• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಪರಿಪೂರ್ಣತೆಯೆಡೆಗೆ ಪಯಣ..!

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
October 1, 2023
in ಅಂಕಣ, ಇದೀಗ
0
ಪರಿಪೂರ್ಣತೆಯೆಡೆಗೆ ಪಯಣ..!
Share on WhatsAppShare on FacebookShare on Telegram

ಮನುಷ್ಯನ ಬದುಕಿನ ಪಯಣ ಅರ್ಥಪೂರ್ಣವಾಗಬೇಕಾದರೆ ತಾನು ಬಯಸಿದನ್ನು ಪಡೆಯಲು ಮಾಡುವ ಸಂಘರ್ಷ ಯಶಸ್ವಿಯಾಗಬೇಕು. ಆ ಯಶಸ್ಸನ್ನು ಸಾಧಿಸುವ ಮಾರ್ಗ ಬಹಳ ದುರ್ಗಮವಾದರೂ ಸಾಧಿಸಬೇಕೆಂಬ ಛಲ ಅದಮ್ಯವಾಗಿರಬೇಕು. ದೈನಂದಿನ ಜೀವನದಲ್ಲಿ ಸಾಮಾನ್ಯನೊಬ್ಬ ಅನೇಕ ಕನಸುಗಳನ್ನು ಹೆಣೆದಿರುತ್ತಾನೆ. ಅವುಗಳ ಈಡೇರಿಕೆಗಾಗಿ ಎಂಥ ಸವಾಲುಗಳನ್ನಾದರು ಎದುರಿಸಿ ಹೋರಾಡುತ್ತಾನೆ. ಈ ಹೋರಾಟದ ನಂತರ ಯಶಸ್ಸು ದಕ್ಕಲುಬಹುದುˌ ದಕ್ಕದೆ ಇರಲೂಬಹುದು. ಜೀವನವೆ ಹಾಗೆˌ ಅದು ಇರುವುದೆಲ್ಲವ ಕಡೆಗಣಿಸಿ ಇಲ್ಲದುದರೆಡೆಗೆ ಸೆಳೆದು ನಮ್ಮನ್ನು ಹೋರಾಟದ ಹಾದಿಗೆ ನೂಕಿ ಬಿಡುತ್ತದೆ. ಇದು ಸಾಮಾನ್ಯನ ಜೀವನದ ಕತೆಯಾದರೆ ಅಸಾಮಾನ್ಯನು ಯಾವಾಗಲೂ ಸಾಮಾನ್ಯ ಮನುಷ್ಯನ ದೈನಂದಿನ ಆಶೆಗಳಿಗೆ ಹೊರತಾದ ವಿಶಿಷ್ಠವಾದದ್ದನ್ನೆ ಸಾಧಿಸುವ ಬಯಕೆ ಹೊಂದಿರುತ್ತಾನೆ. ಪ್ರಾಪಂಚಿಕ ಚಿಂತನೆಗಳಿಂದ ವಿಮುಖವಾಗಿ ಪಾರಮಾರ್ಥದ ಕಡೆಗೆ ಹಂಬಲಿಸುವ ಋಷಿ-ಮುನಿಗಳುˌಸಂತ-ಶರಣರಿಗೇನು ನಮ್ಮಲ್ಲಿ ಕೊರತೆಯಿಲ್ಲ.

ADVERTISEMENT

ಪ್ರಾಪಂಚಿಕ ವ್ಯವಹಾರಗಳೊಳಗಿದ್ದೇ ಪಾರಮಾರ್ಥವನ್ನು ಗೆದ್ದ ಅಗಣಿತ ಸಂತರೂ ನಮ್ಮ ನೆಲದಲ್ಲಿ ಆಗಿಹೋಗಿದ್ದಾರೆ. ಭವದ ಭೋಗಗಳನೆಲ್ಲವು ದಿಕ್ಕರಿಸಿˌ ಜೀವನವನ್ನು ದೇವನ ಸಾಕ್ಷಾತ್ಕಾರಕ್ಕಾಗಿ ಅನುಭಾವ ಸಾಧನೆಗೈದ ಅನೇಕರಲ್ಲಿ ಹನ್ನೆರಡನೇ ಶತಮಾನದ ಶರಣೆ ಅಕ್ಕ ಮಹಾದೇವಿ ಅಗ್ರಗಣ್ಣ್ಯೆ . ಇಹದ ಸಂಸಾರಿಕ ಜೀವನವು ನಶ್ವರವೆಂದು ಪಾರಮಾರ್ಥದ ಹಿಂದೆ ಬೆನ್ನಟ್ಟಿದ್ದ ಅಕ್ಕ ದೇವನನ್ನು ಸಾಕ್ಷಾತ್ಕರಿಸಿಕೊಳ್ಳಲು ಅನೇಕ ಕಠಿಣ ಸವಾಲುಗಳನ್ನು ಎದುರಿಸಿದ ವೀರ ವೈರಾಗ್ಯನಿಧಿ. ಬಾಲ್ಯದಿಂದಲೆ ಇಹದ ವ್ಯವಹಾರಗಳಲ್ಲಿ ನಿರಾಸಕ್ತಿ ತಾಳುತ್ತ ಸಾಗುವ ಅಕ್ಕನ ನಿಲುವು ಅಧ್ಯಾತ್ಮ ಸಾಧನೆಯ ಎತ್ತರದ ನಿಲುವಾಗಿ ರೂಪಾಂತರವಾಗುತ್ತದೆ. ಇಂದಿನ ಶಿಮೊಗ್ಗೆ ಜಿಲ್ಲೆಯ ಉಡಿತಡಿ ಎಂಬ ಗ್ರಾಮದ ಸಾಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದ ಅಕ್ಕ ಬಾಲ್ಯದಿಂದಲೂ ತಾನೇ ಬೇರೆ ಬಗೆಯವಳೆಂದು ತೋರುವ ನಡತೆಯನ್ನು ಹೊಂದಿರುತ್ತಾಳೆ. ಆರಂಭದಿಂದಲೂ ಭಗವಂತನ ಬಗೆಗೆ ಆಕೆಗಿದ್ದ ಆಸಕ್ತಿ ˌ ಕುತೂಹಲಗಳು ನಂತರದಲ್ಲಿ ಹಂಬಲ ಮತ್ತು ಭಕ್ತಿಯಾಗಿ ಪರಿವರ್ತನೆ ಹೊಂದುತ್ತವೆ.

