ದೇಶದ ಭದ್ರತೆ, ಸಾರ್ವಭೌಮತೆ , ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸಭ್ಯತೆಗೆ ಹಾನಿಯುಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಸರ್ಕಾರಿ ಮಾನ್ಯತೆಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಹೌದು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು-2022 ಪ್ರಕಾರ, ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ಮತ್ತು ಇದೇ ಮೊದಲ ಬಾರಿ ಆನ್ಲೈನ್ ಸುದ್ದಿ ಮಾಧ್ಯಮಗಳಿಗೂ ಮಾನ್ಯತೆ ನೀಡಲು ಆರಂಭಿಸುವ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಶಿಸ್ತು, ನೈತಿಕತೆ, ಗೌರವ, ವಿದೇಶಗಳೊಂದಿಗಿನ ಸಂಬಂಧಕ್ಕೆ ಅಪಚಾರ, ನ್ಯಾಯಾಂಗ ನಿಂದನೆ, ನಕಲಿ ಮಾಹಿತಿ, ಮಾನನಷ್ಟ, ಅಪರಾಧಕ್ಕೆ ಪ್ರಚೋದನೆ ನೀಡುವಂತಹ ಪ್ರಕರಣಗಳಲ್ಲಿ ತೊಡಗಿಕೊಂಡರೂ ಕೂಡ ಪತ್ರಕರ್ತರ ಮಾನ್ಯತೆ ರದ್ದುಪಡಿಸುವುದಕ್ಕೆ ಹೊಸ ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿದೆ.
ಈ ಮಾರ್ಗಸೂಚಿಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿಸಿದ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳ ಮಾನ್ಯತೆಯನ್ನು ಗರಿಷ್ಠ ಐದು ವರ್ಷಗಳವರೆಗೆ, ಕನಿಷ್ಠ ಎರಡು ವರ್ಷಗಳವರೆಗೆ ವಜಾಗೊಳಿಸಲು ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಕಮಿಟಿ ನಿರ್ಧರಿಸಬಹುದಾಗಿದೆ.
ಮಾನ್ಯತೆ ಪಡೆದ ಪತ್ರಕರ್ತರು ತಮ್ಮ ವಿಸಿಟಿಂಗ್ ಕಾರ್ಡ್, ಸಾಮಾಜಿಕ ಜಾಲತಾಣದ ಪ್ರೊಫೈಲ್, ಲೆಟರ್ಹೆಡ್ ಅಥವಾ ಇನ್ನಾವುದೇ ಪ್ರಕಟಿತ ಕೃತಿಯಲ್ಲಿ ‘ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತ’ ಎಂದು ಬರೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಇದೇ ಮೊದಲ ಬಾರಿ ಡಿಜಿಟಲ್ ನ್ಯೂಸ್ ವೆಬ್ಸೈಟುಗಳು ಕೂಡ ಮಾನ್ಯತೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಅಂತಹ ನ್ಯೂಸ್ ವೆಬ್ಸೈಟ್ ನಡೆಸುವವರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ 18ಕ್ಕೆ ಅನುಗುಣವಾಗಿ ಮಾಹಿತಿ ಸಲ್ಲಿಸಬಹುದು. ಡಿಜಿಟಲ್ ಮಾಧ್ಯಮ ಕನಿಷ್ಠ ಒಂದು ವರ್ಷದಿಂದ ಅಸ್ತಿತ್ವದಲ್ಲಿರಬೇಕು, ವೆಬ್ಸೈಟಿಗೆ ಕಳೆದ ಆರು ತಿಂಗಳಿನಲ್ಲಿ ಪ್ರತಿ ತಿಂಗಳು ಎಷ್ಟುಮಂದಿ ಭೇಟಿ ನೀಡಿದ್ದಾರೆಂಬುದನ್ನು ಆಡಿಟರ್ ಮೂಲಕ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ. ವೆಬ್ಸೈಟ್ ಭಾರತದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು, ವರದಿಗಾರರು ದೆಹಲಿ ಅಥವಾ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ನೆಲೆಗೊಂಡಿರಬೇಕು ಎಂದು ಸ್ಪಷ್ಟ ಪಡಿಸಲಾಗಿದೆ. ಅರ್ಜಿದಾರರು ಸಲ್ಲಿಸಿದ ಮಾಹಿತಿಯು ಸುಳ್ಳು ಎಂದು ಕಂಡುಬಂದಲ್ಲಿ, ಮುಂದಿನ ಮೂರು ವರ್ಷಗಳವರೆಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವ ಅಕಾರವನ್ನು ನಿರ್ಬಂಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ವಾತಾ ಮತ್ತು ಪ್ರಸಾರ ಸಚಿವಾಲಯ ಪಿಐಬಿ ಪ್ರಧಾನ ನಿರ್ದೇಶಕ ಜನರಲ್ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಮಾಧ್ಯಮ ಮಾನ್ಯತೆ ಸಮಿತಿ ರಚಿಸಲಿದ್ದು, ಅದರಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ 25 ಸದಸ್ಯರು ಕೆಲಸ ನಿರ್ವಹಿಸಲಿದ್ದಾರೆ. ಸಮಿತಿ ತನ್ನ ಮೊದಲ ಸಭೆಯ ದಿನದಿಂದ ಎರಡು ವರ್ಷಗಳ ಕಾಲಮಿತಿಯನ್ನು ಹೊಂದಿರಲಿದೆ. ನಾಮನಿರ್ದೇಶನಗೊಂಡ ಐದು ಸದಸ್ಯರನ್ನೊಳಗೊಂಡ ಉಪ ಸಮಿತಿಯು ಮಾನ್ಯತೆ ಪ್ರಕರಣಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.