ್ರಕರ್ತರನ್ನೂ ಯುಎಪಿಎ ಕಾಯ್ದೆಯಡಿ, ರಾಜದ್ರೋಹದ ಕಾಯ್ದೆಯಡಿ ಬಂಧಿಸಲಾಗಿದೆ. ಒಂದು ಅಧಿಕೃತ ವರದಿಯ ಪ್ರಕಾರ 2010-20ರ ಅವಧಿಯಲ್ಲಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ತೀವ್ರ ಹೆಚ್ಚಳ ಕಂಡಿದ್ದು, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚಿನ ಮೊಕದ್ದಮೆಗಳು ದಾಖಲಾಗಿವೆ. ರೈತ ಹೋರಾಟವನ್ನು ವರದಿ ಮಾಡಲು ಹೋಗಿದ್ದ ಮನ್‍ದೀಪ್ ಪುನಿಯಾ ಎಂಬ ಪತ್ರಕರ್ತನ ವಿರುದ್ಧವೂ ರಾಜದ್ರೋಹದ ಆರೋಪ ಹೊರಿಸಲಾಗಿದೆ. ರೈತ ಹೋರಾಟದ ಹಿನ್ನೆಲೆಯಲ್ಲೇ ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ಜಫರ್ ಆಘಾ, ಪರೇಶ್ ನಾಥ್, ಅನಂತ ನಾಥ್, ವಿನೋದ್ ಕೆ ಜೋಸ್, ವಿನೋದ್ ದುವಾ ಮುಂತಾದ ಸಂಪಾದಕರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.

ರೈತ ಮುಷ್ಕರದ ಸಂದರ್ಭದಲ್ಲಿ ಅಸುನೀಗಿದ ನವರೀತ್ ಸಿಂಗ್‍ನ ಬಗ್ಗೆ ವರದಿ ಮಾಡಿದ್ದ ವೈರ್ ಪತ್ರಿಕೆಯ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ವರದಿಗಾರ್ತಿ ಇಸ್ಮತ್ ಅರಾ ವಿರುದ್ಧ ದೇಶದ ಅಖಂಡತೆಗೆ ಭಂಗ ತರುವ ಆರೋಪ ಹೊರಿಸಿ ಸೆಕ್ಷನ್ 153ಬಿ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಹಥ್ರಾಸ್‍ನಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ವರದಿ ಮಾಡಲು ಹೊರಟಿದ್ದ ಅಳಿಮುಖ್ಖಂ ಪತ್ರಿಕೆಯ ವರದಿಗಾರ ಸಿದ್ದಿಖ್ ಕಪ್ಪನ್ ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು. ಇತ್ತೀಚೆಗೆ ಸಿದ್ದಿಖ್ ಕಪ್ಪನ್ ಜಾಮೀನು ಪಡೆದು ಹೊರಬಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಜಾಮಿಯಾ ವಿದ್ಯಾರ್ಥಿಗಳಾದ ಮೀರಾ ಹೈದರ್, ಆಸಿಫ್ ಇಕ್ಬಾಲ್, ಉಮರ್ ಖಲೀದ್, ನತಾಶಾ ನಾರ್ವಲ್, ದೇವಾಂಗನಾ, ಶರ್ಜೀಲ್ ಇಮಾಮ್ ಇವರೆಲ್ಲರೂ ಯುಎಪಿಎ ಕಾಯ್ದೆಯಡಿ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಂಧನಕ್ಕೊಳಗಾದವರು.
ಕರ್ನಾಟಕದಲ್ಲೇ ಬಿದರ್‍ನ ಒಂದು ಶಾಲೆಯಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಆತಂಕ ವ್ಯಕ್ತಪಡಿಸಿದ ಆರೋಪದ ಮೇಲೆ ಓರ್ವ ಶಿಕ್ಷಕರನ್ನು ಮತ್ತು ಹಲವು ವಿದ್ಯಾರ್ಥಿಗಳನ್ನು ರಾಜದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಮೇಲೆ ಅಮೂಲ್ಯ ಲಿಯೋನಾ ಮತ್ತು ಆದ್ರ್ರ ನಾರಾಯಣನ್ ಹಲವು ದಿನಗಳ ಜೈಲುವಾಸ ಅನುಭವಿಸಬೇಕಾಯಿತು. ರೈತ ಹೋರಾಟವನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ದಿಶಾರವಿ ಎಂಬ ಪರಿಸರವಾದಿ ವಿದ್ಯಾರ್ಥಿಯನ್ನು ರಾಜದ್ರೋಹದ ಆರೋಪ ಹೊರಿಸಿ ಬಂಧಿಸಲಾಗಿತ್ತು. ಹಿಂದೂ ದೇವತೆಗಳಿಗೆ ಅಪಮಾನದ ಮಾಡಿದ ಆರೋಪಕ್ಕೊಳಗಾಗಿ ಹಾಸ್ಯ ಕಲಾವಿದ ಮುನಾವರ್ ಫರೂಖಿ ರಾಜದ್ರೋಹದ ಆರೋಪ ಎದುರಿಸಬೇಕಾಯಿತು.