ಸದಾ ಭಗವಂತನ ಧ್ಯಾನ ಮತ್ತು ಚಿಂತನೆಗಳಿಂದ ಆಕೆಯ ವ್ಯಕ್ತಿತ್ವ ಪ್ರಕೃತಿ ಸಹಜ ಗುಣಗಳನ್ನು ಕಳೆದುಕೊಳ್ಳುತ್ತ ವಿಶಿಷ್ಠ ವೈರಾಗ್ಯ ಮತ್ತು ಭಕ್ತಿಗಳಿಂದ ರೂಪುಗೊಳ್ಳುತ್ತ ಸಾಗುತ್ತದೆ. ಇದನ್ನೆಲ್ಲ ಸಾಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಹೆಣ್ಣು ಮಗುವೊಂದರ ಸಹಜ ನಡುವಳಿಕೆ ಎಂದೇ ಆಕೆಯ ಪಾಲಕರು ಭಾವಿಸಿರುತ್ತಾರೆ. ತರುಣಿಯಾಗಿ ಬೆಳೆದು ನಿಂತ ಮಗಳ ಮದುವೆಯ ಪ್ರಸ್ತಾಪದ ತನಕಲೂ ತಂದೆ ತಾಯಿಗೆ ಆಕೆಯಲ್ಲಿ ಹೆಪ್ಪುಗಟ್ಟುತ್ತಿದ್ದ ವೈರಾಗ್ಯದ ಬಗ್ಗೆ ಗೊತ್ತಾಗುವುದೇ ಇಲ್ಲ. ತನ್ನ ಜೀವನದ ಮುಖ್ಯ ಗುರಿ ದೇವನ ಸಾಕ್ಷಾತ್ಕಾರವೆಂದು ನಂಬಿದ ಅಕ್ಕ ಆ ದಿಕ್ಕಿನಲ್ಲಿ ದೂರ ಕ್ರಮಿಸಿರುತ್ತಾಳೆ. ಮದುವೆಯ ಪ್ರಸ್ತಾಪವಾದ ನಂತರದ ಬೆಳವಣಿಗಳು ಅಕ್ಕನನ್ನು ಪ್ರಖರ ವೈರಾಗ್ಯದ ಕಡೆಗೆ ಸೆಳೆದು ಬಿಡುತ್ತವೆ. ತನ್ನ ಜೀವನದ ತಲ್ಲಣˌ ಹೋರಾಟˌ ಹಂಬಲˌ ತುಡಿತಗಳನ್ನೆಲ್ಲ ಅಕ್ಕ ತನ್ನ ಅನನ್ಯ ವಚನˌ ಕಾವ್ಯ ಮತ್ತು ತ್ರಿವಿಧಿ ಎಂಬ ವಿಶಿಷ್ಠ ಸಾಹಿತ್ಯದ ಮೂಲಕ ಹಿಡಿದಿಟ್ಟಿರುವುದು ಕನ್ನಡದ ಸಾಹಿತ್ಯದ ದ್ರಷ್ಠಿಯಿಂದ ಒಂದು ಅಪೂರ್ವ ಹಾಗೂ ಅಪರೂಪದ ಪುಷ್ಪಗುಚ್ಛಗಳೇ ಸರಿ.

ನಮ್ಮ ನಿಮ್ಮೆಲ್ಲರಂತೆ ಮಹಾದೇವಿಯಕ್ಕನಿಗೆ ಒತ್ತಾಯದ ಮದುವೆ ಆಗಿಹೋಗುತ್ತದೆ. ದೇವರನ್ನೇ ಗಂಡˌಗುರುವೆಂದು ನಂಬಿದ್ದ ಅಕ್ಕನ ಮನಸ್ಸು ಈ ಲೋಕದ ಗಂಡನನ್ನು ಸ್ವೀಕರಿಸಲು ನಿರಾಕರಿಸುತ್ತದೆ. ಭವದ ಗಂಡನನ್ನು ತಿರಸ್ಕರಿಸಿದ ಆಕೆ ತನ್ನ ಆರಾಧ್ಯ ದೇವನನ್ನೇ ಗುರು ಹಾಗೂ ಗಂಡನೆಂದು ಭಾವಿಸಿ ಹುಡುಕಲಾರಂಭಿಸುತ್ತಾಳೆ. ತಾನು ಭವದ ಗಂಡನನ್ನು ತಿರಸ್ಕರಿಸಿˌಕ್ಷಣಿಕವಾದ ಭವಬಂಧನವನ್ನು ಬಗೆದು ಬಂದ ಬಗೆ ಈ ಕೆಳಗಿನಂತೆ ವಿವರಿಸುತ್ತಾಳೆ:

“ಸಂಸಾರ ಸಂಗದಲ್ಲಿರ್ದೆ ನೋಡಾ ನಾನುˌ
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರುˌ ಅಂಗವಿಕಾರದ ಸಂಗವ ನಿಲಿಸಿˌ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರುˌ ಹಿಂದಣ ಜನ್ಮವ ತೊಡೆದುˌ ಮುಂದಣ ಪಥವ ತೋರಿದನೆನ್ನ ತಂದೆˌ ಚೆನ್ನಮಲ್ಲಿಕಾರ್ಜುನನ ನಿಜವ ತೋರಿದೆನೆನ್ನ ಗುರು”

