ಚೀನಾದ ಗುಪ್ತಚರ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಆರೋಪ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿ ಮೂಲದ ಹವ್ಯಾಸಿ ಪತ್ರಕರ್ತನನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
ಬಂಧಿತ ಹವ್ಯಾಸಿ ಪತ್ರಕರ್ತ ರಾಜೀವ್ ಶರ್ಮಾನನ್ನು ಜುಲೈ 1ರಂದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು. ನ್ಯಾಯಾಲಯವು ಶರ್ಮಾನನ್ನು ಏಳು ದಿನಗಳವರೆಗೆ ಇ.ಡಿ ಕಸ್ಟಡಿಗೆ ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
‘ಚೀನಾದ ಗುಪ್ತಚರ ಅಧಿಕಾರಿಗಳಿಗೆ ಗೋಪ್ಯ ಮತ್ತು ಸೂಕ್ಷ್ಮ ಮಾಹಿತಿ ಒದಗಿಸಿದ್ದಕ್ಕಾಗಿ, ಚೀನಾ ಮೂಲದ ಶೆಲ್ ಕಂಪನಿಯೊಂದರ ಮೂಲಕ ಹವಾಲ ಹಣವನ್ನು ಶರ್ಮಾ ಮತ್ತು ಇತರ ಅಪರಿಚಿತ ವ್ಯಕ್ತಿಗಳು ಸಂಭಾವನೆಯಾಗಿ ಪಡೆದಿದ್ದಾರೆ’ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ರಾಜೀವ್ ಶರ್ಮಾ ಜೊತೆ ಚೀನಾದ ಮಹಿಳೆ ಕಿನ್ ಶಿ ಮತ್ತು ಅವರ ನೇಪಾಳದ ಸಹವರ್ತಿ ಶೇರ್ ಸಿಂಗ್ ಜೊತೆಗೆ ಬಂಧಿಸಲಾಗಿದೆ.
ಪ್ರಕರಣವನ್ನು ಪೊಲೀಸ್ ಉಪ ಆಯುಕ್ತ (ವಿಶೇಷ ತನಿಖಾ ದಳ) ಸಂಜೀವ್ ಯಾದವ್ ತನಿಖೆ ನಡೆಸುತ್ತಿದ್ದಾರೆ. ಶೆಲ್ ಕಂಪೆನಿಗಳ ಮೂಲಕ ಶರ್ಮಾ ದೊಡ್ಡ ಮೊತ್ತದ ಹಣವನ್ನು ಪಾವತಿಸಿದ್ದಕ್ಕಾಗಿ ಚೀನಾದ ಮಹಿಳೆ ಮತ್ತು ಅವಳ ನೇಪಾಳದ ಸಹಾಯಕನನ್ನು ಸಹ ಬಂಧಿಸಲಾಗಿದೆ “ಎಂದು ಡಿಸಿಪಿ ಸಂಜೀವ್ ಯಾದವ್ ಹೇಳಿದ್ದಾರೆ.
ಚೀನಾದ ಗುಪ್ತಚರ ಸಂಸ್ಥೆಗಳು ಶರ್ಮಾ ಅವರಿಂದ ‘ಸೂಕ್ಷ್ಮ ಮಾಹಿತಿ’ ಕೇಳಿದ್ದವು ಮತ್ತು ದೊಡ್ಡ ಮೊತ್ತದ ಹಣವನ್ನು ನೀಡಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಇತರ ದೋಷಾರೋಪಣೆ ಮತ್ತು ಸೂಕ್ಷ್ಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಯುವ್ಯ ದೆಹಲಿಯ ಪಿತಾಂಪುರ ನಿವಾಸಿ ಶರ್ಮಾ ಅವರನ್ನು ವಿಶೇಷ ತನಿಖಾ ದಳ ಸೆಪ್ಟೆಂಬರ್ 14 ರಂದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ರಹಸ್ಯ ಕಾಯ್ದೆ ಪ್ರಕರಣದಲ್ಲಿ ಎಫ್ಐಆರ್ (230/2020) ದಾಖಲಿಸಲಾಗಿದೆ.
“ಶರ್ಮಾ ಕೆಲವು ರಕ್ಷಣಾ ಸಂಬಂಧಿತ ವರ್ಗೀಕೃತ ದಾಖಲೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದ್ದು ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ” ಎಂದು ಅನಾಮಧೇಯತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ ಎಂದು ದಿ ಟಮ್ಸ್ ನೌ.ಕಾಂ ವರದಿ ಮಾಡಿದೆ.
ಶರ್ಮಾ ವಿರುದ್ಧದ ಇ.ಡಿ ಪ್ರಕರಣ ಆಧರಿಸಿ ದೆಹಲಿ ಪೊಲೀಸರು ಅಧಿಕೃತ ರಹಸ್ಯ ಕಾಯ್ದೆ (ಒಎಸ್ಎ) ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಕಳೆದ ವರ್ಷವೇ ಎಫ್ಐಆರ್ ದಾಖಲಿಸಿದ್ದರು. ಕಳೆದ ವರ್ಷದ ಸೆಪ್ಟೆಂಬರ್ 14ರಂದು ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಭಾರತೀಯ ಸೇನೆಯ ನಿಯೋಜನೆ ಮತ್ತು ದೇಶದ ಗಡಿ ಕಾರ್ಯತಂತ್ರದ ಬಗ್ಗೆ ಚೀನಾದ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ ಆರೋಪ ಶರ್ಮಾ ಮೇಲೆ ಇದೆ.
ಬಂಧನಕ್ಕೊಳಗಾದ 60 ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪತ್ರಕರ್ತನಿಗೆ 2020ರ ಡಿಸೆಂಬರ್ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು.
ಶರ್ಮಾ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ‘ರಾಜೀವ್ ಕಿಷ್ಕಿಂಧಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಬಂಧನದ ದಿನ ಅವರು ಎರಡು ವೀಡಿಯೊಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಒಂದು ಗಡಿ ಉದ್ವಿಗ್ನತೆ ಬಗ್ಗೆ ಇದ್ದರೆ, ಇನ್ನೊಂದರಲ್ಲಿ ಸದ್ಯದ ಪತ್ರಿಕೋದ್ಯಮದ ಸ್ಥಿತಿಯ ಕುರಿತು ವಿವರಗಳಿವೆ.