ನ್ಯಾಯಾಂಗದ ಆಮ್ಲಜನಕ

ರಾಜದ್ರೋಹ ಮತ್ತು ಭಯೋತ್ಪಾದಕ ಚಟುವಟಿಕೆ ಈ ಎರಡು ಆರೋಪಗಳನ್ನು ಎಲ್ಲ ರೀತಿಯ ಪ್ರತಿರೋಧಗಳಿಗೂ ಅನ್ವಯಿಸುವ ಒಂದು ವಿಕೃತ ಆಡಳಿತ ವ್ಯವಸ್ಥೆಯನ್ನು ಕಳೆದ ಹತ್ತು ವರ್ಷದಲ್ಲಿ ಕಂಡಿದ್ದೇವೆ. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವರಾವರರಾವ್, ಸುಧಾ ಭರದ್ವಾಜ್, ಗೌತಮ್ ನವಲಖ, ಆನಂದ್ ತೇಲ್ತುಂಬ್ಡೆ ಇಂದಿಗೂ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಾರೆ. ಕರಾಳ ಶಾಸನಗಳ ದುರ್ಬಳಕೆಗೆ ಉತ್ತರಪ್ರದೇಶದ ಕಫೀಲ್ ಖಾನ್ ಪ್ರಕರಣವೂ ಒಂದು ಉತ್ತಮ ನಿದರ್ಶನ. 300 ಅಮಾಯಕ ಮಕ್ಕಳು ಆಮ್ಲಜನಕ ಪೂರೈಕೆ ಇಲ್ಲದೆ ಅಸು ನೀಗಿದ ಪ್ರಕರಣವೊಂದರಲ್ಲಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕಫೀಲ್ ಖಾನ್ ಅವರನ್ನು ವಿನಾಕಾರಣ ಬಂಧಿಸಲಾಗಿತ್ತು. ಮೂರು ವರ್ಷಗಳ ನಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಇತ್ತೀಚೆಗೆ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅನುಸರಿಸುತ್ತಿರುವ ನೀತಿಗಳನ್ನು ಖಂಡಿಸಿದ ಕಾರಣಕ್ಕಾಗಿ ಚಿತ್ರ ನಟಿ ಮತ್ತು ರೂಪದರ್ಶಿ ಆಯಿಷಾ ಸುಲ್ತಾನ್ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗಿದೆ. ಕೇರಳ ಹೈಕೋರ್ಟ್ ಆಕೆಗೆ ನಿರೀಕ್ಷಣಾ ಜಾಮೀನು ನೀಡಿದೆ.