ಸಂಸಾರವೆಂಬುದು ನಿಸ್ಸಾರವೆಂದು ತಿಳಿಸಿˌ ಭೌತಿಕ ಗಂಡನೆಂಬ ಅಂಗವಿಕಾರದ ಸಂಗವನ್ನು ಕಳೆದುˌ ಅಂಗದ ಮೇಲೆ ಲಿಂಗವನ್ನು ನೆಲೆನಿಲ್ಲಿಸಿಕೊಂಡು ಕಾಯವನ್ನು ದೇವನ ನೆಲೆಯಾಗಿಸಿಕೊಂಡು ಅಧ್ಯಾತ್ಮದ ಮಾರ್ಗವನ್ನು ˌ ದೇವನನ್ನು ಸಾಕ್ಷಾತ್ಕರಿಸಿಕೊಳ್ಳುವ ಅನುಭಾವವನ್ನು ತೋರಿದ ಗುರುವನ್ನು ಹೃದಯಪೂರ್ವಕವಾಗಿ ನೆನೆಯುತ್ತಾಳೆ ಮಹಾದೇವಿ ಅಕ್ಕ. ಕ್ಷಣಿಕವಾದ ಸಂಸಾರ ಸುಖಃವನ್ನು ದಿಕ್ಕರಿಸುವ ಅಕ್ಕನ ವೈಯಕ್ತಿಕ ಅನುಭವವು ಲೋಕಾನುಭವದ ಸ್ವರೂಪ ಪಡೆದುಕೊಂಡು ಅಧ್ಯಾತ್ಮಕ ಉತ್ಕಟ ಹಂಬಲವನ್ನು ವ್ಯಕ್ತಪಡಿಸುವ ಪರಿ ಶರಣ ಸಾಹಿತ್ಯದ ಮಹೋನ್ನತ ಪ್ರಸಂಗವೆಂದೇ ಬಿಂಬಿತವಾಗಿದೆ. ಚನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದು ಪರಿಭಾವಿಸಿದ ಅಕ್ಕ ಆತನಿಗಾಗಿ ತಾಳುವ ಭಾವೋದ್ವೇಗˌ ತಲ್ಲಣˌ ನಿರೀಕ್ಷೆˌ ಹುಡುಕಾಟಗಳು ತನ್ನ ಪ್ರತಿಯೊಂದು ವಚನದಲ್ಲಿ ಭಾವದೀಪ್ತಿಯಂತೆ ಹಿಡಿದಿಟ್ಟಿದ್ದಾಳೆ. ಸರ್ವಾಂತರ್ಯಾಮಿಯಾದ ದೇವನನ್ನು ಹುಡುಕುತ್ತ ಆಕೆ ಹೀಗೆ ಪ್ರಶ್ನಿಸುತ್ತಾಳೆ:

“ವನವೆಲ್ಲ ನೀವೆˌ
ವನದೊಳಗಣ ದೇವತರುವೆಲ್ಲ ನೀವೆˌ
ತರುವಿನೊಳಗಾಡುವ ಖಗಮ್ರಗವೆಲ್ಲ ನೀವೆˌ
ಚನ್ನಮಲ್ಲಿಕಾರ್ಜುನˌ ಸರ್ವಭರಿತನಾಗಿ ಎನಗೇಕೆ ಮುಖದೋರೆ ?”

ಕಾಡುಮೇಡುˌ ತರುಲತೆಗಳುˌ ಅಲ್ಲಿರುವ ಖಗಮೃಗವೆಲ್ಲವೂ ನೀನೇ ಆಗಿದ್ದು ˌ ಎಲ್ಲದರಲ್ಲೂ ನೀನೆ ಇರುವೆಯಾದರೂ ನನಗೇಕೆ ಕಾಣುತ್ತಿಲ್ಲ ಎಂದು ದೇವನಿಗಾಗಿ ಅನವರತ ಹಂಬಲಿಸುವ ಅಕ್ಕ ಅದಕ್ಕಾಗಿ ಎಲ್ಲವನ್ನು ತೊರೆದು ಬದುಕುವ ಪರಿ ಅನನ್ಯವಾದದ್ದು. ಒಂದು ಕಡೆ ಮೀರಾಬಾಯಿ ಕೃಷ್ಣನನ್ನು ಕುರಿತು ಹಂಬಲಿಸುವ ಕತೆ ಪ್ರೇಮಿವೋರ್ವಳ ಅಪೂರ್ವ ಪ್ರೇಮವನ್ನು ಪ್ರತಿನಿಧಿಸಿದರೆ ಇಲ್ಲಿ ಚನ್ನಮಲ್ಲಿಕಾರ್ಜುನನಿಗಾಗಿ ಹಂಬಲಿಸುವ ಅಕ್ಕನ ಪರಿ ಒಂದು ಅಪೂರ್ವ ಭಕ್ತಿಯ ಉತ್ಕಟತೆಯನ್ನು ಪ್ರತಿನಿಧಿಸುತ್ತದೆ. ದೇವನ ಹುಡುಕಾಟದ ಅಕ್ಕನ ವಚನಗಳು ಕೇವಲ ಭಾವೋದ್ವೇಗವನ್ನಷ್ಟೇ ಹೊಂದಿರದೆˌ ಗೇಯತೆˌ ಭಕ್ತಿˌ ಮತ್ತು ಉತ್ತಮ ಭಾವಗೀತೆಯ ಗುಣವನ್ನೂ ಪಡೆದುಕೊಂಡಿದ್ದು ವಚನ ಸಾಹಿತ್ಯದ ಹಿರಿಮೆ ಎಂದೇ ಅನೇಕ ಪ್ರಾಜ್ಞರು ಗುರುತಿಸಿದ್ದಾರೆ. ಸದಾ ದೇವರ ಸ್ಮರಣೆಯಲ್ಲಿರುತ್ತಿದ್ದ ಅಕ್ಕ ಭವದ ಆಶೆˌ ಆಕಾಂಕ್ಷೆಗಳುˌ ಬೇಕು-ಬೇಡಗಳನ್ನು ಉಪೇಕ್ಷಿಸುತ್ತˌಅಧ್ಯಾತ್ಮದ ಅರಿವಿಗಾಗಿ ಆಳವಾದ ಚಿಂತನೆಯಲ್ಲಿ ತೊಡಗಿರುತ್ತಾಳೆ.

ಸಂಸಾರದ ಹಂಗನ್ನು ಮೀರಿನಿಂತ ಮಹಾದೇವಿಯಕ್ಕ ದೇವನ ಅನ್ವೇಶಣೆಗಾಗಿ ಜೀವನವನ್ನು ಮುಡಿಪಿಡಲು ನಿರ್ಧರಿಸುತ್ತಾಳೆ. ಕೌಸಿಕನೆಂಬ ನಶ್ವರ ಲೋಕದ ಗಂಡನ ಅಂಗವಿಕಾರದ ಸಂಗವ ತೊರೆದು ಅಗಮ್ಯˌ ಅಗೋಚರನಾದ ದೇವನೇ ತನ್ನ ಗಂಡನೆಂದು ನಂಬಿದ ಅಕ್ಕ ಲೋಕದ ಗಂಡ ಮತ್ತು ಶ್ರಷ್ಠಿಕರ್ತ ದೇವನ ನಡುವಿನ ಕಂದಕವನ್ನು ತನ್ನ ವಚನವೊಂದರಲ್ಲಿ ಹೀಗೆ ವಿವರಿಸುತ್ತಾಳೆ:

“ಸಾವಿಲ್ಲದ ಕೇಡಿಲ್ಲದ ಚಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಚಲುವಂಗಾನೊಲಿದೆನವ್ವˌ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆˌ
ಕುಲಸೀಮೆಯಿಲ್ಲದ ನಿಸ್ಸೀಮ ಚಲುವಂಗಾನೊಲಿದೆˌ
ಇದು ಕಾರಣ ಚನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆˌ
ಈ ಸಾವ ಕೆಡುವ ಗಂಡರನೋಯ್ದು ಒಲೆಯೊಳಗಿಕ್ಕು ತಾಯೆ.”

ಈ ನಶ್ವರವಾದ ಸಂಸಾರದಲ್ಲಿ ಸಾವು-ಕೇಡುˌ ಎಡೆ-ಕಡೆˌ ಭವ-ಭಯˌ ಮತ್ತು ಕುಲ ಸೀಮೆಯುಳ್ಳ ಭೌತಿಕ ಗಂಡನಿಗಿಂತ ಇದಾವೂ ಇಲ್ಲದ ದೇವನೇ ತನ್ನ ಗಂಡನೆಂದು ಅಕ್ಕ ಬಹು ಮಾರ್ಮಿಕವಾಗಿ ನಂಬಿ ನಡೆಯುವ ಪರಿ ಅದ್ಭುತವಾದ ಭಕ್ತಿಪರಂಪರೆಯನ್ನು ಅನಾವಣಗೊಳಿಸುತ್ತದೆ. ಸಂಸಾರದ ಜಂಜಡಗಳಿಂದ ಮುಕ್ತಿಬಯಸಿದ ಅಕ್ಕ ದೇವನನ್ನೆ ಗಂಡನೆಂದು ಆತನೋಡನೆ ತನ್ನ ವಚನಗಳ ಮೂಲಕ ಸಂವಾದಿಸುವ ರೀತಿ ಬಹುಶಃ ಕನ್ನಡ ಭಕ್ತಿ ಸಾಹಿತ್ಯ ಲೋಕದಲ್ಲಿನ ವಿನೂತನ ಬಗೆಯೆಂದೆ ಗುರುತಿಸಿಕೊಂಡಿದೆ. “ಮನವೆಂಬ ಸಖಿಯಿಂದ ಅನುಭಾವ ಕಲಿತೆನು ದೇವನೊಡನೆ” ಎನ್ನುತ್ತ ತನ್ನ ಮನಸ್ಸಿನ ಮೂಲಕ ದೇವನೊಡನೆ ಅನುಸಂಧಾನಗೈದು ಅನುಭಾವವನ್ನು ಕಲಿತೆ ಎಂದು ಅಕ್ಕ ಹೀಗೆ ಹೇಳಿಕೊಳ್ಳುತ್ತಾಳೆ:

“ಮನವೆoಬುದು ಬೇರಿಲ್ಲ
ಮನವೆoಬುದು ಮಹಾದೇವನ ಮಹಾ ಅರುಹು ನೋಡಾˌ
ಸಂಕಲ್ಪ ವಿಕಲ್ಪಗಳ ಮಾಡಿದಲ್ಲಿ
ಮನವೆನಿಸಿತ್ತುˌ
ಅದು ಆಳಿದಲ್ಲಿ ಮಹಾಜ್ಞಾನವೆನಿಸಿತ್ತುˌ
ಆ ಭಾವ ಆಳಿದಲ್ಲಿ ಕಪಿಲಸಿದ್ದ
ಮಲ್ಲಿಕಾರ್ಜುನನೆನಿಸಿತ್ತು.”

ಮನಸ್ಸೆಂಬುದು ಬೇರೇನೂ ಅಲ್ಲದೆ ಮಹಾದೇವನ ಅರಿವುˌ ಪರಿಪೂರ್ಣವಾದಾಗ ಅದೊಂದು ಮಹಾಜ್ಞಾನˌ ನಾನೆಂಬ ಭಾವ ಅಳಿದಾಗ ಮನಸ್ಸೆ ಸಾಕ್ಷಾತ್ ಚನ್ನಮಲ್ಲಿಕಾರ್ಜುನದೇವ ಎಂದು ಅಕ್ಕ ಮನಸ್ಸಿನ ಕುರಿತು ಮಾರ್ಮಿಕವಾಗಿ ನುಡಿದಿದ್ದಾಳೆ. ಮನಸ್ಸು ದೇವನನ್ನು ಒಲಿಸಿಕೊಳ್ಳುವ ಪರಿಣಾಮಕಾರಿ ಮಾದ್ಯಮವಾಗಿ ಮಹಾದೇವಿಯಕ್ಕ ಪರಿಭಾವಿಸಿದ್ದಾಳೆ. ಅಕ್ಕ ತನಗೆ ಚನ್ನಮಲ್ಲಿಕಾರ್ಜುನನ ಹೊರತು ಪಡಿಸಿ ಮಿಕ್ಕ ಪುರುಷರೆಲ್ಲ ಸಹೋದರರು ಎಂದು ಭಾವಿಸುವ ರೀತಿ ಆಕೆ ದೇವನ ಮೇಲಿಟ್ಟ ಅಪಾರವಾದ ಭಕ್ತಿ ಮತ್ತು ವಿಶ್ವಾಸವನ್ನು ಎತ್ತಿ ಹೇಳುತ್ತದೆ. ಈ ಕ್ಷಣಿಕವಾದ ವಿಷಯಾಸಕ್ತಿ ˌ ಕಾಮಾತುರತೆˌ ಕಾಯದ ಆಕರ್ಶಣೆಗಳಿಂದ ಮತಿಗೆಡುವ ಮನುಷ್ಯನ ಬುದ್ಧಿಯನ್ನು ಅಕ್ಕ ಬಹಳ ಅನುಕಂಪದಿಂದಲುˌ ತೀಕ್ಷ್ಣವಾದ ನುಡಿಗಳಿಂದಲೂ ತನ್ನ ಅನೇಕ ವಚನಗಳಲ್ಲಿ ಆಕ್ಷೇಪಿಸುತ್ತಾಳೆ.