ಈ ಕಾರ್ಮೋಡಗಳ ನಡುವೆಯೂ ಒಂದು ಮಿಂಚಿನ ಬೆಳಕು ಕಾಣುತ್ತಿದೆ ಎಂದರೆ ಅದು ಇತ್ತೀಚಿನ ಕೆಲವು ನ್ಯಾಯಾಂಗದ ನಿರ್ಧಾರಗಳು. ದಿಶಾ ರವಿ ಜಾಮೀನು ಪ್ರಕರಣದಿಂದ ಆರಂಭವಾದ ಈ ನವ ಪರ್ವ ಇನ್ನೂ ಮುಂದುವರೆದಿದ್ದು, ಬದಲಾದ ಸನ್ನಿವೇಶದಲ್ಲಿ ನ್ಯಾಯಾಂಗವೂ ದೇಶದ ಪ್ರಜಾಸತ್ತೆಗೆ ಎದುರಾಗಿರುವ ವಿಪತ್ತನ್ನು ಗಮನಿಸಿದಂತೆ ಕಾಣುತ್ತಿದೆ. ಇತ್ತೀಚೆಗೆ ನತಾಶಾ ನಾರ್ವಲ್ ಜಾಮೀನು ವಿಚಾರಣೆಯ ಸಂದರ್ಭದಲ್ಲಿ ದೆಹಲಿಯ ಹೈಕೋರ್ಟ್ ಪೀಠ “ ಸಂವಿಧಾನ ನೀಡಿರುವ ಪ್ರತಿಭಟನೆಯ ಹಕ್ಕನ್ನು ಸರಕಾರವು ಭಯೋತ್ಪಾದನಾ ಚಟುವಟಿಕೆ ಎಂದು ಪರಿಗಣಿಸಿ, ಈ ಎರಡರ ನಡುವಿನ ವ್ಯತ್ಯಾಸವನ್ನು ಮಸುಕುಗೊಳಿಸುವುದು ಅದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ ” ಎಂದು ಹೇಳಿದೆ. ನ್ಯಾಯಾಂಗದ ಈ ವಿವೇಕಯುತ ಮಾತುಗಳು ಅಧಿಕಾರ ಪೀಠಕ್ಕೆ ಕಪಾಳಮೋಕ್ಷವಾಗಿದ್ದರೆ, ದೇಶದ ಪ್ರತಿರೋಧದ ದನಿಗಳಿಗೆ ಆಮ್ಲಜನಕ ನೀಡಿದಂತಾಗಿದೆ.
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿರೋಧದ ಹಕ್ಕು ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿದೆ. ತುರ್ತುಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿ ಮತ್ತಾವುದೇ ಅವಧಿಯಲ್ಲೂ ಈ ಹಕ್ಕನ್ನು ನಿರಾಕರಿಸಲಾಗಿರಲಿಲ್ಲ. ಈಗಲೂ ಸಹ ಶಾಸನಬದ್ಧವಾಗಿ ಈ ಹಕ್ಕು ಸಮಸ್ತ ಪ್ರಜೆಗಳಿಗೂ ಲಭ್ಯವಿದೆಯಾದರೂ, ಆಡಳಿತಾರೂಢ ಸರ್ಕಾರಗಳು ತಮ್ಮ ಆಡಳಿತ ನೀತಿಗಳನ್ನು ವಿರೋಧಿಸುವ ಎಲ್ಲ ಪ್ರತಿಭಟನೆಗಳನ್ನೂ ರಾಜದ್ರೋಹ ಅಥವಾ ಭಯೋತ್ಪಾದಕ ಚಟುವಟಿಕೆಯ ವ್ಯಾಪ್ತಿಗೆ ಒಳಪಡಿಸುತ್ತಿದೆ. ದೆಹಲಿ ಹೈಕೋರ್ಟ್ ಪೀಠದ ಇತ್ತೀಚಿನ ತೀರ್ಪು ಈ ಇಟ್ಟಿನಲ್ಲಿ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಟ್ಟಿದೆ.
ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ಕರಾಳಶಾಸನಗಳನ್ನು ಬಳಸುವ ಪರಂಪರೆಗೆ ನಾಂದಿ ಹಾಡಿದ್ದೇ ತುರ್ತುಪರಿಸ್ಥಿತಿ ಎನ್ನುವುದನ್ನು ಪ್ರಜ್ಞಾವಂತ-ಸುಶಿಕ್ಷಿತ ನಾಗರಿಕ ಸಮಾಜ ಗಮನಿಸಬೇಕಿದೆ. ತುರ್ತುಪರಿಸ್ಥಿತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಈ ಹಕ್ಕುಗಳನ್ನು ದಮನಿಸಿದರೆ, ಇಂದು ಯಾವುದೇ ತಿದ್ದುಪಡಿ ಇಲ್ಲದೆ, ಸಾಂವಿಧಾನಿಕವಾಗಿ ಜಾರಿಯಾಗಿರುವ ಯುಎಪಿಎ, ರಾಜದ್ರೋಹ ಮುಂತಾದ ಕರಾಳ ಶಾಸನಗಳ ಮೂಲಕ ದಮನಿಸಲಾಗುತ್ತಿದೆ. ಒಂದು ಅರ್ಥದಲ್ಲಿ ನಾವು ತುರ್ತುಪರಿಸ್ಥಿತಿಯನ್ನು ಖಂಡಿಸುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ ಅಲ್ಲವೇ ? ಒಬ್ಬ ಹಾಸ್ಯ ಕಲಾವಿದನನ್ನು, ವ್ಯಂಗ್ಯ ಚಿತ್ರಕಾರನನ್ನು ದೇಶದ್ರೋಹಿ ಎಂದು ಪರಿಭಾವಿಸುವ ವಿಕೃತ ವ್ಯವಸ್ಥೆಯಲ್ಲಿ ಭಾರತದ ಪ್ರಜಾತಂತ್ರ ತನ್ನ ಅಸ್ತಿತ್ವಕ್ಕಾಗಿ ಹಾತೊರೆಯುತ್ತಿದೆ.

ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಕಾರ್ಯಕರ್ತರ ನಡುವೆ ಮತ್ತು ವಿವಿಧ ಜನಪರ ಸಂಘಟನೆಗಳ ನಡುವೆ ಇಂದು ಚರ್ಚೆಯಾಗಬೇಕಾಗಿರುವುದು ಯುಎಪಿಎ ಮತ್ತು ರಾಜದ್ರೋಹದ ಕಾಯ್ದೆ. ಎರಡೂ ಕಾನೂನುಗಳ ನಡುವೆ ಶತಮಾನದ ಅಂತರ ಇದ್ದರೂ, ಮೂಲತಃ ಒಂದೇ ಆಡಳಿತ ನೀತಿಯನ್ನು ಪ್ರಚೋದಿಸುವ ಕರಾಳ ಶಾಸನಗಳು. ಜಾಮೀನು ಪಡೆಯುವ ಹಕ್ಕುಗಳನ್ನೂ ಕಸಿದುಕೊಳ್ಳುವ ಮತ್ತು ಪ್ರಾಥಮಿಕ ವಿಚಾರಣೆಯೂ ಇಲ್ಲದೆಯೇ ಅಮಾಯಕರನ್ನು ಸೆರೆವಾಸಕ್ಕೆ ತಳ್ಳಲು ಈ ಎರಡೂ ಕಾಯ್ದೆಗಳೂ ಬಳಕೆಯಾಗುತ್ತಿದ್ದು, ಆಳುವ ವರ್ಗಗಳ ದಮನಕಾರಿ ನೀತಿಗೆ ಪೂರಕವಾಗಿದೆ. ಕಳೆದ ಮೂರು ದಶಕಗಳಲ್ಲಿ ನೂರಾರು ಅಮಾಯಕ ಜೀವಗಳು ಯುಎಪಿಎ ಕಾಯ್ದೆಯ ಜಗನ್ನಾಥ ರಥದ ಚಕ್ರದಡಿ ಸಿಲುಕಿ ನಲುಗಿ ಹೋಗಿವೆ. ಹತ್ತಾರು ವರ್ಷಗಳ ಸೆರೆವಾಸದ ನಂತರ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗುವ ಒಂದು ಜೀವ ತನ್ನ ಜೀವಸತ್ವವನ್ನೇ ಕಳೆದುಕೊಂಡಿರುತ್ತದೆ ಎನ್ನುವುದನ್ನು ಪ್ರಜ್ಞಾವಂತ ಸಮಾಜ ಗಮನಿಸಬೇಕಿದೆ.
ದುರಂತ ಎಂದರೆ ಈ ಕಾಯ್ದೆಗಳ ವಿರುದ್ಧ ಮಾನವ ಹಕ್ಕು ಸಂಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಹೆಚ್ಚಿನ ಸಾರ್ವಜನಿಕ ಆಕ್ರೋಶ ಕಂಡುಬರುತ್ತಿಲ್ಲ. ರಾಜಕೀಯ ಪಕ್ಷಗಳಿಗೆ ಈ ಕಾನೂನುಗಳು ತಮ್ಮ ಆಡಳಿತಾವಧಿಯಲ್ಲಿ ರಕ್ಷಾ ಕವಚಗಳಾಗಿ ಕಾಣುತ್ತವೆ, ವಿರೋಧ ಪಕ್ಷದಲ್ಲಿದ್ದಾಗ ಕರಾಳ ಎನಿಸುತ್ತವೆ. ಆದರೆ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಸಾರ್ವಭೌಮರೇ ಹೊರತು ಜನಪ್ರತಿನಿಧಿಗಳಲ್ಲ ಎಂದು ಸಂವಿಧಾನ ಹೇಳುತ್ತದೆ. ಈ ಸಾರ್ವಭೌಮ ಪ್ರಜೆಗಳ ಸಾರ್ವಭೌಮತ್ವಕ್ಕೆ ಈ ಎರಡೂ ಕಾನೂನುಗಳು ಮಾರಕವಾಗಿ ಪರಿಣಮಿಸುತ್ತವೆ. ಇಲ್ಲಿ ನ್ಯಾಯಾಂಗ ತನ್ನ ವಿವೇಕ ಮತ್ತು ವಿವೇಚನೆಯನ್ನು ಬಳಸಿ ಅಮಾಯಕರ ರಕ್ಷಣೆಗೆ ಧಾವಿಸುತ್ತಿದೆ. ಈ ಎರಡೂ ಕಾನೂನುಗಳಲ್ಲಿ ಸಾರ್ವಜನಿಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬರುವಂತಹ ಎಲ್ಲ ನಿಯಮಗಳನ್ನು ನ್ಯಾಯಾಂಗ ಪ್ರಶ್ನಿಸುತ್ತಲೇ ಬಂದಿದೆ.

ದೇಶದ ಏಕತೆ ಮತ್ತು ಅಖಂಡತೆ, ದೇಶದ ಸುಭದ್ರತೆ ಮತ್ತು ದೇಶದೊಳಗಿನ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ಬಳಸಬಹುದಾದ ಹಲವಾರು ಕಾನೂನುಗಳು ನಮ್ಮ ಸಂವಿಧಾನದ ಅಡಿಯಲ್ಲೇ ರೂಪುಗೊಂಡಿವೆ. ಈ ಯುಎಪಿಎ ಮತ್ತು ರಾಜದ್ರೋಹದ ಶಾಸನಗಳು ಇಲ್ಲದೆಯೂ ಸಹ, ದೇಶ ವಿರೋಧಿ ಎನಿಸುವ ಅಥವಾ ದೇಶದ ಅಖಂಡತೆಗೆ ಧಕ್ಕೆ ಉಂಟುಮಾಡಬಹುದು ಎನಿಸುವ ಚಟುವಟಿಕೆಗಳನ್ನು ನಿಯಂತ್ರಿಸಲು, ನಿಗ್ರಹಿಸಲು ಸಂವಿಧಾನ ಅವಕಾಶ ಒದಗಿಸಿದೆ. ಹಾಗಾಗಿ ಈ ಎರಡೂ ಕಾನೂನುಗಳ ವಿರುದ್ಧ ಭಾರತದ ಪ್ರಜ್ಞಾವಂತ ಸಮಾಜ ದನಿ ಎತ್ತಬೇಕಿದೆ. ರಾಜಕೀಯ ಸಮೂಹಸನ್ನಿಗೊಳಗಾಗಿ ತಮ್ಮ ಪ್ರಜ್ಞೆಯನ್ನು ಒತ್ತೆ ಇಟ್ಟಿರುವ ಉನ್ಮತ್ತರಿಗೆ ಇದು ಅರ್ಥವಾಗದಿರಬಹುದು. ಆದರೆ ಈ ದೇಶದ ಬಹುಸಂಖ್ಯೆಯ ಜನತೆಗೆ ಅರ್ಥವಾಗುತ್ತದೆ.
ಉಸಿರುಗಟ್ಟಿಸುವ ವಾತಾವರಣದ ನಡುವೆಯೂ, ಈ ನಿಟ್ಟಿನಲ್ಲಿ ಯೋಚಿಸಲು ಅಗತ್ಯವಾದ ಆಮ್ಲಜನಕವನ್ನು ಒದಗಿಸುತ್ತಿರುವ ಭಾರತದ ನ್ಯಾಯಾಂಗ ವ್ಯವಸ್ಥೆಯ ಸೂಕ್ಷ್ಮ ಸಂವೇದನೆಯ ಧ್ವನಿಯನ್ನು ನಾವು ಆಲಿಸುವಂತಾದಾಗ, ನಮ್ಮ ನಾಗರಿಕ ಹೊಣೆಗಾರಿಕೆಯೂ ಅರ್ಥವಾಗಬಹುದು. ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ನಿರಾಕರಣೆಯಾಗುತ್ತಿರುವುದನ್ನೂ ಮೌನವಾಗಿ ಸಹಿಸಿಕೊಳ್ಳುವುದೇ ದೇಶದ್ರೋಹ ಎನಿಸುವುದಿಲ್ಲವೇ ? “ ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಅಡಿ ಭಾರತದ ಪ್ರಜೆಗಳಾದ ನಾವು ” ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.