ತನ್ನ ತನುˌಮನಗಳೆರಡೂ ದೇವನಿಗೆ ಅರ್ಪಿತವೆಂದು ಬಗೆದು ದೈವತ್ವದಲ್ಲಿ ಸಂಪೂರ್ಣ ತನ್ನನ್ನು ಹುದುಗಿಸಿಕೊಳ್ಳುವ ಅನನ್ಯ ಪರಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಎಂತಹ ಕಠಿಣ ಸಂದರ್ಭದಲ್ಲಿಯೂ ತನ್ನ ದೇವನಲ್ಲದೆ ಕ್ಷಣಿಕ ವಿಷಯಗಳ ಕಡೆಗೆ ಕಣ್ಣೆತ್ತಿಯೂ ನೋಡದ ಅಕ್ಕ ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿಯೆ ಧ್ರಡಸಂಕಲ್ಪವನ್ನಿಟ್ಟುಕೊಂಡಿರುತ್ತಾಳೆ. ತಾನು ನಂಬಿದˌಹುಡುಕುತ್ತಿರುವ ದೇವನಲ್ಲದೆ ಬೇರೇನನ್ನೂ ಬೇಡವೆನ್ನುವ ಅಕ್ಕನ ಧ್ರಡಚಿತ್ತ ಈ ವಚನದಲ್ಲಿ ವಿವರಿಸಲ್ಪಟ್ಟಿದೆ:

“ಗಿರಿಯಲಲ್ಲದೆ ಹುಲು ಮೊರಡಿಯಲಾಡುವುದೆ ನವಿಲು?
ಕೊಳಕ್ಕಲ್ಲದೆ ಕಿರಿವಳ್ಳಕೆಳಸುವುದೆ ಹಂಸೆ?
ಮಾಮರ ತಳಿತಲ್ಲದೆ ಸ್ವರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳೆಸುವುದೆ ಭ್ರಮರ?
ಎನ್ನ ದೇವ ಚೆನ್ನಮಲ್ಲಿ ಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ? ಪೇಳಿರೆ, ಕೆಳದಿಯರಿರಾ.”

ದೇವನನ್ನು ಕಾಣದ ವಿರಹ ವೇದನೆಯಿಂದ ಅಕ್ಕನ ಅಂತರಂಗದ ಭಾವಗಳು ಕೆರಳಿˌ ತೀವ್ರತರ ಭಕ್ತಿಯ ಆವೇಶದಲ್ಲಿ ಬಳಲುವುದುˌ ಆ ದೇವನನ್ನು ತನಗೆ ತೋರೆಂದು ಕಂಡಕಂಡವರಿಗೆ ಬಿನ್ನೈಪುದು ನೋಡಿದಾಗ ದೇವನ ಹುಡುಕಾಟದಲ್ಲಿ ಆಗುವ ಆಕೆಯ ಮನಸ್ಸಿನ ಉದ್ವೇಗವನ್ನು ಕಾಣಬಹುದು. ಚನ್ನಮಲ್ಲಿಕಾರ್ಜುನನಲ್ಲದೆ ಅನ್ಯ ವಿಷಯಕ್ಕೆಳಸದ ಆಕೆಯ ಮಾನಸಿಕ ದೃಡಭಾವ ಮತ್ತು ದೇವನನ್ನು ಶೋಧಿಸುವ ಆಕೆಯ ಅನನ್ಯ ಆತ್ಮವಿಶ್ವಾಸ ಈ ವಚನದಲ್ಲಿ ನಾವು ಸ್ಪಷ್ಟವಾಗಿ ಗುರುತಿಸಬಹುದು. ಮಹಾದೇವಿಯಕ್ಕ ಕಾಯದ ಬಾಹ್ಯ ಸೌಂದರ್ಯವನ್ನೆಂದಿಗೂ ನೆಚ್ಚಿದವಳಲ್ಲ. ಅಂತರಂಗದ ಸೌಂದರ್ಯದ ಮುಂದೆ ಬಹಿರಂಗದ ಸೌಂದರ್ಯ ಏನೂ ಅಲ್ಲ ಎಂದೇ ಆಕೆಯ ಅಭಿಮತ. ಕಾಯದ ಮೇಲಿನ ಬಟ್ಟೆಯನೆಲ್ಲ ಕಳಚಿಕೊಂಡ ಅಕ್ಕ ತನ್ನ ನೀಳ ಕೂದಲುಗಳಿಂದ ಒಂದಷ್ಟು ದೇಹವನ್ನು ಮುಚ್ಚಿಟ್ಟುಕೊಂಡು ಪರ್ಯಟನೆಯಲ್ಲಿ ತೊಡಗುತ್ತಾಳೆ.

ಬೆತ್ತಲೆ ತಿರುಗುವ ಆಕೆಯ ಸ್ಥಿತಿಯನ್ನು ನೋಡಿ ಲೋಕದ ಸಾಮಾನ್ಯ ಜನರು ಅವಗಣನೆಯಿಂದ ನೋಡುತ್ತಾರೆ. ತನ್ನ ಅರ್ಥಪೂರ್ಣ ವಚನಗಳ ಮೂಲಕ ಅಂಥ ಅವಗಣನೆಗಳಿಗೆ ಆಕೆ ಉತ್ತರಿಸುತ್ತ ಹೋಗುತ್ತಾಳೆ. ಮಿರಮಿರನೆ ಮಿಂಚುವ ದೇಹದ ಅಂದಚಂದ ಶಾಸ್ವತವಾದ ಆತ್ಮಸಂಯಮದ ಮುಂದೆ ಕ್ಷಣಿಕವಾದದ್ದೆನ್ನು ಅಭಿಮತ ಈ ಕೆಳಗಿನ ವಚನದಲ್ಲಿ ಹೀಗೆ ವಿಷದಿಸಲಾಗಿದೆ:

“ಕೈ ಸಿರಿಯ ದಂಡವ ಕೊಳಬಹುದಲ್ಲದೆˌ ಮೈಸಿರಿಯ
ದಂಡವನ್ನು ಕೊಳಲುಂಟೆ?
ಉಟ್ಟಂತಹ ಉಡುಗೆ ತೊಡುಗೆಯನ್ನೆಲ್ಲ ಸೆಳೆದುಕೊಳಬಹುದಲ್ಲದೆ ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ?
ಚೆನ್ನಮಲ್ಲಿಕಾರ್ಜುನದೇವರ
ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ
ಹಂಗೇಕೊ ಮರುಳೆ?”

ಕೈಯಲ್ಲಿರುವ ಸಿರಿ ಸಂಪತ್ತನ್ನು ಕಿತ್ತಿಕೊಳ್ಳಬಹುದಲ್ಲದೆ ಮೈಯ ಸಿರಿಯನ್ನು ಯಾರೂ ಅಪಹರಿಸರು. ಉಟ್ಟ ಬಟ್ಟೆಯನ್ನು ಬಿಚ್ಚಿ ಹೊತ್ತೊಯ್ಯಬಹುದಲ್ಲದೆ ಜ್ಞಾನದಿಂದ ಮುಚ್ಚಲ್ಪಟ್ಟ ಬೆತ್ತಲೆಯನ್ನು ಯಾರೂ ಕಳಚಲಾರರು. ದೇವನ ಅರಿವೆಂಬ ಬೆಳಗಿನ ಬಟ್ಟೆಯುಟ್ಟು ಎಲ್ಲ ಸಂಕೋಚವ ಕಳಚಿದವಳಿಗೆ ಈ ಭೌತಿಕದ ಉಡುಪುಗಳ ಹಂಗೇಕೆ ಎಂದು ಅಕ್ಕ ಮಾರ್ಮಿಕವಾಗಿ ಪ್ರಶ್ನಿಸುವ ಪರಿ ಅಜ್ಞಾನದ ಶೃಂಗಾರ ಉಡುಪುಗಳಿಗಿಂತ ಸುಜ್ಞಾನದ ಅರಿವಿನ ಉಡುಪು ಶ್ರೇಷ್ಠ ಎನ್ನುವ ಸಂದೇಶವನ್ನು ನೀಡುತ್ತದೆ. ಕೌಶಿಕನೊಡನೆ ಒತ್ತಾಯದ ಮದುವೆಗೊಳಪಟ್ಟ ಅಕ್ಕ ಆತನ ಕಾಮಾತುರ ನಡವಳಕೆಯಿಂದ ರೋಷಿˌ ಹೇಸಿ ತಾನುಟ್ಟ ಸೀರೆಯನ್ನು ಕಳೆದೆಸೆದು ಹೀಗೆ ನುಡಿಯುತ್ತಾಳೆ:

“ಉಟ್ಟ ಸೀರೆಯ ಸೀಳಿˌ
ತೊಟ್ಟ ತೊಡುಗೆಯ ಮುರಿದುˌ
ಬಿಟ್ಟಿಹೆನು ನಾನು ಬಿಡುಮುಡಿಯ ಎಲೆ ದೇವಾ
ಕೊಟ್ಟಿಹೆನು ಎನ್ನ ತನುಮನವ…..”

ಏರು ಜೌವ್ವನೆಯಾದ ಅಕ್ಕ ನಿರ್ಭಾವದಿಂದˌ ವೈರಾಗ್ಯದಿಂದ ದಿಟ್ಟ ದಿಗಂಬರೆಯಾಗಿ ನಿಂತ ಪರಿಯನ್ನು ಕಂಡು ಕೌಶಿಕ ದಿಗ್ಮೂಢನಾಗುತ್ತಾನೆ. ಅಲ್ಲಿಂದ ಕಲ್ಯಾಣದ ಅನುಭವ ಮಂಟಪಕ್ಕೆ ಬಂದು ಅಲ್ಲಮರ ಕಠೋರ ಪರೀಕ್ಷೆಯನ್ನು ಶಾಂತಚಿತ್ತದಿಂದ ಎದುರಿಸಿ ಗೆದ್ದು ಬಸವಾದಿ ಶರಣರ ಗೌರವಾದರಗಳಿಗೆ ಪಾತ್ರಳಾಗುತ್ತಾಳೆ. ದೃಢಸಂಕಲ್ಪಿಯಾಗಿದ್ದ ಅಕ್ಕನ ಕುಂಡಲಿನಿ ಶಕ್ತಿ ಜಾಗ್ರತಾವಸ್ಥೆಯಿಂದ ಆಜ್ಞಾಚಕ್ರವನ್ನು ಮುಟ್ಟಿದ್ದ ಕಾರಣದಿಂದಲೇ ಆಕೆ ಏಕಾಂಗಿಯಾಗಿ ದಟ್ಟ ಕಾನನವನ್ನು ದಾಟಿ ಶರಣರಿರುವ ಕಲ್ಯಾಣ ನಗರವನ್ನು ಬಂದು ಸೇರುತ್ತಾಳೆ. ಅನವರತ ದೇವನ ಅನ್ವೇಷಣೆಯಲ್ಲಿ ಹಸಿವುˌ ತೃಷೆˌ ನಿದ್ರೆˌ ಮನಸಿಜನ ಕಾಮನೆಗಳನ್ನು ತೊರೆದು ಊರ್ಧ್ವಮುಖಿಯಾಗಿ ಉದಾತ್ತೀಕರಣದ ಪರಮೋಚ್ಛ ಶಿಖರ ತಲುಪಿˌ ಪರಮಾನಂದದ ಅನ‌ಭಾವವನ್ನು ಅನುಭವಿಸುತ್ತಾಳೆ.
“ಚೆನ್ನಮಲ್ಲಿಕಾರ್ಜುನನ ಕೈವಿಡಿದು ಲಜ್ಜೆಗೆಟ್ಟೆನು ಆನು” ಎಂಬಲ್ಲಿಗೆ ಅಕ್ಕ ಭಕ್ತನೊಬ್ಬ ದೈವತ್ಪಕ್ಕೇರಿದ ಮಧುರ ಪಕ್ವ ಭಾವವನ್ನು ಮುಟ್ಟಿ ನಿಲ್ಲುತ್ತಾಳೆ.

ಹಗಲಿರಳು ಲಿಂಗಾಂಗಯೋಗ ಸಾಧಿಸಿ ಚೆನ್ನಮಲ್ಲಿಕಾರ್ಜುನನ ಸತಿಯಾಗಿ ನಿರ್ಗುಣ ದೇವನ ಒಲುಮೆಯ ಪಡೆದುˌ ತೂರ್ಯಾವಸ್ಥೆಯ ಅನುಭವವನ್ನುಂಡುˌ ಸಹಸ್ರಾರ ಚಕ್ರದಲ್ಲಿ ಕೋಟಿ ರವಿಶಶಿಯ ಚಿದ್ಬೆಳಗು ಕಂಡು ಆನಂದ ಪುಳಕಿತರಾಗುತ್ತಾಳೆ. ಜೀವನ ಸಾರ್ಥಕತೆಯ ದಿವ್ಯಾನುಭವ ಹೊಂದುತ್ತಾಳೆ. ಅಕ್ಕನಲ್ಲಾದ ಪರಿವರ್ತನೆ: ಕಲ್ಯಾಣದಲ್ಲಿ ಶರಣರ ಸಾಂಗತ್ಯ ಅಕ್ಕನಿಗೆ ಅದಮ್ಯ ಚೈತನ್ಯ ನೀಡುತ್ತದೆ. ಬಸವಣ್ಣನವರ ದರ್ಶನದಿಂದ ಅಕ್ಕ ಆನಂದಿತಳಾಗಿ ಹೀಗೆ ನುಡಿಯುತ್ತಾಳೆ:

“ಅಯ್ಯಾ ˌನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲ ಹರಿಯಿತ್ತುˌ
ಅಯ್ಯಾ ˌನಿಮ್ಮ ಸಜ್ಜನ ಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದುˌ
ಚನ್ನಮಲ್ಲಿಕಾರ್ಜುನಯ್ಯˌ
ನಿಮ್ಮ ಶರಣ ಸಂಗನ ಬಸವಣ್ಣನ ಪಾದವ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯ.”

ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣರ ಸಾಮಾಜಿಕ ಹಾಗು ಧಾರ್ಮಿಕ ಚಟುವಟಿಕೆಗಳು ಅಕ್ಕನ ಅರಿವಿನ ಅಘಾದತೆಯನ್ನು ವಿಸ್ತರಿಸಿಕೊಳ್ಳಲು ಸಹಾಯವಾಗುತ್ತವೆ. ತಾನು ಕಲ್ಯಾಣಕ್ಕೆ ಬಂದದ್ದು ಸಾರ್ಥಕ ಭಾವವೆಂದೊಪ್ಪಿಕೊಂಡ ಅಕ್ಕ ಬಸವಣ್ಣನವರನ್ನೇ ತನ್ನ ಗುರುವೆಂದು ನಿರ್ಧರಿಸಿದ್ದು ಈ ಕೆಳಗಿನ ವಚನದಿಂದ ಸ್ಪಷ್ಟವಾಗುತ್ತದೆ:

“ನಿಮ್ಮ ಅಂಗದಾಚಾರವ ಕಂಡು
ಎನಗೆ ಲಿಂಗ ಸಂಗವಾಯಿತ್ತಯ್ಯˌ
ಬಸವಣ್ಣˌನಿಮ್ಮ ಮನದ ಸುಜ್ಞಾನವ ಕಂಡು
ಎನಗೆ ಜಂಗಮ ಸಂಬಂಧವಾಯಿತಯ್ಯˌ
ಬಸವಣ್ಣˌನಿಮ್ಮ ಸದ್ಭಕ್ತರ ತಿಳಿದು
ಎನಗೆ ನಿಜವು ಸಾಧ್ಯವಾಯಿತಯ್ಯˌ
ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು
ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತ್ತಿದ್ದೆನು ಕಾಣಾ ಸಂಗನಬಸವಣ್ಣ.”

ಆರಂಭದಿಂಲೂ ಇಹದ ಐಭೋಗಗಳನ್ನು ನಿರಾಕರಿಸುತ್ತ ಪಾರಮಾರ್ಥದಲ್ಲಿ ಆಸಕ್ತಳಾಗಿದ್ದ ಅಕ್ಕ ಸಂಸಾರದ ಬಗ್ಗೆ ವೈರಾಗ್ಯ ತಾಳಿ ದೇವನನ್ನು ಭೌತಿಕವಾಗಿ ದರ್ಶಿಸಲು ಹಂಬಲಿಸುತ್ತಿರುತ್ತಾಳೆ. ಕಲ್ಯಾಣಕ್ಕೆ ಬಂದು ಶರಣರ ಸಾಂಗತ್ಯದಲ್ಲಿ ದೇವರ ಬಗೆಗಿನ ಅಕ್ಕನ ಗ್ರಹಿಕೆಯಲ್ಲಿ ಬದಲಾವಣೆ ಕಾಣುತ್ತದೆ. ಬಹಿರಂಗದಲ್ಲಿ ದೇವನ ಭೌತಿಕ ದರ್ಶನದ ತುಡಿತವು ಅಸಾಧ್ಯವೆನ್ನುವ ಅರಿವು ಶರಣರ ಅನುಭಾವದ ನಿಲುವುಗಳಿಂದ ಅಕ್ಕ ಕಂಡುಕೊಳ್ಳುವಲ್ಲಿ ಸಫಲಳಾಗುತ್ತಾಳೆ. ಅಂತರಂಗದಲಲ್ಲದೆ ದೇವರನ್ನು ಬಹಿರಂಗದಲ್ಲಿ ಹುಡುಕಬಾರದೆಂಬ ಬಸವಾದಿ ಶರಣರ ನಿಲುವು ಅಕ್ಕನ ಮೇಲೆ ತೀರ್ವ ಪರಿಣಾಮ ಬೀರಿ ಅವಳಲ್ಲಿ ಗುಣಾತ್ಮಕ ಪರಿವರ್ತನೆಗೆ ಎಡೆಮಾಡಿಕೊಡುತ್ತದೆ. ಆಗಿನಿಂದ ಅಕ್ಕ ಅಂತರ್ಮುಖಿಯಾಗುತ್ತ ಅಂತರಂಗದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಅನುಭಾವದ ಕಠಿಣ ಆಚರಣೆಗಳಲ್ಲಿ ತೊಡಗಿಕೊಳ್ಳುತ್ತಾಳೆ.

ಅಧ್ಯಾತ್ಮದ ಪರಿಪಕ್ವತೆಯನ್ನು ಪಡೆಯುತ್ತ ಕಲ್ಯಾಣದಲ್ಲಿ ಮುಂದಾಗುವ ವಿಪ್ಲವದ ಮುನ್ಸೂಚನೆಯನ್ನು ಗ್ರಹಿಸಿ ಶ್ರೀಶೈಲದ ಕಡೆಗೆ ಪಯಣ ಬೆಳೆಸಲು ನಿರ್ಧರಿಸುತ್ತಾಳೆ. ಅಕ್ಕ ಕಲ್ಯಾಣದ ಅನುಭವ ಮಂಟವನ್ನು ಸಂಧರ್ಶಿಸಿದ ಘಟನೆ ಇಡೀ ಶರಣ ಚಳುವಳಿಯ ಮಹೋನ್ನತ ಪ್ರಸಂಗವಾಗಿ ಅಚ್ಚೊತ್ತಿದೆ. ವ್ಯೋಮಕಾಯದ ಮಹಾ ಜ್ಞಾನಿ ಅಲ್ಲಮರ ತೀಷ್ಣ ಪರೀಕ್ಷೇಯನ್ನು ಗೆದ್ದ ಅಕ್ಕನ ಅಘಾದ ಅಧ್ಯಾತ್ಮ ಜ್ಞಾನವನ್ನು ˌ ಘಾಡವಾದ ಅನುಭಾವವನ್ನು ˌ ದೇವನ ಶೋಧನೆಯ ಉತ್ಕಟ ತುಡಿತವನ್ನು ಕಂಡು ಇಡೀ ಶರಣಸಂಕುಲ ಬೆಕ್ಕಸ ಬೆರಗಾಗಿರುತ್ತದೆ. ಸ್ವಲ್ಪ ದಿನಗಳ ಕಾಲ ಶರಣರ ಸಾಂಗತ್ಯದಲ್ಲಿದ್ದ ಅಕ್ಕ ಪ್ರತಿದಿನ ಅನುಭವ ಮಂಟಪದ ಜ್ಞಾನಸಂವಾದದಲ್ಲಿ ಭಾಗವಹಸಿ ಪರಿಪಕ್ವತೆಯನ್ನು ಪಡೆಯುತ್ತಾಳೆ. ದೇವನನ್ನು ಕಾಣಬೇಕೆನ್ನುವ ತೀವ್ರ ಬಯಕೆ ಆಕೆಯ ಕಲ್ಯಾಣದ ವಾಸ್ತವ್ಯವನ್ನು ಕೊನೆಗೊಳಿಸುತ್ತದೆ. ದೇವನ ಅಸ್ಥಿತ್ವದ ಬಗೆಗಿರುವ ಆಕೆಯ ವಿಶಾಲ ಗ್ರಹಿಕೆ ಶರಣರ ಸಾಂಗತ್ಯದಿಂದ ಮತ್ತಷ್ಟು ವಿಶಾಲತೆ ಪಡೆದುಕೊಳ್ಳುತ್ತದೆ.

ಸ್ತ್ರೀ ಸಾಧಕಿಯಾಗಿ ಜೀವನದಲ್ಲಿ ಪರಿಪಕ್ವತೆ ಪಡೆಯುವ ದುರ್ಗಮ ಹಾದಿಯಲ್ಲಿ ಅಕ್ಕನು ಷಡ್ವಿಧೇಂದ್ರಿಯಗಳನ್ನು ಗೆಲಿದುˌ ಮನೋಪ್ರಕೃತಿಯನಳಿದುˌ ಅಧ್ಯಾತ್ಮದ ಅನುಭಾವವನ್ನು ಸಂಪೂರ್ಣ ಸಾಧಿಸುವ ಬಗೆ ಮಹೋನ್ನತವೆನ್ನಿಸುತ್ತದೆ. ತಾನೊಬ್ಬ ಸ್ತ್ರೀಯಾಗಿˌ ಸ್ತ್ರೀಸಂವೇದನೆಗಳ ಬಗ್ಗೆ ಕಾಳಜಿಯನ್ನು ಹೊಂದಿದವಳಾಗಿˌ ಸ್ತ್ರೀಯ ಘನತೆಯನ್ನು ಅನುಭವ ಮಂಟಪದಲ್ಲಿ ಎತ್ತರಕ್ಕೆ ಎತ್ತಿಹಿಡಿದ ಪರಿಯನ್ನು ಕಂಡು ಸಮಸ್ತ ಪುರುಷ ಶರಣ ಸಂಕುಲ ಅಕ್ಕನಿಗೆ ಕೈಮುಗಿದು ನಮಿಸುತ್ತದೆ. ತನ್ನ ಕೊನೆಯ ದಿನಗಳನ್ನು ಚನ್ನಮಲ್ಲಿಕಾರ್ಜುನನೊಡನೆ ಅನುಸಂಧಾನಕ್ಕಾಗಿ ಅಕ್ಕ ಶ್ರೀಶೈಲದ ಕಡೆಗೆ ತನ್ನ ಪಯಣವನ್ನು ಮುಂದುವರೆಸುತ್ತಾಳೆ. ಶ್ರೀಶೈಲದ ಕದಳಿ ಬನದಲ್ಲಿ ಭಗವಂತನ ಆತ್ಮ ಸಾಕ್ಷತ್ಕಾರದ ನಿರೀಕ್ಷೆಯಲ್ಲಿ ಹೀಗೆ ಹೇಳುತ್ತಾಳೆ:

“ಕರ್ಮವೆಂದ ಕದಳಿ ಎನಗೆ
ಕಾಯವೆಂಬ ಕದಳಿ ನಿಮಗೆˌ
ಮಾಟವೆಂಬ ಕದಳಿ ಬಸವಣ್ಣಂಗೆ
ಭಾವವೆಂಬ ಕದಳಿ ಚೆನ್ನಬಸವಣ್ಣಂಗೆˌ
ಬಂದ ಬಂದಾ ಭಾವ ಸಲೆ ಸಂದಿತ್ತುˌ
ಎನ್ನಂಗದ ಅವಸಾನ ಹೇಳಾˌ ಚನ್ನಮಲ್ಲಿಕಾರ್ಜುನ.”

ಹೀಗೆ ತನ್ನಂಗವನ್ನು ಚಿದ್ಘನಲಿಂಗದಲ್ಲಿ ನೆಲೆಗೊಳಿಸಿ ನಿಷ್ಪತ್ತಿಯಾಗಿಸಿˌ ಸುಜ್ಞಾನ ಪ್ರಕಾಶದಲ್ಲಿ ಅವಗ್ರಹಿಸಿˌ ನಶ್ವರವಾದ ಜೀವನವನ್ನು ದೇವನ ಸಾಕ್ಷಾತ್ಕಾರದಿಂದ ಅರ್ಥಪೂರ್ಣಗೊಳಿಸಿಕೊಂಡು ಅಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ ಪಯಣಿಸುತ್ತಾಳೆ. ಕನ್ನಡದ ಮಣ್ಣಿನ ಹೆಮ್ಮೆಯ ಮಗಳು ಅನಂತನಲ್ಲಿ ಲೀನವಾಗುತ್ತ ಪರಿಪೂರ್ಣತೆಯ ಮಾರ್ಗವನ್ನು ಜಗತ್ತಿಗೆ ತೋರಿಸಿದ ಪ್ರತಿಮೆಯಾಗುತ್ತಾಳೆ. ಸ್ತ್ರೀಕುಲದ ಹೆಮ್ಮೆಯ ಸಂಕೇತವಾಗುತ್ತಾಳೆ.

~ ಡಾ. ಜೆ ಎಸ್ ಪಾಟೀಲ.

Previous Post

ಕೋಮುವಾದ ಹೆಸರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

Next Post

ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

Related Posts

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
0

ಸಿದ್ದರಾಮಯ್ಯ (Siddaramaiah) ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು (Sonia gandhi) ಮೊದಲು ಭೇಟಿ ಮಾಡಿಸಿದವನೇ ನಾನು.ಆದ್ರೆ ಅವನ ಗ್ರಹಚಾರ ಚೆನ್ನಾಗಿತ್ತು...

Read moreDetails

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada